Karnataka Rains: ಕರ್ನಾಟಕದ 6 ಜಿಲ್ಲೆಗಳಲ್ಲಿ ಇಂದೂ ಕೂಡ ಭಾರೀ ಮಳೆ..!

By Kannadaprabha NewsFirst Published Sep 8, 2022, 4:00 AM IST
Highlights

ಕೊಡಗು, ಹಾಸನದಲ್ಲಿ 20 ಸೆಂ.ಮೀ.ಗಿಂತ ಹೆಚ್ಚು ಮಳೆ ಸಾಧ್ಯತೆ, 4 ಜಿಲ್ಲೆಗಳಲ್ಲಿ 11ರಿಂದ 29 ಸೆಂ.ಮೀ. ಮಳೆ ಸಂಭವ, ಶನಿವಾರದ ತನಕ ಮಳೆ ಅಬ್ಬರ: ಹವಾಮಾನ ಇಲಾಖೆ

ಬೆಂಗಳೂರು(ಸೆ.08):  ರಾಜ್ಯದ ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ರವರೆಗೆ 20.44 ಸೆಂ.ಮೀಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಕೇಂದ್ರ ‘ರೆಡ್‌ ಅಲರ್ಟ್‌’ ಹಾಗೂ ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 11.56 ಸೆಂ.ಮೀನಿಂದ 20.44 ಸೆಂ.ಮೀ ತನಕ ಮಳೆ ಆಗುವ ನಿರೀಕ್ಷೆಯಿದ್ದು ‘ಆರೆಂಜ್‌ ಅಲರ್ಟ್‌’ ಎಚ್ಚರಿಕೆ ನೀಡಿದೆ. 

ಉಳಿದಂತೆ ಮಂಡ್ಯ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ, ಕೊಪ್ಪಳ, ಗದಗ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಗುರುವಾರದಿಂದ ಶುಕ್ರವಾರ ಬೆಳಗ್ಗೆ 8.30ರವರೆಗೆ ಚಿಕ್ಕಮಗಳೂರು, ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್‌ ಅಲರ್ಟ್‌’, ಹಾಸನ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಗದಗ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಯಾದಗಿರಿ, ಬಾಗಲಕೋಟೆ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

Karnataka Floods: ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ

ಶುಕ್ರವಾರದಿಂದ ಶನಿವಾರದ ತನಕ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಲಿದ್ದು ಕರಾವಳಿ, ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಬೆಳಗಾವಿ ಜಿಲ್ಲೆಗೆ ‘ಆರೆಂಜ್‌ ಅಲರ್ಟ್‌’, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ಪ್ರಕಟಿಸಲಾಗಿದೆ. ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಉತ್ತರ ಒಳನಾಡಿನಲ್ಲಿ ಭಾರಿ ಮಳೆಯಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕಾಗಿತ್ತು.

ಗುತ್ತಲದಲ್ಲಿ ಅತ್ಯಧಿಕ 15 ಸೆಂ.ಮೀ. ಮಳೆ:

ಹಾವೇರಿಯ ಗುತ್ತಲ 15 ಸೆಂ.ಮೀ, ಚಿಕ್ಕಮಗಳೂರಿನ ಅಜ್ಜಂಪುರ 12, ಮಂಗಳೂರು ವಿಮಾನ ನಿಲ್ದಾಣ 11, ಮಂಗಳೂರು ಹಾಗೂ ಕಲಬುರಗಿಯ ನಾಲವಾರ ತಲಾ 10, ಉಡುಪಿಯ ಬ್ರಹ್ಮಾವರ ಮತ್ತು ಕುಂದಾಪುರ ತಲಾ 9, ದಕ್ಷಿಣ ಕನ್ನಡದ ಪುತ್ತೂರು, ಗದಗ, ಯಾದಗಿರಿಯ ಕಕ್ಕೇರಾ, ತುಮಕೂರಿನ ತಿಪಟೂರಿನಲ್ಲಿ ತಲಾ 8 ಸೆಂ.ಮೀ ಮಳೆಯಾಗಿದೆ.
 

click me!