
ಬೆಂಗಳೂರು (ಮೇ.14): ಸಿಹಿ ಹಂಚಿದ ನಂತರ ಕೈಯನ್ನು ರಾಷ್ಟ್ರಧ್ವಜದಿಂದ ಒರೆಸಿಕೊಂಡ ಪ್ರಕರಣ ಸಂಬಂಧ ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಎ. ಕೃಷ್ಣಪ್ಪ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ರಾಷ್ಟ್ರಧ್ವಜ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ತಮ್ಮ ವಿರುದ್ಧ ತಿಲಕನಗರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಕೃಷ್ಣಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರ ಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಅರ್ಜಿ ಸಂಬಂಧ ತಿಲಕನಗರ ಠಾಣಾಧಿಕಾರಿ ಮತ್ತು ಪ್ರಕರಣ ದೂರುದಾರರಾದ ಪೊಲೀಸ್ ಅಧಿಕಾರಿ ಮಂಜುನಾಥ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.
ಅರ್ಜಿದಾರರ ಪರ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿ, ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಯಶಸ್ಸು ಸಾಧಿಸಿದ ಬಗ್ಗೆ ಸಂಭ್ರಮಾಚರಣೆ ಆಚರಿಸಲೇಂದೇ ಸಿಹಿ ಹಂಚಿಕೆ ಕಾರ್ಯಕ್ರಮ ಮಾಡಲಾಗಿತ್ತು. ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ರಾಷ್ಟ್ರಧ್ವಜಕ್ಕೆ ಅಪಮಾನ ಉಂಟು ಮಾಡುವ ಯಾವುದೇ ಉದ್ದೇಶ ಅರ್ಜಿದಾರರಿಗೆ ಇರಲಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಈ ವಾದ ಪರಿಗಣಿಸಿದ ನ್ಯಾಯಪೀಠ, ಪೊಲೀಸರು ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಕ್ಕೆ ತಡೆಯಾಜ್ಞೆ ನೀಡಿತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ: 30ಕ್ಕೂ ಹೆಚ್ಚು ಮರಗಳು ಧರೆಗೆ!
ಪ್ರಕರಣವೇನು?
ಪೊಲೀಸ್ ಅಧಿಕಾರಿ ಮಂಜುನಾಥ್ ಅವರು ಮೇ 9ರಂದು ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೇ 8ರಂದು ಜಯನಗರದ 4ನೇ ಹಂತದಲ್ಲಿರುವ ವಿನಾಯಕ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಕನ್ನಡಭಿಮಾನ ಸಂಘ ಸಿಹಿ ಹಂಚಿಕೆ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಕೃಷ್ಣಪ್ಪ ಸಹಿ ಹಂಚಿದ ನಂತರ ಕೈಯನ್ನು ರಾಷ್ಟ್ರಧ್ವಜಕ್ಕೆ ಒರೆಸಿದ್ದಾರೆ. ಆ ಮೂಲಕ ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಅದನ್ನು ಪರಿಗಣಿಸಿದ್ದ ಪೊಲೀಸರು, ರಾಷ್ಟ್ರೀಯ ಗೌರವಗಳಿಗೆ ಅವಮಾನ ತಡೆ ಕಾಯ್ದೆ-1971ರ ಸೆಕ್ಷನ್ 2 ರಡಿ ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆ ತಂದ ಅಪರಾಧದಡಿ ಎಫ್‌ಐಆರ್ ದಾಖಲಿಸಿದ್ದರು. ಅದನ್ನು ರದ್ದುಪಡಿಸಲು ಕೋರಿ ಕೃಷ್ಣಪ್ಪ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ