
ನವದೆಹಲಿ ಮೇ.14: ದೇಶದ ಕೃಷಿ ಚಟುವಟಿಕೆಗಳ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಾರುತಗಳ ಮಂಗಳವಾರ ಬಂಗಾಳಕೊಲ್ಲಿಯ ದಕ್ಷಿಣ, ಅಂಡಮಾನ್ ಸಮುದ್ರ ಮತ್ತು ನಿಕೋಬಾರ್ ದ್ವೀಪದ ಕೆಲ ಪ್ರದೇಶಗಳನ್ನು ಪ್ರವೇಶಿಸಿದ್ದು, ಕಳೆದ 2 ದಿನಗಳಲ್ಲಿ ನಿಕೋಬಾರ್ ದ್ವೀಪದಲ್ಲಿ ಭಾರೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 2 ದಿನಗಳ ಅವಧಿಯಲ್ಲಿ ಬಂಗಾಳ ಕೊಲ್ಲಿ, ಅಂಡಮಾನ್ ಸಮುದ್ರ ಮತ್ತು ನಿಕೋಬಾರ್ ದ್ವೀಪದಲ್ಲಿ ಬೀಸುವ ಗಾಳಿಯ ವೇಗ ಹೆಚ್ಚಿ, ಸಮುದ್ರಮಟ್ಟದಿಂದ 1.5 ಕಿ.ಮೀ ಎತ್ತರದ ಪ್ರದೇಶಗಳಲ್ಲಿ 20 ನಾಟ್‌ಗೆ ತಲುಪಿದೆ ಎಂದು ಹೇಳಿದೆ.
ಜೊತೆಗೆ ಮುಂದಿನ 3-4 ದಿನಗಳಲ್ಲಿ ಮಾನ್ಸೂನ್ ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್, ದಕ್ಷಿಣ ಬಂಗಾಳ ಕೊಲ್ಲಿಯ ಬಹುತೇಕ ಪ್ರದೇಶಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಅಂಡಮಾನ್ ಸಮುದ್ರದ ಉಳಿದ ಭಾಗಗಳು, ಮತ್ತು ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಿಗೆ ಪ್ರವೇಶಿಸಲು ಸೂಕ್ತ ಪರಿಸ್ಥಿತಿ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Karnataka News Live:ಸಿಡಿಲಬ್ಬರದ ಮಳೆಗೆ ರಾಜ್ಯದಲ್ಲಿ 24 ಗಂಟೆಯಲಿ 9 ಮಂದಿ ಬಲಿ:17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಅತ್ತ ಸಾಮಾನ್ಯವಾಗಿ ಜೂ.1ರಂದು ಕೇರಳ ಪ್ರವೇಶಿಸಿ, ಜು.8ಕ್ಕೆ ದೇಶವ್ಯಾಪಿ ಸುರಿಯುತ್ತಿದ್ದ ಮುಂಗಾರು ಈ ಬಾರಿ ಮೇ 27ಕ್ಕೇ ಕೇರಳಕ್ಕೆ ಕಾಲಿಡಲಿದೆ. ಹೀಗಾಗುತ್ತಿರುವುದು ಕಳೆದ 16 ವರ್ಷಗಳಲ್ಲಿ ಇದೇ ಮೊದಲು.
ವಿಪತ್ತಿಗೆ 2024ರಲ್ಲಿ 54 ಲಕ್ಷ ಭಾರತೀಯರು ಸ್ಥಳಾಂತರ
ನವದೆಹಲಿ: ಕಳೆದ ವರ್ಷ ಭಾರತದಲ್ಲಿ ಪ್ರವಾಹ, ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಪತ್ತಿನ ಕಾರಣದಿಂದ 54 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ. ಇದು ಕಳೆದ 12 ವರ್ಷದಲ್ಲಿನ ಅತ್ಯಧಿಕ ಪ್ರಮಾಣವಾಗಿದೆ ಎಂದು ವರದಿಯೊಂದು ಹೇಳಿದೆ.
ಜಿನಿವಾ ಮೂಲದ ಆಂತರಿಕ ಸ್ಥಳಾಂತರ ಮೇಲ್ವಿಚರಣಾ ಕೇಂದ್ರ (ಐಡಿಎಂಸಿ) ಈ ಕುರಿತಾದ ವರದಿ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಸ್ಥಳಾಂತರದ ಘಟನೆಗಳಲ್ಲಿ ಮೂರನೆ ಎರಡರಷ್ಟು ಘಟನೆಗಳು ಪ್ರವಾಹ ಕಾರಣದಿಂದ ಸಂಭವಿಸಿದೆ. ಅಸ್ಸಾಂನಲ್ಲಿ ಕಳೆದ ವರ್ಷ 25 ಲಕ್ಷ ಜನರು ಪ್ರವಾಹದಿಂದಾಗಿ ಸ್ಥಳಾಂತಗೊಂಡಿದ್ದಾರೆ.10 ಲಕ್ಷಕ್ಕೂ ಹೆಚ್ಚು ಜನರು ಡಾನಾ ಚಂಡಮಾರುದಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸ್ಥಳಾಂತರಗೊಂಡಿದ್ದರು. ರೆಮಲ್ ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಿ 2.08 ಲಕ್ಷ . ಅಸ್ಸಾಂನಲ್ಲಿ 3.38 ಲಕ್ಷ ಜನರು ಸ್ಥಳಾಂತರಗೊಂಡಿದ್ದರು.ತ್ರಿಪುರದಲ್ಲಿ ಅಧಿಕ ಮಳೆ ಭೂಕುಸಿತದಿಂದಾಗಿ 3. 15 ಲಕ್ಷ ಜನರು ಸ್ಥಳಾಂತರವಾಗಿದ್ದರು. ಮಣಿಪುರಹಿಂಸಾಚಾರದಿಂದಾಗಿ 1700 ಮಂದಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಬಿರುಗಾಳಿಗೆ 16 ಲಕ್ಷ ಜನರು ಸ್ಥಳಾಂತರವಾಗಿದ್ದಾರೆ.
ಹವಾಮಾನ ವೈಪರೀತ್ಯ, ಅರಣ್ಯ ನಾಶ , ಜಲಾಶಯಗಳ ಅಸಮರ್ಪಕ ನಿರ್ವಹಣೆ, ಭೂಕುಸಿತ ವಿಪತ್ತುಗಳಿಗೆ ಕಾರಣ ಎಂದು ವರದಿ ವಿಶ್ಲೇಷಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ