
ಬೆಂಗಳೂರು (ಜೂ.02): ನೈರುತ್ಯ ಭಾಗದಿಂದ ಮುಂಗಾರು ಪ್ರವೇಶ ಹಿನ್ನೆಲೆ ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭರ್ಜರಿ ಮಳೆಯಾಗಿದೆ. ಧಾರವಾಡ ನಗರದಲ್ಲಿ ಗಾಳಿ ಸಹಿತ ಭರ್ಜರಿ ಮಳೆಯಾಗಿದೆ. ಮಳೆಯ ಅಬ್ಬರಕ್ಕೆ ಸಂಚಾರ ಅಸ್ತವ್ಯಸ್ತವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈಗಾಗಲೇ ಬಿತ್ತನೆ ಕಾರ್ಯದಲ್ಲಿ ತೊಡಗಿರೋ ರೈತರು ವರುಣನ ಅಬ್ಬರಕ್ಕೆ ಫುಲ್ ಖುಷಿಯಾಗಿದ್ದಾರೆ.
ಹುಬ್ಬಳ್ಳಿಯಲ್ಲೂ ರಭಸವಾಗಿ ಗಾಳಿ ಸಹಿತ ಮಳೆಯಾಗಿದ್ದು, ಅರ್ಧ ಗಂಟೆಗೂ ಹೆಚ್ಚುಕಾಲ ದೋ ಅಂತ ಸುರಿದಿದೆ. ಇದರಿಂದ ರಸ್ತೆಗಳಲ್ಲಿ ನೀರು ತುಂಬಿ ಹರಿದಿದ್ದು, ವಾಹನ ಸವಾರರು ಪರದಾಡಿದ್ದಾರೆ. ಗದಗ ಜಿಲ್ಲೆಯ ವಿವಿಧೆಡೆ ಮುಸ್ಸಂಜೆ ಹೊತ್ತಿಗೆ ಮಳೆ ಸಿಂಚನವಾಗಿದ್ದು, ಅರ್ಧಗಂಟೆ ಮಳೆ ಸುರಿದಿದೆ. ಡಂಬಳ ಹೋಬಳಿ, ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗಿದೆ. ಉತ್ತಮ ಮಳೆಯಿಂದ ರೈತಾಪಿ ವರ್ಗ ಹರ್ಷಗೊಂಡಿದೆ.
Monsoon Rain ಈ ವರ್ಷ 103% ಮಳೆ ಸಾಧ್ಯತೆ, ವಾಡಿಕೆಗಿಂತ ಹೆಚ್ಚು ಎಂದ IMD!
ವಿಜಯಪುರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಗಾಳಿಯಿಂದಾಗಿ ಬೃಹತ್ ಗಾತ್ರದ ಹತ್ತಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ರಸ್ತೆ ಮಧ್ಯದಲ್ಲಿ ಮರ ಬಿದ್ದ ಕಾರಣ ವಾಹನ ಸವಾರರು ಪರದಾಡಿದ್ದಾರೆ. ಕೃಷ್ಣಾ ಭಾಗ್ಯ ಜಲ ನಿಗಮದ ವಸತಿ ಗೃಹಗಳ ಮೇಲೂ ಮರಗಳು ಬಿದ್ದ ಪರಿಣಾಮವಾಗಿ ಎರಡು ಮನೆಗಳು ಹಾಗೂ ನಾಲ್ಕು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ಇನ್ನು ಬಳ್ಳಾರಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಎರಡು ತಾಸು ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸಂಜೆ ಆರರಿಂದ ಎಂಟರವರೆಗೆ ಸುರಿದ ಭಾರಿ ಮಳೆಗೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಸಿದೆ. ಸಂಜೆ ವೇಳೆ ಭಾರಿ ಗಾಳಿ ಸಹಿತ ಮಳೆಗೆ ವಾಹನ ಸವಾರರು ಪರದಾಡಿದ್ದಾರೆ. ಕೆಲ ಮನೆಯ ಮೇಲ್ಛಾವಣಿ ಹಾರಿ ಹೋಗಿ ಹೌಸಿಂಗ್ ಬೋರ್ಡ್ ಕಾಲೋನಿಯ ಮನೆಗಳಲ್ಲಿ ನೀರು ನುಗ್ಗಿದೆ.
Delhi Rain ಗುಡುಗು ಸಹಿತ ಭಾರಿ ಮಳೆ, 8 ವಿಮಾನ ಮಾರ್ಗ ಬದಲಿಸಿದ ದೆಹಲಿ!
ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ಅನ್ನದಾತ: ಹಿರೇಕೆರೂರು ತಾಲೂಕಿನಾದ್ಯಾಂತ ಕಳೆದ ವಾರ ಸುರಿದ ಮಳೆಯಿಂದಾಗಿ ಭೂಮಿ ಹಸಿಯಾಗಿದೆ. ಕಳೆದ 8 ದಿನಗಳಿಂದ ಮಳೆ ಬಿಡುವು ನೀಡಿದ ಕಾರಣ ರೈತರು ಹೊಲಗಳನ್ನು ಬಿತ್ತನೆಗಾಗಿ ಹಸನಗೊಳಿಸಲು ಮುಂದಾಗಿದ್ದಾರೆ. ಈಗಾಗಲೆ ಮುಂಗಾರು ಹಂಗಾಮಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆಯಾಗದಂತೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಬೀಜ ವಿತರಣೆ ಮಾಡುತ್ತಿದೆ. ರೈತರು ಬೀಜ ಹಾಗೂ ರಸಗೊಬ್ಬರ ಖರೀದಿಸಲು ಮುಂದಾಗಿದ್ದಾರೆ. 2022-23 ನೇ ಸಾಲಿನಲ್ಲಿ ಒಟ್ಟು 59448 ಹೆಕ್ಟೇರ್ ಬಿತ್ತನೆ ಸಾಗುವಳಿ ಕ್ಷೇತ್ರವಿದ್ದು, 45622 ಹೆಕ್ಟೇರ್ 760 ಗೋವಿನಜೋಳ ಅವರಿಸಿದ್ದು ಉಳಿದಂತೆ ಭತ್ತ 2500 ಹೆ. ದ್ವಿದಳ ದಾನ್ಯಗಳು 226 ಹೆ. ಎಣ್ಣೆ ಕಾಳು 150 ಹೆ. ಹಾಗೂ ವಾಣಿಜ್ಯ ಬೆಳೆಗಳಾದ ಹತ್ತಿ 7500 ಹೆ. ಮತ್ತು ಕಬ್ಬು 550 ಹೆಕ್ಟೇರ್ ಕ್ಷೇತ್ರವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ