Corona Crisis: ಸತತ 2ನೇ ದಿನ 1000+ ಕೋವಿಡ್‌ ಕೇಸ್‌: 1 ಸಾವು

By Govindaraj SFirst Published Jul 15, 2022, 5:00 AM IST
Highlights

ರಾಜ್ಯದಲ್ಲಿ ಸತತ ಎರಡನೇ ದಿನವೂ ಒಂದು ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಸೋಂಕಿನಿಂದ ಮೃತರಾಗಿದ್ದಾರೆ. ಗುರುವಾರ 1209 ಹೊಸ ಪ್ರಕರಣಗಳು ವರದಿಯಾಗಿದೆ.

ಬೆಂಗಳೂರು (ಜು.15): ರಾಜ್ಯದಲ್ಲಿ ಸತತ ಎರಡನೇ ದಿನವೂ ಒಂದು ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಸೋಂಕಿನಿಂದ ಮೃತರಾಗಿದ್ದಾರೆ. ಗುರುವಾರ 1209 ಹೊಸ ಪ್ರಕರಣಗಳು ವರದಿಯಾಗಿದೆ. 1072 ಮಂದಿ ಗುಣಮುಖರಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 75 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸದ್ಯ 6,793 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 

27 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 4.4 ರಷ್ಟುದಾಖಲಾಗಿದೆ. ಬುಧವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಎರಡು ಸಾವಿರ ಹೆಚ್ಚಳವಾಗಿವೆ. ಆದರೆ, ಹೊಸ ಪ್ರಕರಣಗಳು 22 ಇಳಿಕೆಯಾಗಿವೆ (ಬುಧವಾರ 1231 ಕೇಸ್‌, ಸಾವು ಶೂನ್ಯ). ಮೃತ ವೃದ್ಧ ತೀವ್ರ ಉಸಿರಾಟ ಸಮಸ್ಯೆಯಿಂದ ಜು.12ರಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Booster Dose: 3ನೇ ಡೋಸ್‌ ಪಡೆದಿದ್ದು ಬರೀ 15% ಜನ!

ಎಲ್ಲಿ ಎಷ್ಟು ಮಂದಿಗೆ ಸೋಂಕು: ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 1068 ಪತ್ತೆಯಾಗಿವೆ. ಉಳಿದಂತೆ ಮೈಸೂರು 25, ಧಾರವಾಡ 18, ಬೆಳಗಾವಿ 13, ಬಳ್ಳಾರಿ 14, ಉಳಿದಂತೆ 18 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಪತ್ತೆಯಾಗಿವೆ. ಏಳು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.

ಬೆಂಗಳೂರಿನಲ್ಲಿ ಮತ್ತೆ 1000 ಗಡಿ ದಾಟಿದ ಕೊರೋನಾ ಸಂಖ್ಯೆ: ನಗರದಲ್ಲಿ ಬುಧವಾರ 1124 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.5.20ರಷ್ಟಿದೆ. 953 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ ಸದ್ಯ 6158 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 58 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6432 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 

560 ಮಂದಿ ಮೊದಲ ಡೋಸ್‌, 2907 ಮಂದಿ ಎರಡನೇ ಡೋಸ್‌ ಮತ್ತು 2965 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಬುಧ ವಾರ ನಗರದಲ್ಲಿ ಹೊಸದಾಗಿ ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿಲ್ಲ. ಮಹದೇವಪುರ ವಲಯದಲ್ಲಿ ಎರಡು ಹಾಗೂ ಯಲಹಂಕದಲ್ಲಿ ಒಂದು ಪ್ರದೇಶ ಕಂಟೈನ್ಮೆಂಟ್‌ನಿಂದ ಮುಕ್ತವಾಗಿದೆ. ನಗರದಲ್ಲಿ ಒಟ್ಟು 12 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

4 ಕೋವಿಡ್‌ ಪ್ರಕರಣ ಪತ್ತೆ: ಜಿಲ್ಲೆಯಲ್ಲಿ ಗುರುವಾರ 700 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ ನಾಲ್ಕು ಮಂದಿಗೆ ಸೋಂಕು ಪತ್ತೆಯಾಗಿದೆ. ಈದಿನ 6 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 22 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 539 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

Covid Crisis: ಮಾಸ್ಕ್‌ ಧರಿಸದವರಿಗೆ ದಂಡ ಹಾಕಿ: ತಜ್ಞರು

8 ಕೊರೋನಾ ಕೇಸ್‌ ಪತ್ತೆ: ದ.ಕ.ಜಿಲ್ಲೆಯಲ್ಲಿ ಗುರುವಾರ 8 ಕೊರೋನಾ ಕೇಸ್‌ ಪತ್ತೆಯಾಗಿದೆ. 19 ಮಂದಿ ಗುಣಮುಖರಾಗಿದ್ದು, ಪ್ರಸಕ್ತ 43 ಸಕ್ರಿಯ ಪ್ರಕರಣ ಇದೆ. ಜಿಲ್ಲೆಯ ಕೋವಿಡ್‌ ಪಾಸಿಟಿವಿಟಿ ರೇಟ್‌ ಶೇ.0.96 ಆಗಿದೆ. ಇಲ್ಲಿವರೆಗೆ ಒಟ್ಟು ಪಾಸಿಟಿವ್‌ ಕೇಸ್‌ಗಳ ಸಂಖ್ಯೆ 1,35,990 ಏರಿಕೆಯಾಗಿದ್ದು, 1,34,095 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 1,852 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

click me!