1 ಲಕ್ಷ ರು. ದಂಡ ವಿಧಿಸಿದ ಹೈಕೋರ್ಟ್| ಆಟಿಕೆ ಮಾರುವ ಮಕ್ಕಳ ಪುನರ್ವಸತಿಗೆ ಬಳಸಲು ಸೂಚನೆ| ಸೋಸಲೆ ಮಠದ ಸಿವಿಲ್ ವ್ಯಾಜ್ಯ ಪ್ರಕರಣ|
ಬೆಂಗಳೂರು(ಜ.13): ಸೋಸಲೆ ವ್ಯಾಸರಾಜ ಮಠದ ವಿರುದ್ಧದ ಸಿವಿಲ್ ವ್ಯಾಜ್ಯವೊಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಅರ್ಜಿದಾರನಿಗೆ ಹೈಕೋರ್ಟ್ ಒಂದು ಲಕ್ಷ ರು. ದಂಡ ವಿಧಿಸಿದೆ.
ಬೆಂಗಳೂರಿನ ಗವಿಪುರ ಎಕ್ಸ್‌ಟೆನ್ಷನ್ ನಿವಾಸಿ ವಿ.ಗುರುರಾಜ್ ಸೋಸಲೆ ವ್ಯಾಸರಾಜ ಮಠದ ವಿರುದ್ಧ ಸಿವಿಲ್ ವ್ಯಾಜ್ಯ ಕುರಿತು ಅರ್ಜಿ ಸಲ್ಲಿಸಿದ್ದರು. ರಾಜ್ಯದ ಬಹುತೇಕ ಎಲ್ಲ ನ್ಯಾಯಮೂರ್ತಿಗಳು ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಯೊಬ್ಬರ ಪ್ರಭಾವಕ್ಕೆ ಒಳಗಾಗಿದ್ದಾರೆ. ಹೀಗಾಗಿ, ತನ್ನ ಅರ್ಜಿಯನ್ನು ಕರ್ನಾಟಕ ಮೂಲದ ನ್ಯಾಯಮೂರ್ತಿಗಳ ಬದಲಿಗೆ ಹೊರ ರಾಜ್ಯದ ನ್ಯಾಯಮೂರ್ತಿಯವರ ಮುಂದೆ ವಿಚಾರಣೆಗೆ ನಿಗದಿ ಮಾಡುವಂತೆ ಅರ್ಜಿಯಲ್ಲಿ ಕೋರಿದ್ದರು.
ಮಧ್ಯಪ್ರದೇಶ ಜಡ್ಜ್ ಸತೀಶ್ ಚಂದ್ರ ಶರ್ಮಾ ಕರ್ನಾಟಕ ಹೈಕೋರ್ಟ್‌ಗೆ
ಅದನ್ನ ತೀವ್ರವಾಗಿ ಆಕ್ಷೇಪಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಪದೇ ಪದೇ ನಿವೃತ್ತ ಸಿಜೆಐ ವಿರುದ್ಧ ಆರೋಪ ಮಾಡಿದ್ದಾರೆ. ಈ ರೀತಿ ಆರೋಪ ಮಾಡಿರುವುದು ದುರದೃಷ್ಟಕರ. ಅರ್ಜಿದಾರರ ಮನವಿ ಆಘಾತಕಾರಿಯಾಗಿದೆ. ಇದು ನ್ಯಾಯಾಂಗದ ಘನತೆಗೆ ಧಕ್ಕೆ ತರುತ್ತಿದೆ. ವಿನಾಕಾರಣ ನ್ಯಾಯಮೂರ್ತಿಗಳ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸುತ್ತಿರುವುದು ಖಂಡನೀಯ. ಇಂತಹ ನಡವಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ಅರ್ಜಿದಾರನಿಗೆ ಒಂದು ಲಕ್ಷ ರು. ದಂಡ ವಿಧಿಸಿತು. ಆ ದಂಡದ ಮೊತ್ತವನ್ನು ರಸ್ತೆಯ ಸಿಗ್ನಲ್‌ಗಳಲ್ಲಿ ಆಟಿಕೆ ಮಾರುವ ಮಕ್ಕಳ ಪುನರ್ವಸತಿಗೆ ಬಳಸುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿತು.