ಸಾರ್ವಜನಿಕ ಟಾಯ್ಲೆಟ್‌ ಸ್ಥಿತಿಗತಿ ವರದಿ ನೀಡದ ಸರ್ಕಾರಕ್ಕೆ5 ಲಕ್ಷ ದಂಡ ವಿಧಿಸಿದ ಹೈಕೋರ್ಟ್!

By Kannadaprabha News  |  First Published Oct 5, 2023, 6:23 AM IST

ನ್ಯಾಯಾಲಯದ ನಿರ್ದೇಶನ ನೀಡಿದ್ದರೂ ಬೆಂಗಳೂರು ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಹಾಗೂ ನಿರ್ವಹಣೆ ವಿಚಾರದಲ್ಲಿ ವಿವರವಾದ ವರದಿ/ ಆಕ್ಷೇಪಣಾ ಹೇಳಿಕೆ ಸಲ್ಲಿಸದ ಕಾರಣ ರಾಜ್ಯ ಸರ್ಕಾರಕ್ಕೆ ₹5 ಲಕ್ಷ ದಂಡ ವಿಧಿಸಿ ಹೈಕೋರ್ಟ್ ಬುಧವಾರ ಆದೇಶಿಸಿದೆ.


ಬೆಂಗಳೂರು (ಅ.05): ನ್ಯಾಯಾಲಯದ ನಿರ್ದೇಶನ ನೀಡಿದ್ದರೂ ಬೆಂಗಳೂರು ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಹಾಗೂ ನಿರ್ವಹಣೆ ವಿಚಾರದಲ್ಲಿ ವಿವರವಾದ ವರದಿ/ ಆಕ್ಷೇಪಣಾ ಹೇಳಿಕೆ ಸಲ್ಲಿಸದ ಕಾರಣ ರಾಜ್ಯ ಸರ್ಕಾರಕ್ಕೆ ₹5 ಲಕ್ಷ ದಂಡ ವಿಧಿಸಿ ಹೈಕೋರ್ಟ್ ಬುಧವಾರ ಆದೇಶಿಸಿದೆ. ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ದುಃಸ್ಥಿತಿ ಮತ್ತು ಅಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಲೆಟ್ಜ್‌ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರ್ಕಾರಕ್ಕೆ ದಂಡ ವಿಧಿಸಿ ಸರ್ಕಾರಕ್ಕೆ ಇದೇ ಭಾಷೆ ಅರ್ಥವಾಗುತ್ತದೆ ಎಂದು ನುಡಿದಿದೆ.

ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರ ಸಂಸ್ಥೆ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್, ಪ್ರಕರಣವು ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಒಂದೇ ಒಂದು ಹೇಳಿಕೆ, ವರದಿ, ಪ್ರಮಾಣಪತ್ರ ಅಥವಾ ಆಕ್ಷೇಪಣೆ ಸಲ್ಲಿಸಿಲ್ಲ. ಆ ಮೂಲಕ ರಾಜ್ಯ ಸರ್ಕಾರ ಗಾಢ ಮೌನವಹಿಸಿದೆ. ಅದರಲ್ಲೂ ಮೂರು ವಾರಗಳಲ್ಲಿ ವಿವರವಾದ ಆಕ್ಷೇಪಣಾ ವರದಿ ಸಲ್ಲಿಸುವಂತೆ ಸೂಚಿಸಿ 2022ರ ಆ.8ರಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ. ಹೀಗಿದ್ದರೂ ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

Tap to resize

Latest Videos

ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ: ನಿಖಿಲ್ ಕುಮಾರಸ್ವಾಮಿ

ಆ ಬಗ್ಗೆ ನ್ಯಾಯಪೀಠ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಸರ್ಕಾರಿ ವಕೀಲರು, ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಂದ ಪ್ರಕರಣದ ಕುರಿತು ತಮಗೆ ಯಾವುದೇ ನಿರ್ದೇಶನ ಹಾಗೂ ಮಾಹಿತಿ ಬಂದಿಲ್ಲ ಎಂದರು. ಇದರಿಂದ ತೀವ್ರವಾಗಿ ಅಸಮಾಧಾನಗೊಂಡ ನ್ಯಾಯಪೀಠ, ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಸರ್ಕಾರಿ ವಕೀಲರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಸರ್ಕಾರದ ಈ ಧೋರಣೆಯನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿ ಸರ್ಕಾರಕ್ಕೆ ₹5 ಲಕ್ಷ ದಂಡ ವಿಧಿಸಿತು.

ಅಲ್ಲದೆ, ರಾಜ್ಯ ಸರ್ಕಾರವು ಈ ₹5 ಲಕ್ಷ ದಂಡ ಮೊತ್ತವನ್ನು ಎರಡು ವಾರದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳ ಖಾತೆಗೆ ಜಮೆ ಮಾಡಬೇಕು. ಹಾಗೆಯೇ, ನ್ಯಾಯಾಲಯದ ಆದೇಶ ಪಾಲನೆ ಮಾಡದ ಬಗ್ಗೆ ವಿವರಣೆ ನೀಡಲು ನ.2ರಂದು ರಾಜ್ಯ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿ ವಿಚಾರಣೆ ಮುಂದೂಡಿತು.

ಮಿಸ್ಟರ್ ಡಿಕೆಶಿ ನಿಮ್ಮ ಕೆಟ್ಟ ರಾಜಕೀಯ, ಆಟ ನಡೆಯಲ್ಲ: ದೇವೇಗೌಡ

ಸರ್ಕಾರಕ್ಕೆ ‘ದಂಡ’ ಭಾಷೆಯೇ ಅರ್ಥವಾಗೋದು: ನ್ಯಾಯಪೀಠವು ₹5 ಲಕ್ಷ ದಂಡವನ್ನು ವಿಧಿಸಿ ಆದೇಶ ಪ್ರಕಟಿಸಿದ ನಂತರ, ದಂಡದ ಮೊತ್ತ ಕಡಿಮೆ ಮಾಡುವಂತೆ ಸರ್ಕಾರಿ ಪರ ವಕೀಲರು ಕೋರಿದರು. ಅದಕ್ಕೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಪ್ರತಿಕ್ರಿಯಿಸಿ, ನನ್ನ ಪ್ರಕಾರ ಸರ್ಕಾರದ ಈ ನಡೆಗೆ ₹25 ಲಕ್ಷ ದಂಡ ವಿಧಿಸಬೇಕು. ಆದರೆ, ಮುಖ್ಯ ನ್ಯಾಯಮೂರ್ತಿಗಳು ಕರುಣೆ ತೋರಿ ₹5 ಲಕ್ಷ ದಂಡ ವಿಧಿಸಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳಿಗೆ ಇಂತಹದ್ದೇ ಭಾಷೆ ಅರ್ಥವಾಗುತ್ತದೆ. ಈ ಮಾತು ಹೇಳಲು ನಮಗೆ ಬೇಸರವಾಗುತ್ತದೆ ಎಂದು ಸರ್ಕಾರದ ಧೋರಣೆಗೆ ಚಾಟಿ ಬೀಸಿದರು.

click me!