ಎಚ್‌ಡಿಕೆ, ಡಿ.ಸಿ.ತಮ್ಮಣ್ಣ, ಸಾವಿತ್ರಮ್ಮರಿಂದ 14 ಎಕರೆ ಸರ್ಕಾರಿ ಜಮೀನು ಕಬಳಿಕೆ, ಎರಡು ವಾರದಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ.
ಬೆಂಗಳೂರು(ಮಾ.17): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತವರ ಸಂಬಂಧಿಗಳಾದ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಹಾಗೂ ಸಾವಿತ್ರಮ್ಮ ಅವರಿಂದ ಕಬಳಿಕೆಯಾಗಿದೆ ಎನ್ನಲಾದ 14 ಎಕರೆ ಸರ್ಕಾರಿ ಜಮೀನನ್ನು 19 ವರ್ಷ ಕಳೆದರೂ ಮರಳಿ ವಶಕ್ಕೆ ಪಡೆಯದೇ ಇರುವುದಕ್ಕೆ ಕಿಡಿಕಾರಿರುವ ಹೈಕೋರ್ಟ್, ಒತ್ತುವರಿ ತೆರವಿಗೆ ಏನೆಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿ ಎರಡು ವಾರದಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದೆ.
ಪ್ರಕರಣ ಕುರಿತು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಯಾವ ಐಟಿ ಕಂಪನಿಯೂ ಬೆಂಗಳೂರು ಬಿಡಲ್ಲ: ಸಿಎಂ ಬೊಮ್ಮಾಯಿ
ಹೈಕೋರ್ಟ್ ಮಾ.9ರಂದು ನೀಡಿದ್ದ ನಿರ್ದೇಶನದ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿದ್ದರು. ಮುಖ್ಯಕಾರ್ಯದರ್ಶಿ ಪರ ವಾದ ಮಂಡಿಸಿದ ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಪ್ರಕರಣ ಸಂಬಂಧ ಲೋಕಾಯುಕ್ತರ ಆದೇಶ ಹಾಗೂ 2004ರಲ್ಲಿ ತಹಸೀಲ್ದಾರ್ ನೀಡಿರುವ ಆದೇಶದ ಅನುಸಾರ ಕೇತಗಾನಹಳ್ಳಿಯಲ್ಲಿನ 14 ಎಕರೆ 4 ಗುಂಟೆ ಸರ್ಕಾರಿ ಜಮೀನು ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮೂರು ತಿಂಗಳಲ್ಲಿ ಭೂಮಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ.ವೀರಪ್ಪ, ಅರ್ಜಿದಾರರು ಆರೋಪಿಸಿರುವ ಜಮೀನು ಒತ್ತುವರಿಯಾಗಿದೆ ಎಂದು ಸಂಬಂಧಪಟ್ಟ ತಹಸೀಲ್ದಾರ್ 2004ರಲ್ಲಿ ಆದೇಶ ನೀಡಿದ್ದಾರೆ. ಭೂ ಕಬಳಿಕೆ ಕುರಿತು ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು 2014ರ ಆ.5ರಂದು ಆದೇಶ ಮಾಡಿದ್ದಾರೆ. ಲೋಕಾಯುಕ್ತರ ಆದೇಶವನ್ನು ಹೈಕೋರ್ಟ್ ಸಹ ಎತ್ತಿಹಿಡಿದಿತ್ತು. ಸರ್ಕಾರ ಸಹ ಎರಡು ತಿಂಗಳಲ್ಲಿ ಲೋಕಾಯುಕ್ತರ ಆದೇಶ ಜಾರಿಗೊಳಿಸಲಾಗುವುದು ಎಂಬುದಾಗಿ 2020ರಲ್ಲಿ ಹೈಕೋರ್ಟ್‌ಗೆ ಭರವಸೆ ನೀಡಿತ್ತು. ಆದರೆ, ಈವರೆಗೂ ಆದೇಶ ಪಾಲನೆಯಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಅಲ್ಲದೆ, ಪ್ರಕರಣ ಮುನ್ನೆಲೆಗೆ ಬಂದು 19 ವರ್ಷ ಕಳೆದಿವೆ. ಆದರೆ, ಸರ್ಕಾರ ಮಾತ್ರ ಜಮೀನು ರಕ್ಷಣೆಗೆ ಮುಂದಾಗಿಲ್ಲ. ಇಷ್ಟು ವಿಳಂಬವೇಕೆ ಎಂದು ಪ್ರಶ್ನಿಸಿದ ನ್ಯಾಯಪೀಠ, ಸಣ್ಣ ವ್ಯಕ್ತಿಗಳ ವಿಚಾರದಲ್ಲಿ ಒಂದೇ ದಿನ ಕ್ರಮ ಕೈಗೊಳ್ಳುತ್ತೀರಿ, ದೊಡ್ಡ ವ್ಯಕ್ತಿಗಳಾದರೆ ಈ ರೀತಿ ವಿಳಂಬ ಮಾಡುತ್ತೀರಿ ಎಂದು ಕಟುವಾಗಿ ನುಡಿದರು.
ಪ್ರಕರಣದಲ್ಲಿ ಈವರೆಗೂ ಒತ್ತುವರಿದಾರರಿಗೆ ನೋಟಿಸ್ ಜಾರಿಗೊಳಿಸುವ ಹಾಗೂ ಜಮೀನು ಮಹಜರ್ ನಡೆಸುವ ಕಾರ್ಯ ಮಾಡಿಲ್ಲ. ಕೋರ್ಟ್‌ಗೆ ಸಲ್ಲಿಸಿದ ದಾಖಲೆಗಳಲ್ಲಿ ಸರ್ವೇ ಮಾಡಿದ ಮತ್ತು ವಶಕ್ಕೆ ಪಡೆದ ಬಗ್ಗೆ ಯಾವುದೇ ಅಂಶ ಉಲ್ಲೇಖಿಸಿಲ್ಲ. ಕೋರ್ಟ್ ಆದೇಶವನ್ನು ಸರ್ಕಾರ ಅನುಷ್ಠಾನ ಮಾಡದಿದ್ದಲ್ಲಿ ನ್ಯಾಯಾಲಯವೇ ಅನುಷ್ಠಾನ ಮಾಡಲಿದೆ ಎಂದು ನ್ಯಾಯಮೂರ್ತಿ ಎಚ್ಚರಿಕೆ ನೀಡಿದರು.
ಚಿಂತಿಸಬೇಡಿ
ವಿಚಾರಣೆ ವೇಳೆ ನ್ಯಾಯಾಲಯದ ಮೊದಲ ಸಾಲಿನ ಸೀಟಿನಲ್ಲಿ ಕುಳಿತಿದ್ದ ಸಿಎಸ್ ವಂದಿತಾ ಶರ್ಮಾ ಅವರು, ನ್ಯಾಯಪೀಠದ ಕಟು ನುಡಿಗಳಿಗೆ ಸ್ವಲ್ಪ ಗಾಬರಿಯಾದಂತೆ ಕಂಡುಬಂದರು. ಇದೇ ವೇಳೆ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಮುಖ್ಯಕಾರ್ಯದರ್ಶಿಗಳು ಪ್ರಾಮಾಣಿಕರಿದ್ದಾರೆ ಎಂಬುದು ನಮಗೆ ಗೊತ್ತಿದೆ. ಅವರಿಗೆ ಮುಕ್ತ ಅವಕಾಶ ಕಲ್ಪಿಸಿದರೆ ಅದ್ಭುತ ಸೃಷ್ಟಿಸಲಿದ್ದಾರೆ. ನೀವು ಹೆಚ್ಚು ಚಿಂತಿಸಬೇಡಿ. ಇತ್ತೀಚೆಗಷ್ಟೇ ನಾವು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಿದ್ದೇವೆ. ಮಹಿಳಾ ಸಬಲೀಕರಣವನ್ನು ಜಾರಿ ಮಾಡಿ. ಹಿಂಜರಿಯದೇ ಪ್ರಕರಣದಲ್ಲಿ ನಿಮ್ಮ ಅಧಿಕಾರ ಬಳಸಿ ಕ್ರಮ ಕೈಗೊಳ್ಳಿ ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು.
Land-grab: ನಗರದಾಚೆಗಿನ ಭೂಕಬಳಿಕೆಗೆ ಕ್ರಿಮಿನಲ್ ಕೇಸಿಲ್ಲ
ಪ್ರಕರಣದ ಹಿನ್ನೆಲೆ
ಎಚ್.ಡಿ. ಕುಮಾರಸ್ವಾಮಿ ಹಾಗೂ ಮತ್ತವರ ಸಂಬಂಧಿಗಳಾದ ಸಾವಿತ್ರಮ್ಮ ಹಾಗೂ ಡಿ. ಸಿ. ತಮ್ಮಣ್ಣ ಪ್ರಭಾವ ಬಳಸಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ದಿವಂಗತ ಜಿ. ಮಾದೇಗೌಡ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಸಮಗ್ರ ತನಿಖೆ ನಡೆಸಬೇಕು ಎಂದು ಕಂದಾಯ ಇಲಾಖೆಗೆ ಲೋಕಾಯುಕ್ತರು 2014ರ ಆ.4ರಂದು ಆದೇಶಿಸಿದ್ದರು. ಈ ಆದೇಶವನ್ನು ಎತ್ತಿಹಿಡಿದಿದ್ದ ಹೈಕೋರ್ಟ್, ಲೋಕಾಯುಕ್ತರ ಆದೇಶ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ಹೈಕೋರ್ಚ್ ಆದೇಶ ಪಾಲಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.
ಎಚ್‌ಡಿಕೆ, ಡಿ.ಸಿ.ತಮ್ಮಣ್ಣ, ಸಾವಿತ್ರಮ್ಮರಿಂದ 14 ಎಕರೆ ಸರ್ಕಾರಿ ಜಮೀನು ಕಬಳಿಕೆ, ಎರಡು ವಾರದಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ.