ಹಳ್ಳಿಗಳ ಬಗ್ಗೆ ಎಚ್ಚರ : ಸೋಂಕು ಹರಡಲು ಬಿಡಬೇಡಿ

By Kannadaprabha NewsFirst Published Apr 30, 2021, 8:13 AM IST
Highlights

ಬೆಂಗಳೂರಿನಿಂದ ಹಳ್ಳಿಗಳ ಕಡೆಗೆ ಹಿಂತಿರುಗಿರುವುದರಿಂದ ಅವರ ಬಗ್ಗೆ ಜಿಲ್ಲಾಡಳಿತಗಳು ಹೆಚ್ಚಿನ ನಿಗಾ ವಹಿಸಬೇಕು. ಗ್ರಾಮ ಪಂಚಾಯ್ತಿಗಳಲ್ಲಿ ಹಾಗೂ ತಾಲೂಕುಗಳಲ್ಲಿ ಟಾಸ್ಕ್‌ಪೋರ್ಸ್‌ ರಚನೆ ಮಾಡುವ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಸರಿಯಾದ ಕಾಳಜಿ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ. 

  ಬೆಂಗಳೂರು (ಏ.30):  ಕೋವಿಡ್‌ ನಿಯಂತ್ರಣಕ್ಕಾಗಿ ಜನತಾ ಕರ್ಫ್ಯೂ ವಿಧಿಸಿದ ಬಳಿಕ ಬಹಳಷ್ಟುಜನರು ಬೆಂಗಳೂರಿನಿಂದ ಹಳ್ಳಿಗಳ ಕಡೆಗೆ ಹಿಂತಿರುಗಿರುವುದರಿಂದ ಅವರ ಬಗ್ಗೆ ಜಿಲ್ಲಾಡಳಿತಗಳು ಹೆಚ್ಚಿನ ನಿಗಾ ವಹಿಸಬೇಕು. ಗ್ರಾಮ ಪಂಚಾಯ್ತಿಗಳಲ್ಲಿ ಹಾಗೂ ತಾಲೂಕುಗಳಲ್ಲಿ ಟಾಸ್ಕ್‌ಪೋರ್ಸ್‌ ರಚನೆ ಮಾಡುವ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಸರಿಯಾದ ಕಾಳಜಿ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ.

ಅಲ್ಲದೆ, ರೆಮ್‌ಡೆಸಿವಿರ್‌ ಚುಚ್ಚುಮದ್ದು ಮತ್ತು ಆಮ್ಲಜನಕದ ವಿವೇಚನಾರಹಿತ ಬಳಕೆ ತಡೆಗಟ್ಟಬೇಕು. ಪ್ರತಿ ಆಸ್ಪತ್ರೆಯಲ್ಲಿ ರೆಮ್‌ಡೆಸಿವಿರ್‌ ಮತ್ತು ಆಮ್ಲಜನಕ ಬಳಕೆಯಾಗಿರುವ ಬಗ್ಗೆ ಆಡಿಟ್‌ ಆಗಬೇಕು ಎಂದೂ ಅವರು ತಿಳಿಸಿದ್ದಾರೆ.

ಗುರುವಾರ ತಮ್ಮ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಡೀನ್‌ ಮತ್ತು ನಿರ್ದೇಶಕರ ಜತೆ ವಿಡಿಯೋ ಸಂವಾದ ನಡೆಸಿ, ಜಿಲ್ಲೆ, ತಾಲೂಕಿನಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳ ವ್ಯವಸ್ಥೆ ಮತ್ತು ಜಿಲ್ಲೆಯಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಗ್ರಾಮೀಣ ಭಾಗದಲ್ಲಿ ರಚನೆ ಮಾಡುವ ಟಾಸ್ಕ್‌ಪೋರ್ಸ್‌ನಲ್ಲಿ ಪಿಡಿಓಗಳನ್ನು ಸಹ ಸೇರಿಸಿಕೊಳ್ಳಬೇಕು. ಪರೀಕ್ಷೆಗಳ ಕೇವಲ ರೋಗಲಕ್ಷಣ ಇದ್ದವರಿಗೆ ಸೀಮಿತ ಮಾಡಿ ಮತ್ತು ಪರೀಕ್ಷಾ ವರದಿಯನ್ನು 24 ಗಂಟೆಯಲ್ಲಿ ನೀಡುವ ವ್ಯವಸ್ಥೆ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದ್ದು, ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿರುವವರಿಗೆ ಮೆಡಿಕಲ್‌ ಕಿಟ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಇವರ ಆರೋಗ್ಯ ಮೇಲ್ವಿಚಾರಣೆಗಾಗಿ ತಂಡಗಳನ್ನು ರಚನೆ ಮಾಡಬೇಕು ಎಂದು ಸೂಚಿಸಿದರು.

ಅಪಾಯದ ಮಟ್ಟ ದಾಟಿದ ರಾಜ್ಯದ 19 ಜಿಲ್ಲೆಗಳು : ಜನರೇ ಎಚ್ಚರ! ...

ಕೋವಿಡ್‌ ಸೋಂಕು ತಡೆಗಟ್ಟುವ ಕ್ರಮಗಳನ್ನು ಆದ್ಯತೆ ಮೇರೆಗೆ ಜಿಲ್ಲಾಧಿಕಾರಿಗಳು ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಮಾಸ್ಕ್‌ ಹಾಕುತ್ತಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಕೆಲವು ಜಿಲ್ಲೆಯಲ್ಲಿ ಇನ್ನೂ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆಗೆದಿಲ್ಲ. ಅಂತಹ ಜಿಲ್ಲೆಯಲ್ಲಿ ಅದಷ್ಟುಬೇಗ ಕೇಂದ್ರಗಳನ್ನು ತೆಗೆಯಲು ಕ್ರಮ ಕೈಗೊಳ್ಳಬೇಕು. ಎಲ್ಲಾ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆಯಬೇಕು. ಇದಕ್ಕಾಗಿ ವಸತಿ ಶಾಲೆಗಳು, ಹಾಸ್ಟೆಲ್‌ಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಸೋಂಕಿನ ಯಾವ ಹಂತದಲ್ಲಿ ರೆಮ್‌ಡೆಸಿವಿರ್‌ ಬಳಸಬೇಕು ಎಂಬುದರ ಬಗ್ಗೆ ಸ್ಪಷ್ಟನಿರ್ದೇಶನ ಇದೆ. ಅನಗತ್ಯವಾಗಿ ರೆಮ್‌ಡೆಸಿವಿರ್‌ ಬಳಕೆ ಮಾಡುವ ಬಗ್ಗೆ ನಿಗಾವಹಿಸಬೇಕು. ಅಂತೆಯೇ ವೆಂಟಿಲೇಟರ್‌ ಹಾಸಿಗೆಗಳನ್ನು ಸಹ ಅತ್ಯಂತ ವಿವೇಚನೆಯಿಂದ ಬಳಸಬೇಕು. ಯಾವುದಾದರೂ ಜಿಲ್ಲೆಯಲ್ಲಿ ಆಕ್ಸಿಜನ್‌ ಕೊರತೆಯಾದರೆ ತುರ್ತು ಸಂದರ್ಭದಲ್ಲಿ ನೆರೆಯ ಜಿಲ್ಲೆಯಿಂದ ಪಡೆದುಕೊಳ್ಳಬೇಕು. ಜಿಲ್ಲಾಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಮತ್ತು ಇತರೆ ಸಂಪನ್ಮೂಲಗಳನ್ನು ಕೋವಿಡ್‌ ನಿರ್ವಹಣೆಗಾಗಿ ಬಳಸಿಕೊಳ್ಳಬೇಕು ಎಂದರು.

ಮುಂದೆ ಕಾದಿದೆ ದೊಡ್ಡ ಗಂಡಾಂತರ : 5 ಲಕ್ಷ ಐಸಿಯು ಬೇಕು! ..

ಆಕ್ಸಿಜನ್‌, ರೆಮ್‌ಡೆಸಿವಿರ್‌ ಬಳಕೆ ಆಡಿಟ್‌ ಆಗಲಿ:  ಎಲ್ಲಾ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಸರಿಯಾದ ಸಮಯದಲ್ಲಿ ಆಗುವಂತೆ ಮಾಡಬೇಕು. ಪ್ರತಿ ಆಸ್ಪತ್ರೆಯಲ್ಲಿ ರೆಮ್‌ಡೆಸಿವಿರ್‌ ಔಷಧ ಮತ್ತು ಆಮ್ಲಜನಕ ಬಳಕೆ ಬಗ್ಗೆ ಆಡಿಟ್‌ ಆಗಬೇಕು. ಯಾರಿಗೆ ಅತ್ಯವಶ್ಯಕ ಇದೆಯೋ ಅವರಿಗೆ ಕೊಡುವ ವ್ಯವಸ್ಥೆಯಾಗಬೇಕು. ರೆಮ್‌ಡೆಸಿವಿರ್‌ ಮತ್ತು ಆಮ್ಲಜನಕ ಹಾಸಿಗೆಗಳ ವಿವೇಚನಾರಹಿತ ಬಳಕೆಯಾಗದಂತೆ ತಡೆಗಟ್ಟಬೇಕು. ಅಗತ್ಯ ಇರುವವರಿಗೆ ಮಾತ್ರ ರೆಮ್‌ಡೆಸಿವಿರ್‌ ಮತ್ತು ಆಕ್ಸಿಜನೇಟೆಡ್‌ ಹಾಸಿಗೆಗಳನ್ನು ಒದಗಿಸುವ ಮೂಲಕ ಕೃತಕ ಅಭಾವ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಖಾಸಗಿ ಆಸ್ಪತ್ರೆಗಳು ಮನಸೋ ಇಚ್ಛೆ ರೆಮ್‌ಡೆಸಿವರ್‌ ಔಷಧಿಯನ್ನು ಬಳಸುತ್ತಿವೆ. ಯಾರಿಗೆ ಅಗತ್ಯ ಇದೆಯೋ ಅಂತಹವರಿಗೆ ಮಾತ್ರ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂಚನೆಯಂತೆ ಬಳಕೆ ಮಾಡಬೇಕು. ಇದನ್ನು ದುರುಪಯೋಗ ಮಾಡಿಕೊಳ್ಳುವ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ್‌, ಡಾ.ಕೆ.ಸುಧಾಕರ್‌ ಮತ್ತಿತರರು ಉಪಸ್ಥಿತರಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!