
ಬೆಂಗಳೂರು (ಏ.17): ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಪರೀಕ್ಷಾ ಫಲಿತಾಂಶದಲ್ಲಿ ಈ ಬಾರಿಯಿಂದಲೇ ಅಂಕಗಳ ಬದಲು ಗ್ರೇಡಿಂಗ್ ನೀಡುವ ತರಾತುರಿ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿರುವುದು ಶಾಲಾ ಶಿಕ್ಷಣ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹೈಕೋರ್ಟ್ ಆದೇಶದಿಂದ ಇಲಾಖೆ ಮುಖಭಂಗಕ್ಕೀಡಾಗಿದೆ. ಈ ಮಧ್ಯೆ, ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಈ ವರ್ಷ ಆದೇಶ ಪಾಲಿಸಿ ತೃತೀಯ ಭಾಷೆಗೂ ಅಂಕಗಳನ್ನೇ ನೀಡಬೇಕೇ ಎನ್ನುವ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ತಜ್ಞರ ಸಲಹೆ ಬಳಿಕ ಶೀಘ್ರ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಮತ್ತೊಂದೆಡೆ ಗ್ರೇಡಿಂಗ್ ಪದ್ಧತಿ ಎನ್ನುವ ಕಾರಣಕ್ಕೆ ತೃತೀಯ ಭಾಷಾ ಪರೀಕ್ಷೆಯನ್ನು ಗಂಭೀರವಾಗಿ ಎದುರಿಸದ ಬಹಳಷ್ಟು ವಿದ್ಯಾರ್ಥಿಗಳಲ್ಲಿ ಈಗ ಅನುತ್ತೀರ್ಣದ ಆತಂಕವನ್ನೂ ಸೃಷ್ಟಿಸಿದೆ. ಹಿಂದಿ ಸೇರಿದಂತೆ ತೃತೀಯ ಭಾಷಾ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಸಿದ್ಧರಾಗಿದ್ದ ವಿದ್ಯಾರ್ಥಿಗಳು ಕೂಡ ಒಟ್ಟಾರೆ ಫಲಿತಾಂಶಕ್ಕೆ ಈ ವಿಷಯದ ಅಂಕಗಳನ್ನು ಪರಿಗಣಿಸುವುದಿಲ್ಲ ಎನ್ನುವಂತೆ ಮಾಡಿದ ಕಾರಣಕ್ಕೆ ತುಂಬಾ ಉತ್ತಮವಾಗಿ ಅಥವಾ ಶೇ.100ಕ್ಕೆ ನೂರು ಅಂಕ ಪಡೆಯುವ ನಿಟ್ಟಿನಲ್ಲಿ ಪರೀಕ್ಷೆಗೆ ಸಿದ್ಧರಾದವರೂ ಅಷ್ಟು ಗಾಂಭೀರ್ಯವಾಗಿ ಪರೀಕ್ಷೆ ಬರೆಯದೆ ಹೋಗಿರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಅಂತಹ ಮಕ್ಕಳನ್ನೂ ಸರ್ಕಾರದ ನಿರ್ಧಾರ ಫಲಿತಾಂಶ ಕಡಿಮೆಯಾಗುವ ಆತಂಕಕ್ಕೆ ದೂಡಿದೆ.
ಸಾಮಾನ್ಯವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ತರುವುದಾದರೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ನಿಯಮಾವಳಿ ಬದಲಾವಣೆ ಮಾಡಿ ತರಬೇಕು. ಅದನ್ನು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಬಂಧಿಸಿದ ಎಲ್ಲಾ ಭಾಗೀದಾರರಿಗೂ ತಿಳಿಸಬೇಕು. ಆದರೆ, ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆಯಂತಹ ವಿಷಯದಲ್ಲಿ ಶೈಕ್ಷಣಿಕ ವರ್ಷಾಂತ್ಯದಲ್ಲಿ ಅದರಲ್ಲೂ ಪರೀಕ್ಷೆ ನಡೆಯುತ್ತಿರುವಾಗ ತೃತೀಯ ಭಾಷೆ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ. ಗ್ರೇಡಿಂಗ್ ಅಷ್ಟೇ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದ್ದು ವಿವೇಚನಾರಹಿತ ನಿರ್ಧಾರ. ಅಲ್ಲದೆ, 2026ನೇ ಸಾಲಿನ ಪರೀಕ್ಷೆಗಳು ಮುಗಿದ ಮೇಲೆ ಆ ಪರೀಕ್ಷೆಗಳ ಬದಲಾವಣೆಗೆ ಕರಡು ನಿಯಮಾವಳಿ ಪ್ರಕಟಿಸಿದ ಸರ್ಕಾರದ ನಿರ್ಧಾರ ಇನ್ನೂ ಮೂರ್ಖತನದ್ದು ಎನ್ನುತ್ತಾರೆ ಶಿಕ್ಷಣ ತಜ್ಞರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ