ಕೇಂದ್ರದ ವಿದ್ಯುತ್‌ ಕಾಯ್ದೆ ತಿರಸ್ಕರಿಸಿ: ರಾಜ್ಯಕ್ಕೆ ಸಿದ್ದು ಸವಾಲು

By Kannadaprabha NewsFirst Published Sep 8, 2022, 1:30 AM IST
Highlights

ಪಂಪ್‌ಸೆಟ್‌ಗಳಿಗೆ ಮೀಟರ್‌ ಹಾಕುವ ಕಾಯಿದೆ ಇದು, ಇಂಧನ ಇಲಾಖೆ ವಹಿವಾಟು ಬಗ್ಗೆ ಶ್ವೇತಪತ್ರ ಹೊರಡಿಸಿ: ಸಿದ್ದರಾಮಯ್ಯ 

ಬೆಂಗಳೂರು(ಸೆ.08):  ‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಲು ಹುನ್ನಾರ ನಡೆದಿತ್ತು’ ಎನ್ನುವುದು ಸೇರಿದಂತೆ ಸಾಲು-ಸಾಲು ಸುಳ್ಳು ಆರೋಪ ಮಾಡಿರುವ ಇಂಧನ ಸಚಿವ ಸುನಿಲ್‌ ಕುಮಾರ್‌ ಅವರು ಕೂಡಲೇ ಇಂಧನ ಇಲಾಖೆಯಲ್ಲಿ ಕಳೆದ 15 ವರ್ಷಗಳಲ್ಲಿ ಏನೇನಾಗಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಜತೆಗೆ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಕೇಂದ್ರದ ವಿದ್ಯುತ್‌ ಮಸೂದೆಯನ್ನು ತಿರಸ್ಕರಿಸಲು ಮುಂದಿನ ಅಧಿವೇಶನದಲ್ಲಿ ನಿರ್ಣಯ ಮಂಡಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ರಾಜ್ಯ ಬಿಜೆಪಿ ಸರ್ಕಾರಕ್ಕೆ ವಿದ್ಯುತ್‌ ಇಲಾಖೆಯ ಕುರಿತು ತನಿಖೆ ಮಾಡುವ ಉದ್ದೇಶವಿದ್ದರೆ, 2008 ರಿಂದ ನಡೆದ ಎಲ್ಲ ಖರೀದಿ ಒಪ್ಪಂದ ಹಾಗೂ ಪ್ರತಿಯೊಂದು ವಹಿವಾಟುಗಳನ್ನೂ ಸೇರಿಸಿ ತನಿಖೆ ಮಾಡಬೇಕು. ಈ ತನಿಖೆಯ ನೇತೃತ್ವವನ್ನು ಹೈಕೋರ್ಚ್‌ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿಯೇ ನಡೆಸಬೇಕು’ ಎಂದೂ ಒತ್ತಾಯಿಸಿದ್ದಾರೆ.

ಇಂಧನ ಇಲಾಖೆ ದಿವಾಳಿಗೆ ಸಿದ್ದು ಕಾರಣ: ಸಚಿವ ಸುನೀಲ್‌ ಕುಮಾರ್‌ ತಿರುಗೇಟು

ನಿಮ್ಮ ವಿಶ್ವಗುರು ರಾಜ್ಯದ ಲೆಕ್ಕ ಕೊಡಿ: ಸಿದ್ದು

ಸಿದ್ದರಾಮಯ್ಯ ಸರ್ಕಾರ ಅವಾಸ್ತವಿಕ ಖರೀದಿ ಒಪ್ಪಂದ ಮಾಡಿಕೊಂಡಿತ್ತು ಎಂದು ಆರೋಪ ಮಾಡಿದ್ದೀರಿ. ಈ ದರಗಳನ್ನು ಕಡಿಮೆ ಮಾಡಿ, 3 ರು. ಒಳಗೆ ಒಪ್ಪಂದ ಮಾಡಿಕೊಂಡಿದ್ದರೆ ರಾಜ್ಯಕ್ಕೆ 2000 ಸಾವಿರ ಕೋಟಿ ರು.ನಷ್ಟತಪ್ಪುತ್ತಿತ್ತು ಎಂದೂ ಹೇಳಿದ್ದೀರಿ. ಆದರೆ ನಿಮ್ಮ ವಿಶ್ವಗುರು ಮೋದಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮತ್ತು ಆ ನಂತರದಲ್ಲಿ ಗುಜರಾತ್‌ನಲ್ಲಿ ಪ್ರತಿ ಯೂನಿಟ್‌ಗೆ 15 ರು.ಗೆ ಖರೀದಿಸುತ್ತಿದ್ದರು. ಆಗ ನಾವು 5 ರು.ಗೆ ಒಪ್ಪಂದ ಮಾಡಿಕೊಂಡಿದ್ದೆವು. ದೇಶದಲ್ಲಿ ಯಾವ, ಯಾವ ರಾಜ್ಯಗಳು 2010 ರಿಂದ 2022 ರವರೆಗೆ ಎಷ್ಟುರೂಪಾಯಿಗಳಿಗೆ ಸೋಲಾರ್‌ ವಿದ್ಯುತ್‌ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂಬುದರ ಕುರಿತು ಶ್ವೇತ ಪತ್ರವನ್ನು ಹೊರಡಿಸಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸುನಿಲ್‌ ಕುಮಾರ್‌ ಹೇಳಿಕೆ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ತಿರುಗೇಟು ನೀಡಿರುವ ಅವರು, ‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಲು ಹುನ್ನಾರ ನಡೆದಿತ್ತು. ರಾಜ್ಯದ ಮೇಲೆ ಮತ್ತು ಇಂಧನ ಇಲಾಖೆ ಮೇಲೆ ಸಾಲ ಹೊರಿಸಿದ್ದರು. ಸೋಲಾರ್‌ ವಿದ್ಯುತ್‌ಅನ್ನು ಅವಾಸ್ತವಿಕ ಮೊತ್ತಕ್ಕೆ ಖರೀದಿಸಿದ್ದರು. ಆದರೆ ಈಗ ಸೌರ ವಿದ್ಯುತ್‌ ಮಾರಾಟದಿಂದ ರಾಜ್ಯಕ್ಕೆ ಲಾಭ ಬಂದಿದೆ’ ಎಂದೆಲ್ಲಾ ಸುಳ್ಳು ಹೇಳಿದ್ದೀರಿ. ಈ ಹೇಳಿಕೆ ಕೊಟ್ಟಮೇಲೆ ನೀವು ಪ್ರತಿಯೊಂದಕ್ಕೂ ಉತ್ತರ ನೀಡಲೇಬೇಕಾಗುತ್ತದೆ. ಕೂಡಲೇ ನೀವು ಮಾಡಿರುವ ಎಲ್ಲಾ ಆರೋಪಗಳ ಬಗ್ಗೆ ಶ್ವೇತಪತ್ರ ಹೊರಡಿಸಿ’ ಎಂದು ಒತ್ತಾಯ ಮಾಡಿದ್ದಾರೆ.
 

click me!