
ಬೆಂಗಳೂರು(ಮಾ.17): ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡುವ ಮುಖ್ಯಮಂತ್ರಿಗಳ ಭರವಸೆಯನ್ನು ಒಪ್ಪುವುದಿಲ್ಲ. ಬೇಡಿಕೆಗಳನ್ನು ಈಡೇರಿಸದ ಹೊರತು ಮುಷ್ಕರ ಹಿಂಪಡೆಯುವ ಮಾತೇ ಇಲ್ಲ. ನಿಗದಿಯಂತೆ ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು ಕೆಎಸ್‌ಆರ್‌ಟಿಸಿ ನೌಕರರ ಸಂಘದ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೇ.15ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಏಕಪಕ್ಷೀಯವಾಗಿ ನೀಡಿರುವ ಹೇಳಿಕೆಗೆ ಸಮ್ಮತವಿಲ್ಲ. ಸಾರಿಗೆ ನೌಕರರಿಗೆ ಶೇ.25ರಷ್ಟು ವೇತನ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆದು ಮಾತನಾಡಿದರೆ ಸಮಸ್ಯೆ ಇತ್ಯರ್ಥ ಆಗುತ್ತದೆ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
20% ವೇತನ ಏರಿಕೆಗೆ ಕೆಎಸ್‌ಆರ್‌ಟಿಸಿ ನೌಕರರ ಪಟ್ಟು
ವಜಾಗೊಂಡ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅವರ ವಿರುದ್ಧ ದಾಖಲಾಗಿರುವ ಕೇಸುಗಳನ್ನು ಹಿಂಪಡೆಯಬೇಕು. ಭತ್ಯೆ, ಬಾಟಾ ಹೆಚ್ಚಿಸಬೇಕು. ಈ ಬಗ್ಗೆ ಆದೇಶಕ್ಕೆ ಕಾಯುತ್ತಿದ್ದೇವೆ ಎಂದರು.
ಚುನಾವಣೆ ಪ್ರಕ್ರಿಯೆ ಇರುವುದರಿಂದ ನಾವು ಮಾರ್ಚ್ 21ರಂದು ಮುಷ್ಕರಕ್ಕೆ ಕರೆ ನೀಡಿದ್ದೇವೆ. ಜನರಿಗೆ ತೊಂದರೆ ಮಾಡುವ ಉದ್ದೇಶ ನಮಗಿಲ್ಲ. ಸರ್ಕಾರದಿಂದ ಆದೇಶದ ಪ್ರತಿ ಬಂದ ನಂತರ ಅದರಲ್ಲಿ ಯಾವ ಅಂಶ ಇದೆ ಎಂಬುದನ್ನು ನೋಡಬೇಕಿದೆ. ಸದ್ಯಕ್ಕೆ ಯಾವುದೇ ಆದೇಶ ಬಾರದ ಹಿನ್ನೆಲೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಪಿಟಿಸಿಎಲ್ ಅವರಿಗೆ ಶೇ.20ರಷ್ಟು ಏರಿಕೆ ಮಾಡಿ ಮುಖ್ಯಮಂತ್ರಿಯವರು ನಮಗ್ಯಾಕೆ ಚೌಕಾಸಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಶುಕ್ರವಾರ ಸಾರಿಗೆ ನೌಕರರ ಸಂಘದ ಸಮಾವೇಶ ನಡೆಯಲಿದೆ. ಈ ನಡುವೆ ಮುಖ್ಯಮಂತ್ರಿಯವರು ನಮ್ಮನ್ನು ಕರೆದು ಮಾತನಾಡದಿದ್ದರೆ ಖಂಡಿತಾ ಮುಷ್ಕರ ನಡೆಯಲಿದೆ. ನಮ್ಮ ಜೊತೆ ಸಭೆ ಮಾಡದೇ ಶೇ.15ರಷ್ಟುವೇತನ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ಶುಕ್ರವಾರ ಬೊಮ್ಮಾಯಿ ಅವರು ನಮ್ಮ ಜೊತೆ ಚರ್ಚೆಗೆ ಬರಬೇಕು ಎಂದು ಅನಂತ ಸುಬ್ಬರಾವ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ