
ಬೆಂಗಳೂರು (ಜು.23): ರಾಜ್ಯದಲ್ಲಿ ಕಳೆದೈದು ದಿನದಿಂದ ಸತತವಾಗಿ ಸುರಿಯುತ್ತಿರುವ ಮಳೆ ಗುರುವಾರ ಭಾರೀ ಅನಾಹುತ ಸೃಷ್ಟಿಸಿದೆ. ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭೂಕುಸಿತದ ಆತಂಕ ಶುರುವಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ-ಹುಬ್ಬಳ್ಳಿ ಹೆದ್ದಾರಿಯ ಯಲ್ಲಾಪುರ ಬಳಿ ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದೆ.
ಶಿರಾಡಿಘಾಟ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಯಲ್ಲಾಪುರದಲ್ಲಿ ಮಣ್ಣು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಆರಂಭವಾಗಿದೆ. ಅದೇ ರೀತಿ ಚಿಕ್ಕಮಗಳೂರಿನ ಹೊರನಾಡಿನ ಹಲವೆಡೆಯೂ ಭೂಕುಸಿತ ಆಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಬೆಳಗಾವಿ ಮಳೆಗೆ ಉರುಳಿ ಬಿದ್ದ ಮನೆಗಳು..ಎಲ್ಲೆಲ್ಲೂ ನೀರು
ಈ ಮಧ್ಯೆ ಚಿಕ್ಕಮಗಳೂರು, ಉತ್ತರಕನ್ನಡ, ಬೆಳಗಾವಿಯಲ್ಲಿ ತುಂಗಾ, ಕದ್ರಾ ಸೇರಿ ಹಲವು ನದಿಗಳು ಉಕ್ಕಿಹರಿಯುತ್ತಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಉತ್ತರ ಕನ್ನಡದ ಅಂಕೋಲಾದಲ್ಲಿ ಹುಬ್ಬಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಮತ್ತು ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರು ಕೆಲಕಾಲ ಪರದಾಡುವಂತಾಗಿದೆ.
12 ಜಿಲ್ಲೆಗಳಲ್ಲಿ ಮಳೆ-ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಕನ್ನಡ, ಬೆಳಗಾವಿ, ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಚಿಕ್ಕಮಗಳೂರಲ್ಲಿ ಮಳೆಯಬ್ಬರಕ್ಕೆ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ತಗ್ಗುಪ್ರದೇಶಗಳು ಜಲಾವೃತವಾಗಿವೆ. ಕಳಸ-ಹೊರನಾಡು ಸಂಪರ್ಕಿಸುವ ಹೆಬ್ಬಾಳ್ ಸೇತುವೆ ಮುಳುಗಡೆ ಹಂತಕ್ಕೆ ಭದ್ರಾ ನದಿ ನೀರು ಹರಿಯುತ್ತಿದೆ. ಕಳಸ-ಅಬ್ಬುಗಡಿಗೆ-ಕಲ್ಲುಗೋಡು ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ. ಹೊರನಾಡಿನ ಆಸುಪಾಸಿನ ಹಲವೆಡೆ ಸಣ್ಣಪುಟ್ಟಭೂ ಕುಸಿತ ಉಂಟಾಗಿದ್ದು, ಆತಂಕ ಎದುರಾಗಿದೆ. ತುಂಗಾನದಿ ಅಪಾಯದ ಮಟ್ಟಮೀರಿ ಹರಿಯುತ್ತಿದ್ದು ಶೃಂಗೇರಿ ಮಠದ ಕಪ್ಪೆಶಂಕರ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ.
ರಾಜ್ಯದ ಹಲವೆಡೆ ಭಾರೀ ಮಳೆ : ಮನೆಗಳ ಕುಸಿತ
45 ಕುಟುಂಬ ಸ್ಥಳಾಂತರ: ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಕದ್ರಾ ಮತ್ತು ಕೊಡಸಳ್ಳಿ ಡ್ಯಾಂನಿಂದ ಹೆಚ್ಚುವರಿ ನೀರು ಹೊರ ಬಿಟ್ಟಕಾರಣ ಕದ್ರಾ ಬಳಿ ಸುಮಾರು 25 ಮನೆಗಳಿಗೆ ನೀರು ನುಗ್ಗಿದೆ. ಕದ್ರಾ, ಕಾಳಿ, ಗಂಗಾವಳಿ, ಅಘನಾಶಿ ಮತ್ತಿತರ ನದಿಗಳ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ 45 ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಕುಸಿದ ಗುಡ್ಡ: ಅಂಕೋಲಾ-ಹುಬ್ಬಳ್ಳಿ ಹೆದ್ದಾರಿಯ ಯಲ್ಲಾಪುರ ಬಳಿಯ ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿದಿದ್ದು, 2 ಗಂಟೆ ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಅಂಕೋಲದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿದ ಪರಿಣಾಮ ಸಂಚಾರಕ್ಕೆ ಕೆಲಕಾಲ ವ್ಯತ್ಯಯ ಆಗಿತ್ತು.
8 ಸೇತುವೆಗಳು ಮುಳುಗಡೆ: ಬೆಳಗಾವಿಯ ಪಶ್ಚಿಮಘಟ್ಟಭಾಗದಲ್ಲಿ ಭರ್ಜರಿ ಮಳೆಯಾಗುತ್ತಿರುವ ಕಾರಣ ಖಾನಾಪುರದಲ್ಲಿ ಮಹದಾಯಿ, ಪಾಂಡರಿ, ಮಲಪ್ರಭಾ ನದಿಗಳು, ಚಿಕ್ಕೋಡಿಯಲ್ಲಿ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಹಿರಣ್ಯಕೇಶಿ ನದಿಗಳ ನೀರಿನ ಮಟ್ಟಏರಿಕೆಯಾಗಿದೆ. ಜತ್ರಾಟ-ಭೀವಶಿ ಸೇರಿ 8 ಸೇತುವೆಗಳು ಮುಳುಗಡೆಯಾಗಿವೆ. ಇದರಿಂದ 16 ಗ್ರಾಮಗಳಿಗೆ ಸಂಪರ್ಕಿಸಲು ಪರಾರಯಯ ಮಾರ್ಗ ಅನುಸರಿಸಬೇಕಿದೆ.
ನದಿಯಂತಾದ ಹೆದ್ದಾರಿ: ಬೆಂಗಳೂರು-ಪುಣೆ ರಾ.ಹೆ.4ರಲ್ಲಿ ಬೆಳಗಾವಿ ತಾಲೂಕಿನ ವಂಟಮೂರಿ ಘಾಟ್ ಬಳಿ ಭಾರೀ ನೀರು ಹರಿದ ಕಾರಣ ರಸ್ತೆ ನದಿಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕಾರೊಂದು ಕೆಲಕಾಲ ಸಿಕ್ಕಿಹಾಕಿಕೊಂಡು ಆತಂಕ ಸೃಷ್ಟಿಸಿದ ಘಟನೆಯೂ ನಡೆದಿದೆ. ಇನ್ನು ಬೆಳಗಾವಿ ನಗರದಲ್ಲಿ ಕೃತಕ ನೆರೆಯಿಂದಾಗಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ