Karnataka Rain| ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ

By Kannadaprabha News  |  First Published Nov 19, 2021, 10:10 AM IST

*  ಬೆಂಗಳೂರಲ್ಲಿ ಗುರುವಾರ ದಿನವಿಡೀ ಬಿಟ್ಟು ಬಿಡದೆ ವರ್ಷಧಾರೆ
*  ಮಧ್ಯರಾತ್ರಿಯಾದರೂ ಮುಂದುವರೆದ ಮಳೆಯಬ್ಬರ
*  ನಿರಂತರ ಮಳೆಯಿಂದಾಗಿ ಕೆಲವೆಡೆ ಕಾಂಪೌಂಡ್‌ ಕುಸಿತ
 


ಬೆಂಗಳೂರು(ನ.19):  ರಾಜ್ಯದಲ್ಲಿ(Karnataka) ಹಿಂಗಾರು ಮಳೆಯ(Rain) ಅಬ್ಬರ ಇನ್ನಷ್ಟು ಹೆಚ್ಚಾಗಿದ್ದು, ನವೆಂಬರ್‌ 21ರವರೆಗೂ ರಾಜ್ಯದ ಬಹುತೇಕ ಕಡೆ ಬಿರುಸಿನ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(Indian Meteorological Department) ತಿಳಿಸಿದೆ.

ಶುಕ್ರವಾರ (ನ.19) ಕರಾವಳಿ, ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದ್ದು, ‘ಯೆಲ್ಲೋ ಅಲರ್ಟ್‌’(Yellow Alert) ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ ಬಂಗಾಳ ಕೊಲ್ಲಿಯಲ್ಲಿನ(Bay of Bengal) ವಾಯುಭಾರ ಕುಸಿತದ ಪರಿಣಾಮ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗುವ ಸಂಭವ ಇದೆ.

Tap to resize

Latest Videos

undefined

ಬೆಂಗಳೂರು(Bengaluru) ನಗರ ಮತ್ತು ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಳ್ಳಾರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

Karnataka Rain:ಮಳೆಗೆ ತತ್ತರಿಸಿದ ದಕ್ಷಿಣ ಕರ್ನಾಟಕ, ಬೆಂಗಳೂರು ಸೇರಿ 5 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ!

ಶನಿವಾರ (ನ.20) ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಉಳಿದೆಲ್ಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಭಾನುವಾರ (ನ.21) ಚಿಕ್ಕಮಗಳೂರು ಜಿಲ್ಲೆಗೆ ಸೀಮಿತವಾಗಿ ‘ಯೆಲ್ಲೋ ಅಲರ್ಟ್‌’ ನೀಡಿದ್ದರೂ ಕೂಡ ರಾಜ್ಯದ ಉಳಿದ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆಗಳ ಅವಧಿಯಲ್ಲಿ ಬಹುತೇಕ ರಾಜ್ಯಾದ್ಯಂತ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ. ಬೆಳಗಾವಿಯ(Belagavi) ಮುಗಲಿಹಳ್ಳಿ 13.9 ಸೆಂ.ಮೀ., ಬಿಡ್ಕಿ 11.25 ಸೆಂಮೀ., ಶಿವಮೊಗ್ಗದ ಭದ್ರಾವತಿಯಲ್ಲಿ 10.6 ಸೆಂ.ಮೀ., ಉತ್ತರ ಕನ್ನಡದ ಹಳಿಯಾಳ 8 ಸೆಂ.ಮೀ., ಕಲಬುರಗಿಯ ಹಲಕಟ್ಟ7.6 ಸೇಂ.ಮೀ., ಉತ್ತರ ಕನ್ನಡದ ಕದ್ರಾ ಮತ್ತು ಕಾರವಾರದಲ್ಲಿ(Karwar) ತಲಾ 7 ಸೆಂ.ಮೀ. ಮಳೆಯಾಗಿದೆ.

‘ಮಳೆ’ನಾಡಿನಂತಾದ ಬೆಂದಕಾಳೂರು

ಗುರುವಾರ ದಿನವಿಡೀ ಸುರಿದ ಮಳೆಯಿಂದಾಗಿ ಇಡೀ ಬೆಂಗಳೂರು ನಗರ ತೊಯ್ದು ತೊಪ್ಪೆಯಾಯಿತು. ಬೆಳಗ್ಗೆಯಿಂದ ಜಿಟಿ ಜಿಟಿಯಾಗಿ ಸುರಿದ ಮಳೆ ಆಗಾಗ ತುಸು ಹೆಚ್ಚಿನ ಪ್ರಮಾಣದಲ್ಲಿ ಸುರಿಯಿತು. ಮಳೆಯ ಜೊತೆಗೆ ಆಗಾಗ ಬೀಸುತ್ತಿದ್ದ ಚಳಿಗಾಳಿಗೆ(Cold air) ಜನರು ನಡುಗುವಂತಾಯಿತು.

ದಿನವಿಡೀ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮೂರ್ನಾಲ್ಕು ಕಡೆ ಕಾಂಪೌಂಡ್‌ ಕುಸಿದಿದ ಪರಿಣಾಮ ಎರಡ್ಮೂರು ಆಟೋಗಳು ಜಖಂಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೆಲವು ಕಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ಕೆಲವು ಮುಖ್ಯರಸ್ತೆಗಳ ಮೇಲೆ ಒಳಚರಂಡಿ ನೀರು ಉಕ್ಕಿ ಹರಿದು, ವಾಹನ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಿದರು. ನಿರಂತರ ಮಳೆಯಿಂದ ಜನರು ಹೈರಾಣಾದರು.

ವೃದ್ಧೆ ಬಚಾವ್‌:

ಶಂಕರಮಠ ವಾರ್ಡ್‌ ಕಾವೇರಿ ನಗರದ ಆಂಜನೇಯ ಗುಡ್ಡದ ಸಮೀಪ ಎಸಿ ಶೀಟ್‌ಗಳ ಮೂರು ಗೋದಾಮು ಕಾಂಪೌಂಡು ಕುಸಿದಿದೆ. ಚಾಮರಾಜಪೇಟೆಯ ಜೆಜೆಆರ್‌ ನಗರದಲ್ಲಿ ಎಸಿ ಶೀಟಿನ ಮನೆಯ ಕಾಂಪೌಂಡ್‌ ಕುಸಿದಿದ್ದು, ಬಿಬಿಎಂಪಿ ಸಿಬ್ಬಂದಿ ಕಾಂಪೌಂಡಿನ ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಕಾಡುಗೋಡಿ ಸಮೀಪದ ರೈಲ್ವೆ ಹಳಿ ಪಕ್ಕದ ಅಂಗಡಿಯೊಂದರ ಹಳೆಯ ಕಾಂಪೌಂಡ್‌ ಕುಸಿದಿದ್ದು, ಅದರ ಪಕ್ಕದಲ್ಲೆ ಮಲಗಿದ್ದ ವೃದ್ದೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ.

ನಿರಂತರ ಮಳೆಯಿಂದ ಹಲವು ಬೆಳೆ ನಾಶ: ಕಂಗಾಲಾದ ರೈತರು

ಪಾದರಾಯನಪುರದ ಹರಿಶ್ಚಂದ್ರ ಟೆಂಪಲ್‌ ಹತ್ತಿರ ಮೂರನೇ ಅಡ್ಡರಸ್ತೆಯಲ್ಲಿ ಕಟ್ಟಡವೊಂದರ ಗೋಡೆಗಳು ಕುಸಿದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಪರಿಣಾಮ ಪಕ್ಕದಲ್ಲೇ ನಿಲ್ಲಿಸಿದ್ದ ಎರಡ್ಮೂರು ಆಟೋಗಳು ಜಖಂಗೊಂಡಿದ್ದವು. ಕಾಂಪೌಂಡ್‌ ಕುಸಿದು ಅವಶೇಷಗಳು ರಸ್ತೆಗೆ ಬಿದ್ದಿದ್ದರಿಂದ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಿಬಿಎಂಪಿ ಪಶ್ಚಿಮ ವಲಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗೋಡೆ ಅವಶೇಷಗಳನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಪುನಃ ಆರಂಭಗೊಂಡಿತು.

ಹಗದೂರಿನಲ್ಲಿ 7 ಸೆಂ.ಮೀ. ಮಳೆ:

ಹಗದೂರಿನಲ್ಲಿ 7.3 ಸೆಂ.ಮೀ, ದೊಡ್ಡನೆಕ್ಕುಂದಿ ಹಾಗೂ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ತಲಾ 6.5 ಸೆಂ.ಮೀ, ಬೆಂಗಳೂರು ಪೂರ್ವ 5.6 ಸೆಂ.ಮೀ, ವರ್ತೂರು 5.4 ಸೆಂ.ಮೀ, ಹೊರಮಾವು(2) 4.9 ಸೆಂ.ಮೀ, ಕೋನೇನ ಅಗ್ರಹಾರ 4.4 ಸೆಂ.ಮೀ, ಮಾರತ್‌ಹಳ್ಳಿ 4.3 ಸೆಂ.ಮೀ, ಸಂಪಂಗಿರಾಮನಗರ(2) 4.3 ಸೆಂ.ಮೀ, ಕೆಂಗೇರಿ 4.2 ಸೆಂ.ಮೀ, ಯಲಹಂಕ 4 ಸೆಂ.ಮೀ. ಸೇರಿದಂತೆ ನಗರದ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿಯಿತು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(State Disaster Management Authority) ಮಾಹಿತಿ ನೀಡಿದೆ.
 

click me!