Latest Videos

ರಾಜ್ಯದಲ್ಲಿ 7 ಹೊಸ ಕೃಷಿ ತರಬೇತಿ ಕೇಂದ್ರ ಪ್ರಾರಂಭ: ಸಚಿವ ಚಲುವರಾಯಸ್ವಾಮಿ

By Kannadaprabha NewsFirst Published Jun 27, 2024, 11:29 PM IST
Highlights

ರಾಜ್ಯದಲ್ಲಿ ಈ ವರ್ಷ 7 ಜಿಲ್ಲೆಗಳಲ್ಲಿ ಹೊಸದಾಗಿ ಕೃಷಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. 

ಬೆಳಗಾವಿ (ಜೂ.27): ರಾಜ್ಯದಲ್ಲಿ ಈ ವರ್ಷ 7 ಜಿಲ್ಲೆಗಳಲ್ಲಿ ಹೊಸದಾಗಿ ಕೃಷಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಬೆಳಗಾವಿ ಸುವರ್ಣಸೌಧ ಸಭಾಂಗಣದಲ್ಲಿ ಕೃಷಿ ಮತ್ತು ಜಲಾನಯನ ಇಲಾಖೆಗಳ ವಿಭಾಗಮಟ್ಟದ ಸಭೆ ನಡೆಸಿ ಮಾತನಾಡಿದ ಅವರು, ಕೃಷಿಕರಿಗೆ ಯೋಜಿತ ತರಬೇತಿ ನೀಡಿ‌ ಸಾಮರ್ಥ್ಯ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದೆ. ವಿಜಯನಗರ, ಯಾದಗಿರಿ, ಗದಗ, ಕೋಲಾರ, ಚಾಮರಾಜನಗರ, ರಾಮನಗರ, ಉಡುಪಿ ಜಿಲ್ಲೆಗಳಲ್ಲಿ ಹೊಸ ಕೃಷಿ ತರಬೇತಿ ಕೇಂದ್ರ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಕಬ್ಬಿನಲ್ಲಿ ಕೀಟ ನಿಯಂತ್ರಣಕ್ಕೆ ಅವಶ್ಯವಿರುವ ಟ್ರೈಕೋಗ್ರಾಮಾ ಪರತಂತ್ರ ಜೀವಿಯ ಉತ್ಪಾದನೆಯಲ್ಲಿ ನೂತನ ತಾಂತ್ರಿಕತೆ ಅಳವಡಿಸಬೇಕು. ಮುಂದಿನ 6 ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ ರೈತರಿಗೆ ಒದಗಿಸಬೇಕು ಎಂದು ನಿರ್ದೇಶನ ನೀಡಿದರು. ಸ್ಥಳೀಯವಾಗಿ ಬೀಜೋತ್ಪಾದನೆ ಮಾಡಿ ಪ್ರತಿ ಸಾಲಿನಲ್ಲಿ ಜಿಲ್ಲೆಗೆ ಅವಶ್ಯವಿರುವ ಬಿತ್ತನೆ ಬೀಜವನ್ನು ಆಯಾ ಜಿಲ್ಲೆಗಳ ಬೀಜೋತ್ಪಾದನಾ ಕೇಂದ್ರ ಮತ್ತು ಪ್ರಗತಿಪರ ರೈತರ ಹೊಲದಲ್ಲೇ ಉತ್ಪಾದಿಸಬೇಕು. ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ, ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಬಿತ್ತನೆ ಬೀಜ, ರಸಗೊಬ್ಬರಗಳನ್ನು ಬೇಡಿಕೆಗಿಂತಲೂ ಹೆಚ್ಚು ಸರಬರಾಜು ಮಾಡಲಾಗಿದೆ. 

ಸಿ.ಪಿ.ಯೋಗೇಶ್ವರ್‌ಗೆ ದೇವರು ಒಳ್ಳೆಯದು ಮಾಡಲಿ: ಡಿ.ಕೆ.ಶಿವಕುಮಾರ್ ವ್ಯಂಗ್ಯ

ಗೊಂದಲ ಇಲ್ಲದಂತೆ ವಿತರಣೆ ಮಾಡಿ. ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರ ಸಂಘಗಳ ನೆರವನ್ನೂ ಪಡೆಯಿರಿ ಎಂದು ತಿಳಿಸಿದರು. ರೈತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಹೊಸ ಆವಿಷ್ಕಾರ, ವಿಜ್ಞಾನ, ತಂತ್ರಜ್ಞಾನಗ ಬಗ್ಗೆ ಅರಿವು ಮೂಡಿಸಿ, ಕೃಷಿ ಜಮೀನುಗಳಿಗೆ ಅವುಗಳನ್ನು ವರ್ಗಾವಣೆ ಮಾಡಬೇಕು. ಬೆಳೆ ವಿಮೆ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ನೋಂದಣಿ ಜಾಸ್ತಿ ‌ಮಾಡಿ, ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಗಮನ ಹರಿಸಿ ಎಂದು ಸೂಚಿಸಿದರು.

ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಬೇಕು. ಹೈಟೆಕ್ ಹಾರ್ವೆಸ್ಟ್‌ ಹಬ್, ಕೃಷಿ ನವೋದ್ಯಮಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದಾಗುವ ಪರಿಣಾಮಕಾರಿ ಬದಲಾವಣೆಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿ. ಸುಸ್ಥಿರ, ಸಮಗ್ರ ಕೃಷಿ ಬಗ್ಗೆ ತರಬೇತಿ, ಮಾರ್ಗದರ್ಶನ ನೀಡಿ ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಿ ಎಂದು ನಿರ್ದೇಶನ ನೀಡಿದರು.ಈ ವೇಳೆ ಕೃಷಿ ಆಯುಕ್ತ ವೈ.ಎಸ್ ಪಾಟೀಲ, ಜಲಾನಯನ ಇಲಾಖೆ ಆಯುಕ್ತ ಗಿರೀಶ್, ನಿರ್ದೇಶಕ ಪದ್ಮಯ್ಯ ನಾಯಕ್, ಕೃಷಿ ನಿರ್ದೇಶಕ ಡಾ.ಜಿ.ಟಿ.ಪುತ್ರ, ಅಪರ ನಿರ್ದೇಶಕ ವೆಂಕಟರಮಣ ರೆಡ್ಡಿ ಮತ್ತಿತರರು ಇದ್ದರು.

ರೈತರಿಗೆ ಪಶು ಭಾಗ್ಯ ಯೋಜನೆ ಜಾರಿಗೆ ಚಿಂತನೆ: ಸಚಿವ ವೆಂಕಟೇಶ್

ಇಲಾಖೆಯಲ್ಲಿ ತರಬೇತಿ ಹಾಗೂ ಗುಣ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತಿದೆ. ಪ್ರಯೋಗಾಲಯಗಳನ್ನು ಎನ್.ಎ.ಬಿ.ಎಲ್ ಮಾನ್ಯತೆಗೆ ಒಳಪಡಿಸಲಾಗುವುದು. ಬೈಲಹೊಂಗಲ ಪರತಂತ್ರ ಜೀವಿ ಪ್ರಯೋಗಾಲಯ ಉನ್ನತೀಕರಣಕ್ಕೆ ಕ್ರಮ ವಹಿಸಲಾಗುವುದು.
-ಎನ್.ಚಲುವರಾಯಸ್ವಾಮಿ, ಸಚಿವ.

click me!