ಭಾರೀ ಮಳೆಗೆ ತತ್ತರಿಸಿದ ದಕ್ಷಿಣ ಕರ್ನಾಟಕ : 7 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

By Kannadaprabha News  |  First Published Nov 19, 2021, 6:42 AM IST
  • ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿಕೆ
  • ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆಯಿಂದಲೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ

ಬೆಂಗಳೂರು (ನ.19):  ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ (rain) ಆರ್ಭಟ ಮುಂದುವರಿದಿದ್ದು, ಮತ್ತಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮುಂಜಾನೆಯಿಂದಲೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಉತ್ತರ ಕರ್ನಾಟಕ, ಕರಾವಳಿ ತೀರ, ಬೆಳಗಾವಿ (Belagavi) ವ್ಯಾಪ್ತಿಯಲ್ಲಿ ಮಳೆ ಇಳಿಮುಖವಾಗಿದ್ದು, ದಕ್ಷಿಣ ಕರ್ನಾಟಕ (Dakshina kannada) ವ್ಯಾಪ್ತಿಯಲ್ಲಿ ವರುಣನ ಆರ್ಭಟ ಮುಂದುವರಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ (Ramanagara), ತುಮಕೂರು (Tumakuru) ಜಿಲ್ಲೆಗಳಲ್ಲಿ ಶುಕ್ರವಾರ ಅಂಗನವಾಡಿಗಳು, ಶಾಲಾ-ಕಾಲೇಜುಗಳಿಗೆ (school -  college) ರಜೆ ಘೋಷಿಸಲಾಗಿದೆ. ಚಾಮರಾಜನಗರ (Chamarajanagar) ಜಿಲ್ಲೆಯಲ್ಲಿ ಶಾಲೆಗಳಿಗೆ ಮಾತ್ರ ರಜೆ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಪರಿಸ್ಥಿತಿ ಅವಲೋಕಿಸಿ ರಜೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.

Tap to resize

Latest Videos

ಭೂಕುಸಿತ, ಕಟ್ಟಡಗಳು ಧರೆಗೆ:  ಕೋಲಾರ ಜಿಲ್ಲೆಯಲ್ಲಿ ಶಾಲೆಯ ಕಟ್ಟಡ, ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ರಸ್ತೆ ಮತ್ತೆ ಕುಸಿದಿದೆ, ಅಲ್ಲದೆ ಹಳೆಯ ಕಟ್ಟಡ ನೆಲಕ್ಕುರುಳಿದೆ. ರಾಮನಗರ ಜಿಲ್ಲೆಯಲ್ಲಿ ಸೇತುವೆ ಹಾನಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯ ಹೆಚ್ಚಾಗಿರುವುದರಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಒಳ ಹರಿವು ಹೆಚ್ಚಿದೆ. ಈಗಾಗಲೇ ತುಂಬಿರುವ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಕೋಡಿ ಬಿದ್ದ ಕೆರೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಲಾಗಿದೆ.

ಹಾಸನ ಜಿಲ್ಲೆಯಲ್ಲಿ ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನೋರ್ವನನ್ನು ಬೈಕ್‌ (Bike) ಸಹಿತ ಗ್ರಾಮಸ್ಥರು ರಕ್ಷಿಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ಮಳೆಗೆ ವಿದ್ಯುತ್‌ ಕಂಬಗಳು ಧರೆಗುರುಳಿವೆ, ರಸ್ತೆಗಳು ಕೊಚ್ಚಿ ಹೋಗಿವೆ. ಇನ್ನು ಹಲವು ನಗರಗಳಲ್ಲಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು.

ಕೋಲಾರ (kolar) ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ಗುರುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದಿದ್ದು, ಅದೃಷ್ಟವಶಾತ್‌ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿಥಿಲಗೊಂಡಿದ್ದ ಶಾಲೆಯು ಮಧ್ಯಾಹ್ನ ಏಕಾಏಕಿ ಕುಸಿದಿದೆ. ಘಟನಾ ಸಂದರ್ಭದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿದ್ದರು. ಕೊಠಡಿಯ ಗೋಡೆ ಕುಸಿಯಲಾರಂಭಿಸುತ್ತಿದ್ದಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದರು.

ಕಲಬುರಗಿ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಮಳೆಯ ರಭಸ ಕಡಿಮೆಯಾಗಿದೆ. ಮೋಡ ಕವಿದ ವಾತಾವರಣವಿತ್ತು. ಕೋಲಾರ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಶಾಲೆಗಳ ಚಾವಣಿಯಲ್ಲಿ ಮಳೆ ನೀರು ನಿಂತು ಕಟ್ಟಡಗಳು ಸೋರುತ್ತಿವೆ. ರಾಮನಗರ ತಾಲೂಕಿನ ಕಸಬಾ ಹೋಬಳಿ ಸುಗ್ಗನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗದಗಯ್ಯನದೊಡ್ಡಿ ಗ್ರಾಮದ ಬಳಿ ಅರ್ಕಾವತಿ ನದಿಗೆ ನಿರ್ಮಿಸಿದ್ದ ಸೇತುವೆ ಹಾನಿಯಾಗಿ, ಗ್ರಾಮಸ್ಥರು ಪರದಾಡುವಂತಾಗಿದೆ. ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದೆ. ಜಿಲ್ಲೆಯ ಜೀವನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕಾವೇರಿ ನದಿಗೆ 18 ಸಾವಿರ ಕ್ಯುಸೆಕ್‌ ನೀರು : ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯಕ್ಕೆ ಹೆಚ್ಚು ಪ್ರಮಾಣದಲ್ಲಿ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯಿಂದ ಸುಮಾರು 18 ಸಾವಿರಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಜಲಾಶಯಕ್ಕೆ 17 ಸಾವಿರಕ್ಕೂ ಹೆಚ್ಚಿನ ಕ್ಯುಸೆಕ್‌ ನೀರು ಬರುತ್ತಿದೆ. ಈಗಾಗಲೇ ಅಣೆಕಟ್ಟೆಭರ್ತಿಯಾಗಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಕಾವೇರಿ ನದಿಗೆ 18 ಸಾವಿರಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ಬಿಡಿಲಾಗುತ್ತಿದೆ. ಇದರಿಂದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ದಿಢೀರ್‌ ಮಳೆ ಸುರಿದು ಕೆರೆ-ಕಟ್ಟೆ, ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಸೇರಿದೆ. ಮಳೆ ಅಭಾವ ಎದುರಿಸುತ್ತಿದ್ದ ಪಾವಗಡ ಸೇರಿದಂತೆ ತುಮಕೂರು, ಶಿರಾ, ಮಧುಗಿರಿ, ಕುಣಿಗಲ್‌, ಕೊರಟಗೆರೆ, ಗುಬ್ಬಿ, ತಿಪಟೂರು, ಚಿ.ನಾ. ಹಳ್ಳಿ ಹೀಗೆ ಎಲ್ಲ ತಾಲೂಕುಗಳಲ್ಲೂ ವರ್ಷಧಾರೆಯಾಗಿದೆ. ಹಲವು ವರ್ಷಗಳಿಂದ ಬರಿದಾಗಿದ್ದ ಕೆರೆ-ಕಟ್ಟೆಗಳೂ ಕೂಡ ಮಳೆಯಿಂದಾಗಿ ತುಂಬಿ ಹರಿಯುತ್ತಿವೆ.

ಇನ್ನು ಕೊರಟಗೆರೆ ತಾಲೂಕಿನ ತುಂಬಾಡಿಯ ಹೊಸಕೆರೆ ಕೋಡಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಬಾಲಕಿಯರ ರಕ್ಷಣೆ ಮಾಡಲಾಗಿದೆ. ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಇಬ್ಬರು ಬಾಲಕಿಯರು ಆಟವಾಡಲು ಇಳಿದ ವೇಳೆ ನೀರಿನ ರಭಸ ಹೆಚ್ಚಾಗಿರುವುದು ಅವರ ಗಮನಕ್ಕೆ ಬರಲಿಲ್ಲ.

ಯುವಕನ ರಕ್ಷಣೆ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಕೆರೆ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಬಂದ್‌ ಮಾಡಲಾಗಿದ್ದರೂ ಯುವಕನೊಬ್ಬ ಬೈಕಲ್ಲಿ ಕೋಡಿ ದಾಟಲು ಯತ್ನಿಸಿದ್ದಾನೆ. ಆದರೆ ಬೈಕ್‌ ಆಯತಪ್ಪಿ ಕೋಡಿಯಲ್ಲಿ ಬಿದ್ದು ಕೊಚ್ಚಿ ಹೋಗುತಿತ್ತು. ತಕ್ಷಣ ಗ್ರಾಮಸ್ಥರು ಬೈಕ್‌ ಸಮೇತ ಯುವಕನನ್ನು ಎಳೆದು ದಡ ಸೇರಿಸಿದ್ದಾರೆ. ಇನ್ನು ತಾಲೂಕಿನ ನೂರಾರು ವಿದ್ಯುತ್‌ ಕಂಬಗಳು ಧರೆಗುಳಿದಿವೆ. ಸೇತುವೆ, ರಸ್ತೆಗಳು ಕೊಚ್ಚಿ ಹೋಗಿವೆ, 50ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ.

click me!