
ಬೆಂಗಳೂರು (ಏ.23) ರಾಜ್ಯದಲ್ಲಿ ಹಿಂದಿ ಭಾಷೆಗೆ ಪರೀಕ್ಷೆಯಲ್ಲಿ ಅಂಕದ ಬದಲು ಗ್ರೇಡ್ ನೀಡುವ ಮೂಲಕ ಹೊಸ ಪದ್ಧತಿ ಜಾರಿಗೊಳಿಸಲು ಪ್ರಯತ್ನಿಸಿದ ಕಾಂಗ್ರೆಸ್ ಸರ್ಕಾರದ ಪ್ರಯತ್ನಕ್ಕೆ ಹೈಕೋರ್ಟ್ ತಡೆ ನೀಡಿದೆ. ಭಾರಿ ಚರ್ಚೆ, ವಿವಾದಕ್ಕೂ ಕಾರಣವಾಗಿದ್ದ ಈ ನಿರ್ಧಾರವನ್ನು ಹೈಕೋರ್ಟ್ ಮಾನ್ಯ ಮಾಡಲಿಲ್ಲ. ಇಷ್ಟೇ ಅಲ್ಲ, ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟಡ್ ಗರಂ ಆಗಿತ್ತು. ಪರೀಕ್ಷಾ ಅಧಿಸೂಚನೆ ಹೊರಡಿಸುವಾಗಲೇ ಗ್ರೇಡ್ ಪದ್ಧತಿ ಕುರಿತು ಪ್ರಕಟಿಸಬೇಕಿತ್ತು, ಪರೀಕ್ಷೆ ಮುಗಿದ ಬಳಿಕ ಈ ನಿರ್ಧಾರ ಯಾಕೆ ಎಂದು ಹೈಕೋರ್ಟ್, ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಜೊತೆಗೆ ಅಂಕ ಪದ್ಥತಿಯನ್ನೇ ಮುಂದುವರಿಸುವಂತೆ ಸೂಚಿಸಿದೆ.
ರಾಜ್ಯ ಸರ್ಕಾರ ಹಿಂದಿ ಸೇರಿದಂತೆ ತೃತೀಷ ಭಾಷೆಗಳಿಗೆ 100 ಅಂಕಗಳನ್ನು ನೀಡುವ ಬದಲು ಎ, ಬಿ,ಸಿ, ಡಿ ಗ್ರೇಡ್ ನೀಡುವ ಪದ್ಧತಿಗೆ ಮುಂದಾಗಿತ್ತು. ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದರು. ಈ ಗ್ರೇಡ್ ಅಂತಿಮ ಎಸ್‌ಎಸ್‌ಎಲ್‌ಸಿ ಶೇಕಡಾವಾರು ಅಂಕಗಳಲ್ಲಿ ಪರಿಗಣಿಸಲಾಗುವುದಿಲ್ಲ ಎಂದಿತ್ತು. 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿರುವ ನಡುವೆ ಸರ್ಕಾರದಿಂದ ಈ ಪ್ರಕಟಣೆ ಹೊರಬಿದ್ದಿತ್ತು. ಇದು ವಿದ್ಯಾರ್ಥಿಗಳಲ್ಲಿ ತೀವ್ರ ಗೊಂದಲ ಸೃಷ್ಟಿಸಿದ್ದು ಮಾತ್ರವಲ್ಲ, ಪೋಷಕರಲ್ಲಿ ಆತಂಕ ಹೆಚ್ಚಿಸಿತ್ತು. ದಿಢೀರ್ ಪರೀಕ್ಷಾ ಪದ್ಧತಿಯಲ್ಲಿನ ಬದಲಾವಣೆ ಶಿಕ್ಷಣ ತಜ್ಞರನ್ನು ಆಕ್ರೋಶಗೊಳಿಸಿತ್ತು.
ಸರ್ಕಾರದ ಈ ಮಹತ್ವದ ಬದಲಾವಣೆಯಲ್ಲಿ , ಒಟ್ಟು ಎಸ್‌ಎಸ್‌ಎಲ್‌ಸಿ ಅಂಕಗಳು 625 ರಿಂದ 525 ಕ್ಕೆ ಇಳಿಕೆ ಮಾಡಲಾಗುತ್ತದೆ. ಅಂದರೆ ಅಂತಿಮ ಅಂಕಗಳ ಲೆಕ್ಕಾಚಾರದಿಂದ ತೃತೀಯ ಭಾಷೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿತ್ತು.
ಕಳೆದ ಶೈಕ್ಷಣಿಕ ವರ್ಷದಲ್ಲಿ 1.65 ಲಕ್ಷ ವಿದ್ಯಾರ್ಥಿಗಳು ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ತೃತೀಯ ಭಾಷೆಗಳಿಂದ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ಹಾಗೂ ದ್ವಿಭಾಷಾ ಪದ್ಧತಿಯತ್ತ ಸಾಗಲು ಇದು ಮಹತ್ವದ ಹೆಜ್ಜೆಯಾಗಿದೆ. ಪ್ರಮುಖವಾಗಿ ವಿದ್ಯಾರ್ಥಿಗಳ ಮೇಲೆ "ಹಿಂದಿ ಹೇರಿಕೆ" ಆಗುತ್ತಿದೆ ಎಂದು ದೀರ್ಘಕಾಲದಿಂದ ದೂರುತ್ತಿದ್ದ ಕನ್ನಡ ಪರ ಸಂಘಟನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ ಎಂದಿತ್ತು.
ಏಪ್ರಿಲ್ 10, 2026 ರಂದು, ಅಂದರೆ ಪರೀಕ್ಷೆಗಳು ಮುಗಿದ 8 ದಿನಗಳ ನಂತರ ಸರ್ಕಾರವು ಈ ಗ್ರೇಡಿಂಗ್ ನೀತಿಗಾಗಿ ಕರಡು ಲಿಖಿತ ಆದೇಶವನ್ನು ಹೊರಡಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ರಮವು "ಹಿಂದಿ ವಿರೋಧಿ ಅಲ್ಲ", ಬದಲಿಗೆ ಭವಿಷ್ಯದಲ್ಲಿ ಕೇವಲ ಎರಡು ಭಾಷೆಗಳನ್ನು ಮಾತ್ರ ಎಸ್‌ಎಸ್‌ಎಲ್‌ಸಿ ಅಂಕಗಳಿಗೆ ಪರಿಗಣಿಸುವ ದೊಡ್ಡ ಯೋಜನೆಯ ಭಾಗವಾಗಿದೆ ಎಂದಿದ್ದರು. ರಾಜ್ಯದ ಮಕ್ಕಳ ಭವಿಷ್ಯದ ದೃಷ್ಟಿ ಹಾಗೂ ರಾಜ್ಯದಲ್ಲಿ ಕರ್ನಾಟಕ ಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದಿದ್ದರು.ಹಿಂದಿಯನ್ನು ಈಗಲೂ ಬೋಧಿಸಲಾಗುತ್ತದೆ, ಜೊತೆಗೆ ಪರೀಕ್ಷಿಸಲಾಗುತ್ತದೆ. ಆದರೆ ಅಂಕಗಳ ಬದಲಿಗೆ ಕೇವಲ ಗ್ರೇಡ್ ನೀಡಲಾಗುತ್ತದೆ ಎಂದಿದ್ದರು.
ರಾಜ್ಯ ಸರ್ಕಾರದ ಈ ಗ್ರೇಡಿಂಗ್ ನಿರ್ಧಾರಕ್ಕೆ ವಿದ್ಯಾರ್ಥಿಗಳು,ಪೋಷಕರು ಮಾತ್ರವಲ್ಲ ರಾಜ್ಯದ ವಿಪಕ್ಷಗಳು ಅಕ್ಷೇಪ ವ್ಯಕ್ತಪಡಿಸಿತ್ತು. ತರಾತುರಿಯಲ್ಲಿ ತೆಗೆದುಕೊಂಡು ಈ ನಿರ್ಧಾರ ಹಾಗೂ ಮಕ್ಕಳ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸಿತ್ತು.
ವಿದ್ಯಾರ್ಥಿಗಳು ಎಲ್ಲಾ ತಯಾರಿಯೊಂದಿಗೆ ಪರೀಕ್ಷೆ ಬರೆಯುತ್ತಿರುವ ನಡುವೆ ಈ ಅಧಿಸೂಚನೆ ಗೊಂದಲಕ್ಕೆ ಎಡೆ ಮಾಡಿದೆ. ಇದು ವಿದ್ಯಾರ್ಥಿ ವಿರೋಧಿ ನಿರ್ಧಾರ ಎಂದು ಬಿಜೆಪಿ ಕರೆದಿದೆ. ಇದೇ ವೇಳೆ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದರು. ಪರೀಕ್ಷೆಯ ಮಧ್ಯೆ ನಿಯಮಗಳನ್ನು ಬದಲಾಯಿಸುವುದು ಪೋಷಕರಿಗೆ ರಾಜ್ಯ ಮಂಡಳಿಯ ಮೇಲಿರುವ ನಂಬಿಕೆಯನ್ನು ಕುಗ್ಗಿಸುತ್ತದೆ. ಇದರಿಂದ ಇದರಿಂದ ಸ್ಟೇಟ್ ಸಿಲೆಬಸ್ ಮೇಲಿನ ನಂಬಿಕೆ ಇಲ್ಲವಾಗಲಿದೆ. ಇದು ಅಪಾಯಕ್ಕೆ ಸೂಚನೆ ನೀಡಲಿದೆ. ಕಾರಣ ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಬಿಎಸ್‌ಇ ಅಥವಾ ಐಸಿಎಸ್‌ಇ ಕಡೆಗೆ ಹೋಗುವಂತೆ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ಕುರಿತು ತೆಗೆದುಕೊಳ್ಳುವ ಮಹತ್ವದ ನಿರ್ಧಾರದ ವಿಚಾರದಲ್ಲಿ ಸಂಪುಟವನ್ನು ಯಾಕೆ ಸಂಪರ್ಕಿಸಲಿಲ್ಲ. ತಜ್ಞರನ್ನು ಸಮಿತಿ ಈ ವಿಚಾರಗಳ ಚರ್ಚೆ ಯಾಕೆ ನಡೆದಿಲ್ಲ. ಈ ಕುರಿತು ಶಾಲೆಗಳಿಗೆ ಮುನ್ಸೂಚನೆ ಯಾಕೆ ನೀಡಲಿಲ್ಲ ಎಂದು ಪ್ರಶ್ನಿಸಿತ್ತು. ಇದು ಗಡಿಬಿಡಿಯ ನಿರ್ಧಾರ. ಶೈಕ್ಷಣಿಕವಾಗಿ ತಪ್ಪು ಎಂದು ಜೆಡಿಎಸ್ ಕರೆದಿದೆ. ಇದು ನಿಜವಾದ ಶೈಕ್ಷಣಿಕ ಸುಧಾರಣೆಗಿಂತ ವೋಟ್ ಬ್ಯಾಂಕ್ ರಾಜಕೀಯದಿಂದ ಪ್ರೇರಿತವಾಗಿದೆ ಎಂದು ಹೇಳಿದೆ.
ರಾಜ್ಯ ಸರ್ಕಾರದ ದಿಢೀರ್ ನಿರ್ಧಾರ ಪೋಷಕರು, ಶಾಲಾ ಆಡಳಿತ ಮಂಡಳಿಗಳನ್ನು ರೊಚ್ಚಿಗೆಬ್ಬಿಸಿತ್ತು. ಕಾರಣ ಖಾಸಗಿ ಶಾಲೆಗಳು ಈ ಕೊನೆಯ ಕ್ಷಣದ ಬದಲಾವಣೆಯಿಂದ ಕೋಪಗೊಂಡಿತ್ತು. ಇದು ಅವರ ಯೋಜನೆ, ಆಂತರಿಕ ಪರೀಕ್ಷೆಗಳು ಮತ್ತು ಪೋಷಕರೊಂದಿಗಿನ ಸಂವಹನವನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಆಕ್ರೋಶ ಹೊರಹಾಕಿತ್ತು. ವಿದ್ಯಾರ್ಥಿಗಳ ಅಂಕ ಪದ್ಧತಿಗೆ ಅನುಗುಣವಾಗಿ ಅಭ್ಯಾಸ ಮಾಡಿರುತ್ತಾರೆ. ದಿಢೀರ್ ಗ್ರೇಡ್ ಪದ್ಧತಿ ಅವರ ಮಾರ್ಕ್ಸ್ ಕಾರ್ಡ್ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿತ್ತು. ಹಿಂದಿಯನ್ನು ಕಲಿಯುವಲ್ಲಿ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಳ್ಳಬಹುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಥವಾ ಬೇರೆ ಮಂಡಳಿಗಳಿಗೆ ಬದಲಾದಾಗ ತೊಂದರೆ ಅನುಭವಿಸಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಂದಿಯಲ್ಲಿ ತಾವು ಪಟ್ಟ ಶ್ರಮವು ಇನ್ನು ಮುಂದೆ ಒಟ್ಟು ಶೇಕಡಾವಾರು ಅಂಕಗಳಿಗೆ ಸಹಾಯ ಮಾಡುವುದಿಲ್ಲ ಎಂಬ ವಿಷಯದಿಂದ ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ - ಈ ಹಠಾತ್ ನಿಯಮ ಬದಲಾವಣೆಯು ಒತ್ತಡ ಮತ್ತು ಗೊಂದಲವನ್ನು ಉಂಟುಮಾಡಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು.
ಹಿಂದಿ ಶಿಕ್ಷಕರು ಸರ್ಕಾರದ ಈ ನಿರ್ಧಾರ ಕುರಿತು ಆತಂಕ ಹೊರಹಾಕಿದ್ದರು. ಒಮ್ಮೆ ಹಿಂದಿಗೆ ಅಂಕಗಳು ಇಲ್ಲವಾದರೆ, ಶಾಲೆಗಳು ಹಿಂದಿ ಬೋಧನಾ ಅವಧಿಯನ್ನು ಕಡಿತಗೊಳಿಸುತ್ತವೆ. ಬಳಿಕ ನಿಧಾನವಾಗಿ ಹಿಂದಿ ಶಿಕ್ಷಕರನ್ನು ನೇಮಿಸಿಕೊಳ್ಳುವುದನ್ನೇ ನಿಲ್ಲಿಸುತ್ತವೆ . ಇದು ವಿಷಯವನ್ನು ಕಾಗದದ ಮೇಲಷ್ಟೇ ಉಳಿಸಿ ಪ್ರಾಯೋಗಿಕವಾಗಿ ಅರ್ಥಹೀನವಾಗಿಸುತ್ತದೆ ಎಂದಿದ್ದಾರೆ.
ಕನ್ನಡ ಪರ ಸಂಘಟನೆಗಳು ಈ ಬದಲಾವಣೆಯನ್ನು ಬೆಂಬಲಿಸಿವೆ, ಇದನ್ನು ಕನ್ನಡವನ್ನು ರಕ್ಷಿಸುವ ಮತ್ತು ಹಿಂದಿಯನ್ನು ಕಡ್ಡಾಯ ವಿಷಯವಾಗಿ ಹೇರುವುದನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಎಂದು ನೋಡುತ್ತಿವೆ ಎಂದಿತ್ತು. ಆದರೆ ಕೇವಲ ಕನ್ನಡ ಹಾಗೂ ಹಿಂದಿ ಹೇರಿಕೆ ವಿಚಾರ ಮಾತ್ರ ಇಲ್ಲಿ ಉಳಿದಿಲ್ಲ. ಇದು ವಿದ್ಯಾರ್ಥಿಗಳ ಕಲಿಕೆ ಹಾಗೂ ಭವಿಷ್ಯದ ಪ್ರಶ್ನೆಯಾಗಿದೆ.
ಗ್ರೇಡಿಂಗ್ ಬದಲಾವಣೆಯು ಶೈಕ್ಷಣಿಕವಾಗಿ ಹಿಂದಿಯ ಪ್ರಾಮುಖ್ಯತೆಯನ್ನು ದುರ್ಬಲಗೊಳಿಸಿರುವ ನಿರ್ಧಾರ ಹಾಗೂ ತಡವಾಗಿ ನಿಯಮ ಬದಲಾಯಿಸಿ ಪರೀಕ್ಷೆಗಳಿಗೆ ಅಡ್ಡಿಪಡಿಸಿದ್ದಕ್ಕಾಗಿ ಸರ್ಕಾರ ಟೀಕೆಗೆ ಗುರಿಯಾಗಿದೆ. ಅನೇಕರು ಇದನ್ನು ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಮಾಡಿದ ರಾಜಕೀಯ ತಂತ್ರ ಎಂದು ಕರೆದಿದ್ದಾರೆ.
ಹೈಕೋರ್ಟ್ ತೆಗೆದುಕೊಂಡ ಈ ನಿರ್ಧಾರ ಅಷ್ಟೇ ವೇಗದಲ್ಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾ.ಇಎಸ್ ಇಂದಿರೇಶ್ ಅವರಿದ್ದ ಪೀಠ ಈ ಅರ್ಜಿ ವಿಚಾರಣೆ ನಡೆಸಿ ಮಹತ್ವದ ಆದೇಶ ನೀಡಿದೆ. ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದರು.
ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಗ್ರೇಡಿಂಗ್ ಪದ್ಧತಿ ಬಳಸುವ ಯೋಜನೆಯನ್ನು ಮುಂದುವರಿಸದಂತೆ ತನ್ನ ಆದೇಶದಲ್ಲಿ ಹೇಳಿದೆ. ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳನ್ನು ನೀಡುವಂತೆ ತಿಳಿಸಿದೆ. ಇದರಿಂದ ವಿದ್ಯಾರ್ಥಿಗಳನ್ನು ಸರಿಯಾಗಿ ಪರೀಕ್ಷಿಸಬಹುದು ಎಂದಿದೆ.
ಅಂಕಗಳ ಬದಲಿಗೆ ಗ್ರೇಡ್‌ಗಳನ್ನು ನೀಡಿದಾಗ, ವಿದ್ಯಾರ್ಥಿಗಳು ಆ ಭಾಷೆಯನ್ನು ಸರಿಯಾಗಿ ಓದಲು ಅಥವಾ ಬರೆಯಲು ಸಾಧ್ಯವಾಗದಿದ್ದರೂ ಸಹ 10ನೇ ತರಗತಿಯಲ್ಲಿ ಉತ್ತೀರ್ಣರಾಗಬಹುದು. ಇದು ರಾಜ್ಯದ ಒಟ್ಟಾರೆ ಶಿಕ್ಷಣದ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತದೆ.ಈ ನಿಯಮ ಬದಲಾವಣೆಯು ಕನ್ನಡವನ್ನು ರಕ್ಷಿಸುವ ಸುಳ್ಳು ಭರವಸೆಯಾಗಿತ್ತು. ವಾಸ್ತವದಲ್ಲಿ, ಇದು ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಬದಲು ಅವರಿಗೆ ಹಾನಿ ಮಾಡಿದೆ ಎಂದಿದೆ.
ಸಂಖ್ಯಾತ್ಮಕ ಅಂಕಗಳನ್ನು ತೆಗೆದುಹಾಕುವ ಮೂಲಕ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಸಿಬಿಎಸ್‌ಇ (CBSE) ಮತ್ತು ಐಸಿಎಸ್‌ಇ (ICSE) ಶಾಲಾ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಅಗತ್ಯವಿದ್ದ ಪ್ರೋತ್ಸಾಹವನ್ನು ಕಸಿದುಕೊಳ್ಳಲು ಸರ್ಕಾರ ಯೋಜಿಸಿತ್ತು.
2024ರ ಅಂಕಿ ಅಂಶದ ಪ್ರಕಾರ, ನಿಜವಾದ ಸಮಸ್ಯೆ ಕಳಪೆ ಬೋಧನೆಯಲ್ಲಿದೆ. 1.32 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡವನ್ನು ಮೊದಲ ಭಾಷೆಯಾಗಿ ಆರಿಸಿಕೊಂಡಾಗ ಅದರಲ್ಲಿ ಅನುತ್ತೀರ್ಣರಾಗಿದ್ದಾರೆ, ಆದರೆ ತೃತೀಯ ಭಾಷೆಯಾಗಿ ಆರಿಸಿಕೊಂಡಾಗ ಕೇವಲ 1,992 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ. ಸಂಸ್ಕೃತ, ಹಿಂದಿ ಅಥವಾ ಇಂಗ್ಲಿಷ್ ಅನ್ನು ಮೊದಲ ಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳು ಆ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ - ಆದರೆ ಇನ್ನೂ ಕನ್ನಡದಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ ಎಂಬುದು ಇದರಿಂದ ತಿಳಿದುಬರುತ್ತದೆ. ಸಮಸ್ಯೆ ಇರುವುದು ಕನ್ನಡವನ್ನು ಬೋಧಿಸುತ್ತಿರುವ ವಿಧಾನದಲ್ಲೇ ಹೊರತು, ಅದು ಯಾವ ಭಾಷಾ ಸ್ಥಾನದಲ್ಲಿದೆ ಎಂಬುದರಲ್ಲಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.
ನ್ಯಾಯಮೂರ್ತಿ ಐ.ಎಸ್. ಇಂದಿರೇಶ್ ಅವರ ಪೀಠವು ಈ ಶೈಕ್ಷಣಿಕ ವರ್ಷಕ್ಕೆ ಹಿಂದಿ ಸೇರಿದಂತೆ ತೃತೀಯ ಭಾಷೆಯ ವಿಷಯಗಳಿಗೆ ಗ್ರೇಡ್‌ಗಳ ಬದಲಿಗೆ ಅಂಕಗಳನ್ನೇ ನೀಡಲು ಸರ್ಕಾರಕ್ಕೆ ಆದೇಶಿಸಿದೆ. ವರ್ಷದ ಮಧ್ಯದಲ್ಲಿ ನಿಯಮಗಳನ್ನು ಬದಲಾಯಿಸುವುದು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತೆ. ಇದು ಮೆರಿಟ್ ಲಿಸ್ಟ್ ಮತ್ತು ಕಾಲೇಜು ಪ್ರವೇಶದ ಮೇಲೆ ಪರಿಣಾಮ ಬೀರುತ್ತದೆ. ಅಂಕಗಳು ಪಾರದರ್ಶಕ ಮತ್ತು ನ್ಯಾಯಯುತವಾಗಿವೆ ಎಂದಿತು.
ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ಪರೀಕ್ಷೆಗಳು ನಡೆದವು, ಆದರೆ ಅಧಿಕೃತ ಲಿಖಿತ ಆದೇಶವು ಪರೀಕ್ಷೆಗಳು ಮುಗಿದ ನಂತರ ಅಂದರೆ ಏಪ್ರಿಲ್ 10 ರಂದು ಬಂದಿದೆ ಎಂದು ನ್ಯಾಯಾಲಯವು ಎತ್ತಿ ತೋರಿಸಿದೆ. ಘಟನೆಯ ನಂತರ ನಿಯಮಗಳನ್ನು ಬದಲಾಯಿಸುವುದು ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬರನ್ನು ಉತ್ತೀರ್ಣರನ್ನಾಗಿ ಮಾಡುವುದು ಮಾತ್ರವೇ ವಿದ್ಯಾರ್ಥಿಗಳ ಮೌಲ್ಯಮಾಪನ ವಿಧಾನವನ್ನು ಬದಲಾಯಿಸಲು ಸರಿಯಾದ ಕಾರಣವಲ್ಲ ಎಂದು ನ್ಯಾಯಾಲಯ ಹೇಳಿದೆ.
ಸರ್ಕಾರವು ಈ ಬಗ್ಗೆ ಮರುಪರಿಶೀಲಿಸುವಂತೆ ನ್ಯಾಯಾಲಯವನ್ನು ಕೇಳಿದಾಗ, ನ್ಯಾಯಾಲಯವು ತನ್ನ ನಿರ್ಧಾರಕ್ಕೆ ಬದ್ಧವಾಗಿ ಉಳಿಯಿತು - ಅಕ್ಟೋಬರ್ 28, 2025 ರಂದು ಪರೀಕ್ಷಾ ಸೀಸನ್ ಪ್ರಾರಂಭವಾಗುವ ಮೊದಲು ಇದ್ದ ನಿಯಮಗಳ ಪ್ರಕಾರವೇ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಬೇಕು ಎಂದು ಹೇಳಿದೆ.
2025-26ರ ವಿದ್ಯಾರ್ಥಿಗಳನ್ನು ರಕ್ಷಿಸುತ್ತದೆ: 625 ಅಂಕಗಳ ಪರೀಕ್ಷೆಗೆ ತಯಾರಿ ನಡೆಸಿದ ವಿದ್ಯಾರ್ಥಿಗಳನ್ನು ಅದೇ ರೀತಿಯಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ವರ್ಷದ ಆರಂಭದಲ್ಲಿ ಭರವಸೆ ನೀಡಿದ ನಿಯಮಗಳಿಗೆ ಬದ್ಧವಾಗಿರುವ ಮೂಲಕ ಇದು ನ್ಯಾಯವನ್ನು ಕಾಪಾಡುತ್ತದೆ.
ಶ್ರೇಯಾಂಕಗಳ ನ್ಯಾಯವನ್ನು ಕಾಪಾಡುತ್ತದೆ: ಗ್ರೇಡ್‌ಗಳ ಬದಲಿಗೆ ಅಂಕಗಳನ್ನು ಬಳಸುವುದರಿಂದ ಅಂತಿಮ ಶೇಕಡಾವಾರು ಮತ್ತು ಕಾಲೇಜು ಪ್ರವೇಶಗಳು ಹಿಂದಿನ ವರ್ಷಗಳಂತೆಯೇ ಸ್ಥಿರವಾಗಿರುವುದನ್ನು ಖಚಿತಪಡಿಸುತ್ತದೆ.
ನಿಯಮಗಳನ್ನು ಪಾಲಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತದೆ: ವರ್ಷದ ಅರ್ಧದಲ್ಲಿ ಅಥವಾ ಪರೀಕ್ಷೆಗಳು ಮುಗಿದ ನಂತರ ಸರ್ಕಾರವು ಪರೀಕ್ಷಾ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ನಿರ್ಧಾರವು ತೋರಿಸುತ್ತದೆ.
ಉತ್ತಮವಾಗಿ ಸಾಧಿಸುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ: ತಮ್ಮ ಒಟ್ಟು ಅಂಕಗಳನ್ನು ಹೆಚ್ಚಿಸಿಕೊಳ್ಳಲು ಹಿಂದಿಯಲ್ಲಿ ಕಷ್ಟಪಟ್ಟು ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಈ ಕೊನೆಯ ಕ್ಷಣದ ಬದಲಾವಣೆಯಿಂದ ನಷ್ಟ ಅನುವಿಸುತ್ತಾರೆ.
ರಾಜ್ಯ ಮಂಡಳಿಯ ವಿಶ್ವಾಸಾರ್ಹತೆಯನ್ನು ಕಾಪಾಡುತ್ತದೆ: ಪೋಷಕರು ಈಗಾಗಲೇ ಸಿಬಿಎಸ್‌ಇ ಅಥವಾ ಐಸಿಎಸ್‌ಇಗೆ ಬದಲಾಗುವ ಬಗ್ಗೆ ಯೋಚಿಸುತ್ತಿರುವಾಗ, ಇದು ರಾಜ್ಯ ಮಂಡಳಿಯ ಮೇಲಿನ ನಂಬಿಕೆ ಕುಸಿಯುವುದನ್ನು ತಡೆಯುತ್ತದೆ.
ಭವಿಷ್ಯದ ಬಗ್ಗೆ ಇನ್ನೂ ಗೊಂದಲವಿದೆ: ಸರ್ಕಾರವು ಇನ್ನೂ ದ್ವಿಭಾಷಾ ಪದ್ಧತಿಗೆ ಬದಲಾಗಲು ಬಯಸುತ್ತಿರುವುದರಿಂದ, ಮುಂದಿನ ವರ್ಷದ ನಿಯಮಗಳು ಏನಾಗಿರುತ್ತವೆ ಎಂಬ ಬಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಇನ್ನೂ ಖಚಿತತೆಯಿಲ್ಲ.
ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು "ಹಿಂದಿಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ" ಎಂಬ ರಾಜಕೀಯ ವಾದವನ್ನು ಬಳಸಿಕೊಂಡಿದೆ. 2025ರಲ್ಲಿ ಕರ್ನಾಟಕದ ಉತ್ತೀರ್ಣ ದರವು ಕೇವಲ 62.34% ಇತ್ತು - ಇದು ಕಳೆದ ಇಪ್ಪತ್ತು ವರ್ಷಗಳಲ್ಲಿ ಎರಡನೇ ಅತ್ಯಂತ ಕೆಟ್ಟ ಫಲಿತಾಂಶವಾಗಿದೆ.
ತೃತೀಯ ಭಾಷೆಯ (ಸಾಮಾನ್ಯವಾಗಿ ಹಿಂದಿ) ಪ್ರಾಮುಖ್ಯತೆಯನ್ನು ಕಡಿಮೆ ಮಾಡುವುದರಿಂದ ಕರ್ನಾಟಕದ ವಿದ್ಯಾರ್ಥಿಗಳು ಕೆಲಸಕ್ಕಾಗಿ ಇತರ ರಾಜ್ಯಗಳಿಗೆ ತೆರಳಲು, ಭಾರತೀಯ ಸೇನೆಯನ್ನು ಸೇರಲು ಅಥವಾ ನೀಟ್ (NEET) ಮತ್ತು ಜೆಇಇ (JEE) ನಂತಹ ರಾಷ್ಟ್ರೀಯ ಪರೀಕ್ಷೆಗಳಲ್ಲಿ ಸ್ಪರ್ಧಿಸಲು ಕಷ್ಟವಾಗುತ್ತದೆ. ಇದು ಪೋಷಕರು ತಮ್ಮ ಮಕ್ಕಳನ್ನು ಕರ್ನಾಟಕ ರಾಜ್ಯ ಮಂಡಳಿಯಿಂದ ಸಿಬಿಎಸ್‌ಇ ಅಥವಾ ಐಸಿಎಸ್‌ಇಯಂತಹ ಕೇಂದ್ರ ಮಂಡಳಿಗಳಿಗೆ ಸ್ಥಳಾಂತರಿಸಲು ಪ್ರೇರೇಪಿಸುತ್ತದೆ ಮತ್ತು ಕನ್ನಡ ಶಾಲೆಗಳ ಬೇಡಿಕೆಯನ್ನು ತಗ್ಗಿಸುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಗಳ ಅವಧಿಯಲ್ಲಿ (2013-2018 ಮತ್ತು 2023 ರಿಂದ ಇಲ್ಲಿಯವರೆಗೆ), ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ - 2016 ರಲ್ಲಿ 2,959 ಸರ್ಕಾರಿ ಶಾಲೆಗಳು , 2025 ರಲ್ಲಿ 25,000 ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಯೋಜನೆ , ಮತ್ತು 2026 ರಲ್ಲಿ 600 ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಯೋಜನೆಗಳಿವೆ. ಅದೇ ಸಮಯದಲ್ಲಿ, ಉರ್ದು ಸಂಸ್ಥೆಗಳಿಗಾಗಿಯೇ ವಿಶೇಷವಾಗಿ 400 ಕೋಟಿ ರೂಪಾಯಿ ನೀಡಲಾಯಿತು. ಅಂಗನವಾಡಿ ಶಿಕ್ಷಕರಿಗೆ ಉರ್ದು ಭಾಷಾ ಸಾಮರ್ಥ್ಯವನ್ನು ಕಡ್ಡಾಯಗೊಳಿಸಲಾಯಿತು ಮತ್ತು ರಂಜಾನ್‌ಗೆ ಅನುಕೂಲವಾಗುವಂತೆ ಪರೀಕ್ಷಾ ವೇಳಾಪಟ್ಟಿಗಳನ್ನು ಬದಲಾಯಿಸಲಾಯಿತು.
ಹೊಸ ನಿಯಮದ ಅಡಿಯಲ್ಲಿ, 4,000ಕ್ಕೂ ಹೆಚ್ಚು ಉರ್ದು ಮಾಧ್ಯಮದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ತೃತೀಯ ಭಾಷೆಯಾದ ಕನ್ನಡವನ್ನು ಸುಲಭವಾಗಿ ಬಿಡಬಹುದಾಗಿತ್ತು. ಇದರರ್ಥ ಮುಸ್ಲಿಂ ವಿದ್ಯಾರ್ಥಿಗಳ ತಲೆಮಾರುಗಳು ಕನ್ನಡವನ್ನು ಕಲಿಯದೆಯೇ ಬೆಳೆಯುತ್ತಿದ್ದವು. ಆದರೆ ಸರ್ಕಾರವು ಇತರ ಸಂದರ್ಭಗಳಲ್ಲಿ ಇದೇ ರಾಜ್ಯ ಭಾಷೆಯನ್ನು ರಕ್ಷಿಸುವುದಾಗಿ ಹೇಳಿಕೊಳ್ಳುತ್ತದೆ. ಇದು "ಕನ್ನಡ ಫಸ್ಟ್" ಕಲ್ಪನೆಗೆ ಮತ್ತು ಸಮುದಾಯಗಳ ನಡುವಿನ ಏಕತೆಗೆ ನೇರವಾಗಿ ಧಕ್ಕೆ ತರುತ್ತದೆ.
ಈ ಗೊಂದಲ ಮತ್ತು ಪರೀಕ್ಷಾ ಅವಧಿಯ ಮಧ್ಯದಲ್ಲಿ ಹಠಾತ್ ನಿಯಮ ಬದಲಾವಣೆಯು 8 ಲಕ್ಷ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡಿದೆ. ಈ ನೀತಿಯು ಒಂದು ಸಮುದಾಯವು ಕಠಿಣ ಭಾಷಾ ಅವಶ್ಯಕತೆಗಳಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುವಂತೆ ವಿನ್ಯಾಸಗೊಳಿಸಿದಂತಿದೆ. ಅದೇ ಸಮಯದಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಲು ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಮಾನದಂಡಗಳನ್ನು ಕಡಿಮೆ ಮಾಡುವ ಮೂಲಕ ಎಸ್‌ಸಿ (ಪರಿಶಿಷ್ಟ ಜಾತಿ) ಮತ್ತು ಒಬಿಸಿ (ಇತರ ಹಿಂದುಳಿದ ವರ್ಗಗಳು) ಸಮುದಾಯಗಳ ಅರ್ಹ ವಿದ್ಯಾರ್ಥಿಗಳಿಗೆ ಪರಿಸ್ಥಿತಿಯನ್ನು ಕಠಿಣಗೊಳಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ