Latest Videos

ಅರಣ್ಯ ರಕ್ಷಣೆಗೆ ಉಪಗ್ರಹ ಆಧರಿತ ಎಚ್ಚರಿಕೆ ವ್ಯವಸ್ಥೆ: ಸಚಿವ ಈಶ್ವರ್ ಖಂಡ್ರೆ

By Kannadaprabha NewsFirst Published Jun 28, 2024, 6:00 AM IST
Highlights

ರಾಜ್ಯದ ಅರಣ್ಯ ಸಂಪತ್ತಿನ ಸಂರಕ್ಷಣೆ ಮತ್ತು ಅರಣ್ಯ ಒತ್ತುವರಿಯನ್ನು ಪರಿಣಾಮಕಾರಿಯಾಗಿ ತಡೆಯಲು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಅಗತ್ಯವಿದೆ. ಅದಕ್ಕಾಗಿ ಉಪಗ್ರಹ ಆಧರಿತ ಎಚ್ಚರಿಕೆ ರವಾನೆಯಂತಹ ವ್ಯವಸ್ಥೆ ರೂಪಿಸಬೇಕಿದ್ದು, ಅದಕ್ಕಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು: ಅರಣ್ಯ ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು(ಜೂ.28): ರಾಜ್ಯದ ಅರಣ್ಯ ಸಂಪತ್ತಿನ ಸಂರಕ್ಷಣೆ ಮತ್ತು ಅರಣ್ಯ ಒತ್ತುವರಿಯನ್ನು ತಡೆಯಲು ತಂತ್ರಜ್ಞಾನ ಬಳಕೆ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಉಪಗ್ರಹ ಆಧರಿತ ಎಚ್ಚರಿಕೆ ರವಾನೆ ವ್ಯವಸ್ಥೆ ರೂಪಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅರಣ್ಯ ಭವನದಲ್ಲಿ ಅರಣ್ಯ ಭೂಮಿ ಒತ್ತುವರಿ ತಡೆ ಮತ್ತು ವೃಕ್ಷ ಸಂರಕ್ಷಣೆ ಕುರಿತು ಗುರುವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದ ಅರಣ್ಯ ಸಂಪತ್ತಿನ ಸಂರಕ್ಷಣೆ ಮತ್ತು ಅರಣ್ಯ ಒತ್ತುವರಿಯನ್ನು ಪರಿಣಾಮಕಾರಿಯಾಗಿ ತಡೆಯಲು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಅಗತ್ಯವಿದೆ. ಅದಕ್ಕಾಗಿ ಉಪಗ್ರಹ ಆಧರಿತ ಎಚ್ಚರಿಕೆ ರವಾನೆಯಂತಹ ವ್ಯವಸ್ಥೆ ರೂಪಿಸಬೇಕಿದ್ದು, ಅದಕ್ಕಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಮುಸ್ಲಿಂಮರ ಕೆಲಸವನ್ನು ಸಚಿವ ಖಂಡ್ರೆ ತಲೆಬಾಗಿ ಮಾಡಬೇಕು: ಜಮೀರ್ ವಿವಾದಾತ್ಮಕ ಹೇಳಿಕೆ

ಈಗಾಗಲೇ ಅಕ್ಷಾಂಶ ಮತ್ತು ರೇಖಾಂಶದ ಆಧಾರದಲ್ಲಿ ಜಿಯೋ ರೆಫರೆನ್ಸ್‌ ಮೂಲಕ ರಾಜ್ಯದ ಅರಣ್ಯ ಪ್ರದೇಶದ ಗಡಿ ಗುರುತಿಸಲಾಗಿದೆ. ಆ ದತ್ತಾಂಶವನ್ನು ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರಕ್ಕೆ (ಕೆಎಸ್‌ಆರ್‌ಎಸ್‌ಎಸಿ) ನೀಡಿ, ಮರಗಳ ಕಡಿತಲೆ ಮತ್ತು ಭೂ ಒತ್ತುವರಿ ಕುರಿತಂತೆ ಕಾಲಕಾಲಕ್ಕೆ ಎಚ್ಚರಿಕೆ ನೀಡುವ ವ್ಯವಸ್ಥೆಯೊಂದನ್ನು ಶೀಘ್ರದಲ್ಲಿ ರೂಪಿಸಬೇಕು. ಅದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಿದ್ಧಪಡಿಸಿ, ಸಲ್ಲಿಸುವಂತೆ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವರು ಸೂಚಿಸಿದರು.

ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೆ ಇಸ್ರೋ ರಾಷ್ಟ್ರೀಯ ದೂರ ಸಂವೇದಿ ಕೇಂದ್ರಕ್ಕೆ ಮಾಹಿತಿ ಬರುತ್ತದೆ. ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆಗೆ ಮಾಹಿತಿ ರವಾನೆಯಾಗಿ ಸಂಬಂಧಪಟ್ಟ ಅರಣ್ಯ ವಲಯದ ಸಿಬ್ಬಂದಿಗೆ ಎಚ್ಚರಿಕೆ ಹೋಗುವಂತಹ ವ್ಯವಸ್ಥೆಯಿದೆ. ಅದೇ ಮಾದರಿಯಲ್ಲಿ ಮರಗಳ ಅಕ್ರಮ ಕಡಿತಲೆ ಮತ್ತು ಅರಣ್ಯ ಭೂಮಿ ಒತ್ತುವರಿಗೂ ಎಚ್ಚರಿಕೆ ರವಾನೆಯಾಗುವ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಬೀದರ್ ವಿಮಾನಯಾನ ಪುನಾರಂಭಕ್ಕೆ ಪ್ರಸ್ತಾವ ಸಲ್ಲಿಸಿ: ಸಚಿವ ಎಂ.ಬಿ.ಪಾಟೀಲ್‌ಗೆ ಖಂಡ್ರೆ ಪತ್ರ

ವಲಯ ಅರಣ್ಯಾಧಿಕಾರಿಗಳ ಮಟ್ಟದಲ್ಲಿ ಅರಣ್ಯ ಒತ್ತುವರಿಯ ಮತ್ತು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತಂತೆ ಸಂಪೂರ್ಣ ಮಾಹಿತಿಯ ದತ್ತಾಂಶ ಸಿದ್ಧಪಡಿಸಬೇಕು. ಆ ದತ್ತಾಂಶದ ಆಧಾರದಲ್ಲಿ ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಸಕಾಲದಲ್ಲಿ ಆಕ್ಷೇಪಣೆ ಸಲ್ಲಿಸಿ ಅವುಗಳ ಇತ್ಯರ್ಥಕ್ಕೆ ಕ್ರಮವಹಿಸುವಂತೆ ಹೇಳಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಟ್ಟದಲ್ಲಿ ಬಾಕಿ ಇರುವ ಎಲ್ಲ 64ಎ ಪ್ರಕರಣಗಳನ್ನು ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಮುಂದಿರುವ ಮೇಲ್ಮನವಿಗಳನ್ನು ಒಂದು ವರ್ಷದೊಳಗೆ ಇತ್ಯರ್ಥ ಮಾಡಬೇಕು. ಅದೇ ರೀತಿ ಸೆಕ್ಷನ್ 4ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಕಾಲಮಿತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ಪ್ರಕರಣಗಳ ಹೊರೆಯನ್ನು ತಗ್ಗಿಸುವಂತೆ ಸಚಿವರು ತಿಳಿಸಿದರು.

click me!