ಮಂಗಳೂರಿನ ದೇರೇಬೈಲಿನಲ್ಲಿ ಪೆಟ್ರೋಲ್ ಪಂಪ್ ನಿರ್ಮಾಣಕ್ಕಾಗಿ ಗುಡ್ಡ ಅಗೆದು ಸಮತಟ್ಟು ಮಾಡಲಾಗಿತ್ತು. ಇದೀಗ ಗುಡ್ಡ ಕುಸಿದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಚಾರ್ಮಾಡಿ ಹೆದ್ದಾರಿಯಲ್ಲಿ ನಾಲ್ಕೈದು ಕಡೆ ತಡೆಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ.
ಬೆಂಗಳೂರು(ಆ.03): ಕೊಡಗು ಹೊರತುಪಡಿಸಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಬುಧವಾರ ರಾತ್ರಿಯಿಂದೀಚೆಗೆ ತಗ್ಗು ಪ್ರದೇಶಗಳಿಗೆ ನದಿ ನೀರು ನುಗ್ಗಿ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಭೂಕುಸಿತ ಕಂಡು ಬಂದಿದ್ದು, ಹಲವೆಡೆ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಉಡುಪಿ ಜಿಲ್ಲೆಯ ಕೊಲ್ಲೂರಲ್ಲಿ ಗುಡ್ಡ ಕುಸಿತಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಭಾರೀ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಸುಳ್ಯ ತಾಲೂಕು, ಉಡುಪಿಯ ಬೈಂದೂರು ವ್ಯಾಪ್ತಿಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲಗ್ರಾಮಗಳಲ್ಲಿ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿತ್ತು. ಇದೀಗ ಮತ್ತೆ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಶುಕ್ರವಾರವೂ ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಬ್ರಹ್ಮಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕರ್ನಾಟಕದಲ್ಲಿ ಈ ಬಾರಿ ಸುರಿದಿದ್ದು 30 ವರ್ಷಗಳಲ್ಲೇ ದಾಖಲೆ ಮಳೆ..!
ಅಬ್ಬರಿಸಿದ ಮಳೆ:
ಕಳೆದ ಕೆಲ ದಿನಗಳಿಂದ ಬಿಟ್ಟು ಬಿಟ್ಟು ಅಬ್ಬರಿಸುತ್ತಿರುವ ಆರಿದ್ರಾ ಮಳೆಗೆ ಕರಾವಳಿ ಹಾಗೂ ಮಲೆನಾಡಿನ ಪ್ರಮುಖ ನದಿಗಳಾದ ತುಂಗಾ, ಭದ್ರಾ, ಸೌಪರ್ಣಿಕಾ, ವಾರಾಹಿ, ಗುಂಡಬಾಳ, ಅಘನಾಶಿನಿ ಸೇರಿ ಹಲವು ನದಿಗಳು, ಸಣ್ಣಪುಟ್ಟ ಹಳ್ಳ-ಕೊಳ್ಳಗಳು ಪ್ರವಾಹ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿ ತಟದ ಪ್ರದೇಶದಲ್ಲಿ ಗುರುವಾರ ಆತಂಕದ ವಾತಾವರಣ ಸೃಷ್ಟಿಸಿತ್ತು.
ಉತ್ತರ ಕನ್ನಡದಲ್ಲಿ ಅಘನಾಶಿನಿ, ಗಂಗಾವಳಿ, ಚಂಡಿಕಾ, ಗುಂಡಬಾಳ ನದಿಗಳ ಅಬ್ಬರಕ್ಕೆ 35ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಿ 3 ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕುಮಟಾ ತಾಲೂಕಿನ ಕತಗಾಲ ಬಳಿ ಚಂಡಿಕಾ ನದಿ ಪ್ರವಾಹ ಕುಮಟಾ ಶಿರಸಿ ಹೆದ್ದಾರಿಯ ಮೇಲೂ ಹರಿದ ಕಾರಣ ಹೆದ್ದಾರಿ ಸಂಚಾರವೂ ಕೆಲಕಾಲ ಸ್ಥಗಿತಗೊಂಡಿತ್ತು. ರಸ್ತೆ ಮೇಲಿನ ನೀರನ್ನು ಲೆಕ್ಕಿಸದೆ ಚಲಿಸಿದ ಖಾಸಗಿ ಬಸ್‌ವೊಂದು ಪ್ರವಾಹದ ನಡುವೆ ಸಿಲುಕಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೊನೆಗೆ ಬೋಟ್ ಮೂಲಕ ಪ್ರಯಾಣಿಕರನ್ನು ಸುರಕ್ಷಿತವಾಗಿ ದಡ ಸೇರಿಸಲಾಯಿತು.
ಇನ್ನು ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಸೌಪರ್ಣಿಕಾ ಮತ್ತು ವಾರಾಹಿ ನದಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ತೀರ ಪ್ರದೇಶದ ಸುಮಾರು 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿತು.
ಚಿಕ್ಕಮಗಳೂರಿನಲ್ಲಿ ತುಂಗಾ, ಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗಿ ಶೃಂಗೇರಿ ಮತ್ತು ಕೊಪ್ಪದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಸಾ ಸಮೀಪದ ಹೆಬ್ಬಾಳ ಸೇತುವೆ ಮುಳುಗುವ ಹಂತದಲ್ಲಿ ನೀರು ಹರಿಯುತ್ತಿದೆ. ತುಂಗಾ ನದಿಯಿಂದಾಗಿ ಶಿವಮೊಗ್ಗ ನಗರದ ಕೋರ್ಪಳಯ್ಯ ಛತ್ರ ಹಿಂಭಾಗದಲ್ಲಿರುವ ನದಿಯ ಮಂಟಪ ಬಹುತೇಕ ಮುಳುಗಿದೆ.
ಭೂ ಕುಸಿತ:
ಮಂಗಳೂರಿನ ದೇರೇಬೈಲಿನಲ್ಲಿ ಪೆಟ್ರೋಲ್ ಪಂಪ್ ನಿರ್ಮಾಣಕ್ಕಾಗಿ ಗುಡ್ಡ ಅಗೆದು ಸಮತಟ್ಟು ಮಾಡಲಾಗಿತ್ತು. ಇದೀಗ ಗುಡ್ಡ ಕುಸಿದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಚಾರ್ಮಾಡಿ ಹೆದ್ದಾರಿಯಲ್ಲಿ ನಾಲ್ಕೈದು ಕಡೆ ತಡೆಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಶಿವಮೊಗ್ಗದ ಸಮಗೋಡದಲ್ಲಿ ಗುಡ್ಡ ಕುಸಿದು ರಾಣಿಬೆನ್ನೂರು-ಬೈಂದೂರು ಹೆದ್ದಾರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ವರ್ನಕೇರಿಯಲ್ಲಿ ಗುಡ್ಡ ಕುಸಿದು ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಮಹಿಳೆ ಬಲಿ:
ಉಡುಪಿ ಜಿಲ್ಲೆಯ ಕೊಲ್ಲೂರು-ಕೊಡಚಾದ್ರಿ ದಾರಿಯಲ್ಲಿರುವ ಸೊಸೈಟಿ ಗುಡ್ಡೆ ಎಂಬಲ್ಲಿ 60 ಅಡಿ ಎತ್ತರದ ಗುಡ್ಡ ಕುಸಿದು ಹಳ್ಳಿಬೇರು ಗ್ರಾಮದ ಪುಟ್ಟ ಎಂಬವರ ಪತ್ನಿ ಅಂಬಾ (48) ಮೃತ ಮಹಿಳೆ ಮೃತಪಟ್ಟಿದ್ದಾರೆ. ಗುಡ್ಡ ಕುಸಿತದಿಂದ ಮಣ್ಣಿನಡಿ ಸಿಲುಕಿದ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
100 ಅಡಿ ತಲುಪಿದ ಕೆಆರ್‌ಎಸ್ ನೀರಿನಮಟ್ಟ
ಬೆಂಗಳೂರು: ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಲಾಶಯಗಳ ನೀರಿನಮಟ್ಟ ಏರಿಕೆಯಾಗಿದೆ. ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಜಲಾಶಯದ ನೀರಿನಮಟ್ಟ ನೂರು ಅಡಿ ತಲುಪಿದೆ.
ಶಿವಮೊಗ್ಗ: 21ನೇ ಬಾರಿ ಭರ್ತಿಯಾದ ಲಿಂಗನಮಕ್ಕಿ ಡ್ಯಾಂ, ನದಿಪಾತ್ರದ ಜನರಿಗೆ ಆತಂಕ..!
ಗರಿಷ್ಠ ಮಟ್ಟ 124.80 ಅಡಿಯ ಕೆಆರ್‌ಎಸ್ ಡ್ಯಾಂಗೆ ಗುರುವಾರ ರಾತ್ರಿ 8 ಗಂಟೆ ವೇಳೆ 99.70 ಅಡಿ ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ 8,669 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಶುಕ್ರವಾರ ಬೆಳಗ್ಗೆ ಡ್ಯಾಂನ ನೀರಿನ ಮಟ್ಟ 100 ಅಡಿ ದಾಟಲಿದೆ. ಇನ್ನು ಶಿವಮೊಗ್ಗದ ಭದ್ರಾ ಡ್ಯಾಂ ನೀರಿನ ಮಟ್ಟ 4 ದಿನಗಳಲ್ಲಿ ಮೂರು ಅಡಿಯಷ್ಟು ಹೆಚ್ಚಳವಾಗಿದೆ. 186 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಈಗ 127 ಅಡಿ ನೀರು ಸಂಗ್ರಹವಾಗಿದೆ. ಅದೇ ರೀತಿ 1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಇದೀಗ 1760.10 ಅಡಿ ತಲುಪಿದೆ.
ಕಮಲಶಿಲೆ ಬ್ರಾಹ್ಮಿ ದುರ್ಗೆಯ ಪಾದ ತೊಳೆದ ಕುಬ್ಜಾ ನದಿ
ಕುಂದಾಪುರ: ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಇತಿಹಾಸ ಪ್ರಸಿದ್ಧ ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ನುಗ್ಗಿದೆ. ಪ್ರತಿ ಮಳೆಗಾಲದಲ್ಲಿ ಉಕ್ಕೇರುವ ಕುಬ್ಜಾ ನದಿ ನೀರು ಈ ದೇವಸ್ಥಾನದ ಗರ್ಭಗುಡಿಯವರೆಗೂ ಸಾಗಿ, ಬ್ರಾಹ್ಮೀ ದುರ್ಗೆಯನ್ನು ತೋಯಿಸುವುದು ವಾಡಿಕೆ. ಈ ಬಾರಿಯೂ ಬುಧವಾರ ತಡರಾತ್ರಿ ಸುಮಾರು 1.30ರ ವೇಳೆಯಲ್ಲಿ ಕುಬ್ಜೆ ಉಕ್ಕಿ ಬಂದು ದುರ್ಗೆಯನ್ನು ತೋಯಿಸಿದ್ದಾಳೆ. ಈ ವೇಳೆ ಉಪಸ್ಥಿತರಿದ್ದ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.