ಕೇರಳದ ಗಡಿ ಭಾಗ ಕಾಸರಗೋಡಿನಲ್ಲೂ ಗುರುವಾರ ಧಾರಾಕಾರ ಮಳೆಯಾಗಿದ್ದು, ನದಿಗಳು ಉಕ್ಕಿಹರಿಯುತ್ತಿವೆ. ಪರಿಣಾಮ ಮಧೂರಿನ ಪ್ರಸಿದ್ಧ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯ ಸಂಪೂರ್ಣ ಜಲಾವೃತಗೊಂಡಿತ್ತು. ಮಧುವಾಹಿನಿ ನದಿ ತುಂಬಿ ಹರಿಯುತ್ತಿರುವುದರಿಂದ ದೇವಾಲಯ ಆವರಣದಲ್ಲಿ 3-4 ಅಡಿಗಳಷ್ಟು ಎತ್ತರಕ್ಕೆ ನೀರು ಹರಿಯುತ್ತಿದೆ.
ಬೆಂಗಳೂರು(ಜೂ.28): ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಇರುವ ಮಳೆಯಬ್ಬರ ಗುರುವಾರವೂ ಮುಂದುವರಿದಿದೆ. ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ, ಕಾವೇರಿ, ತುಂಗಾ, ಲಕ್ಷ್ಮಣತೀರ್ಥ, ಸುವರ್ಣಾ ಸೇರಿ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಪ್ರವಾಹದ ಆತಂಕ ಶುರುವಾಗಿದೆ.
ಸಮುದ್ರ ತೀರದಲ್ಲೂ ಕಡಲ್ಗೊರೆತ ಹೆಚ್ಚಾಗಿದ್ದು, ಅಪಾಯದಂಚಿನಲ್ಲಿರುವ ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಈ ಮಧ್ಯೆ, ಮಳೆ ಸಂಬಂಧಿ ಅನಾಹುತಕ್ಕೆ ದಕ್ಷಿಣ ಕನ್ನಡದಲ್ಲಿ ಮತ್ತೆ ಮೂವರು ಬಲಿಯಾಗಿದ್ದಾರೆ. ಕರಾವಳಿಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಶುಕ್ರವಾರವೂ ದಕ್ಷಿಣ ಕನ್ನಡದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆ..!
ನದಿ ಮಟ್ಟ ಏರಿಕೆ:
ಪಶ್ಚಿಮಘಟ್ಟ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಪ್ರಮುಖ ನದಿಗಳು ಮತ್ತು ತೊರೆಗಳಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ. ಕುಮಾರಧಾರ ನದಿ ನೀರಿನಮಟ್ಟ ಏರಿಕೆಯಾಗಿ ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ನೀರಿನ ಮಟ್ಟ ಏರಿಕೆಯಾಗಿ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಕಪ್ಪೆ ಶಂಕರ ದೇಗುಲ ಜಲಾವೃತವಾಗಿದೆ. ಕೊಡಗಿನಲ್ಲಿ ಲಕ್ಷ್ಮಣತೀರ್ಥ ಮತ್ತು ಕಾವೇರಿ ನದಿ ನೀರಿನಮಟ್ಟ ಹೆಚ್ಚಾಗಿದ್ದು, ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಉಡುಪಿಯಲ್ಲಿ ಸೀತಾ ಮತ್ತು ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಅಕ್ಕಪಕ್ಕದ ತಗ್ಗು ಗದ್ದೆ, ತೋಟಗಳಿಗೆ ನೀರು ನುಗ್ಗಿದೆ.
ಇನ್ನು ರಾಜ್ಯದಲ್ಲೇ ಮೊದಲು ಭರ್ತಿಯಾಗುವ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಆರು ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಕೆಆರ್ಎಸ್ ಡ್ಯಾಂಗೂ 3856 ಕ್ಯುಸೆಕ್ ಹರಿದುಬರುತ್ತಿದ್ದು, ನೀರಿನಮಟ್ಟ 88.40 ಅಡಿ ತಲುಪಿದೆ. ಇನ್ನು 2859 ಅಡಿ ಗರಿಷ್ಠ ಮಟ್ಟದ ಕೊಡಗಿನ ಹಾರಂಗಿ ಡ್ಯಾಂ ನೀರಿನ ಮಟ್ಟ 2832 ಅಡಿಗೆ ತಲುಪಿದೆ.
ಕೃತಕ ಪ್ರವಾಹ:
ಮಂಗಳೂರು ಮತ್ತು ಉಡುಪಿ ನಗರದಲ್ಲಿ ಕೃತಕ ಪ್ರವಾಹ ಉಂಟಾಗಿ ಜನ ಪರದಾಡಬೇಕಾಯಿತು. ಮಂಗಳೂರಿನ ಹಲವೆಡೆ ಹಾಗೂ ಉಡುಪಿಯ ಮೂಡನಿಡಂಬೂರು, ಕಲ್ಲಂಕ ಮತ್ತು ಬೈಲಕರೆ ಪ್ರದೇಶದಲ್ಲಿ ಕೃತಕ ಪ್ರವಾಹದಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ.
ಮೂವರು ಸಾವು:
ದಕ್ಷಿಣ ಕನ್ನಡಜಿಲ್ಲೆಯಲ್ಲಿ ಮೂವರು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದಾರೆ. ಮಂಗಳೂರಿನ ಪಾಂಡೇಶ್ವರದ ರೊಸಾರಿಯೊ ಚರ್ಚ್ ಬಳಿ ವಿದ್ಯುತ್ ತಂತಿ ತಗುಲಿ ರಿಕ್ಷಾ ಚಾಲಕರಾದ ಹಾಸನದ ರಾಜು (50) ಹಾಗೂ ಪುತ್ತೂರು ರಾಮಕುಂಜದ ದೇವರಾಜ್ (46) ಮೃತಪಟ್ಟಿದ್ದಾರೆ.
ಇಂದಿನಿಂದ ಮೂರು ದಿನ ದ.ಕ, ಉಡುಪಿ, ಕೊಡಗಿನಲ್ಲಿ ಭಾರೀ ಮಳೆ: ರೆಡ್ ಅಲರ್ಟ್
ಬುಧವಾರ ರಾತ್ರಿ ರಿಕ್ಷಾ ಸ್ವಚ್ಛ ಮಾಡಲೆಂದು ಬಕೆಟ್‌ನಲ್ಲಿ ನೀರು ಹಿಡಿದು ರಾಜು ಹೊರ ಬಂದಾಗ ಭಾರೀ ಗಾಳಿಗೆ ಮರವೊಂದು ಉರುಳಿ ಕಳಚಿಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಆಗ ಅವರನ್ನು ರಕ್ಷಿಸಲು ಬಂದ ದೇವರಾಜು ಕೂಡ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುವಾರ ಬೆಳಗ್ಗೆ 6 ಗಂಟೆ ವೇಳೆಗೆ ಬೀದಿ ದೀಪ ಆರಿಸಲು ಬಂದ ಪಾಲಿಕೆ ಸಿಬ್ಬಂದಿ ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಲಾ ಎಂಬಲ್ಲಿ ಪ್ರತೀಕ್ಷಾ ಶೆಟ್ಟಿ (20) ಎಂಬ ಯುವತಿ ಪಾರ್ಸೆಲ್ವೊಂದನ್ನು ಸ್ವೀಕರಿಸಲು ಮನೆ ಸಮೀಪದ ರಸ್ತೆಗೆ ಬಂದಾಗ ನೀರಿಗೆ ತಾಕಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾಳೆ.
ಮಧೂರು ದೇವಾಲಯ ಜಲಾವೃತ
ಕೇರಳದ ಗಡಿ ಭಾಗ ಕಾಸರಗೋಡಿನಲ್ಲೂ ಗುರುವಾರ ಧಾರಾಕಾರ ಮಳೆಯಾಗಿದ್ದು, ನದಿಗಳು ಉಕ್ಕಿಹರಿಯುತ್ತಿವೆ. ಪರಿಣಾಮ ಮಧೂರಿನ ಪ್ರಸಿದ್ಧ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯ ಸಂಪೂರ್ಣ ಜಲಾವೃತಗೊಂಡಿತ್ತು. ಮಧುವಾಹಿನಿ ನದಿ ತುಂಬಿ ಹರಿಯುತ್ತಿರುವುದರಿಂದ ದೇವಾಲಯ ಆವರಣದಲ್ಲಿ 3-4 ಅಡಿಗಳಷ್ಟು ಎತ್ತರಕ್ಕೆ ನೀರು ಹರಿಯುತ್ತಿದೆ.