ಕರ್ನಾಟಕದಲ್ಲಿ ಈಗಾಗಲೇ ಕಳೆದೊಂದು ತಿಂಗಳಿನಿಂದ ವರುಣನ ಆರ್ಭಟ ಹೆಚ್ಚಾಗಿದೆ. ಇದರಿಂದ ಜನ ಮಳೆ ಸಾಕು ಎನ್ನುತ್ತಿದ್ದಾರೆ. ಆದ್ರೆ, ಮಳೆ ಕಾಟ ಇನ್ನಷ್ಟು ದಿನ ಮುಂದುವರಿಯಲಿದೆ.
ಬೆಂಗಳೂರು, (ಸೆಪ್ಟೆಂಬರ್.04): ಈಗಾಗಲೇ ಮಳೆಯ ಅಬ್ಬರಿಂದ ಜನರ ಬದುಕು ನೀರುಪಾಲಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರಿಂದ ಜನರು ಮಳೆ ಸಾಕಪ್ಪ ಸಾಕು ಎನ್ನುತ್ತಿದ್ದಾರೆ.
ಇದರ ಮಧ್ಯೆ ಕರ್ನಾಟಕದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ನೈಋತ್ಯ ಮುಂಗಾರು ಅತಿಚುರುಕಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7ರವರೆಗೂ ಹಲವೆಡೆ ಧಾರಾಕಾರ ಮಳೆಯಾಗಲಿದೆ.
ಕರಾವಳಿ ಹಾಗೂ ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ವೇಗವಾಗಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.
Mohandas Pai Tweet: ದಯವಿಟ್ಟು ಬೆಂಗಳೂರು ಕಾಪಾಡಿ; ಮೋದಿಗೆ ಟ್ವೀಟ್ ಮೂಲಕ ಮನವಿ
ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಮುಂದಿನ 48 ಗಂಟೆಗಳಲ್ಲಿ ಕರಾವಳಿ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು. ಚಿತ್ರದುರ್ಗ, ಹಾಸನ, ಕೊಡಗು ರಾಮನಗರ ಜಿಲ್ಲೆಯ ಒಂದೆರೆಡು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ.
ಈಗಾಗಲೇ ಕಳೆದೊಂದು ತಿಂಗಳಿನಿಂದ ವರುಣನ ಆರ್ಭಟ ಹೆಚ್ಚಾಗಿರುವುದರಿಂದ ಕಂಗೆಟ್ಟಿರುವ ಜನರಿಗೆ ಈಗ ಮತ್ತೆ ಮಳೆ ಮುನ್ಸೂಚನೆ ನೀಡುರಿವುದು ಇನ್ನಷ್ಟು ಆತಂಕ ಎದುರಾಗಿದೆ.
ಬೆಂಗಳೂರು-ಮೈಸೂರು ಸಂಚರಿಸುವವರಿಗೆ ಬದಲಿ ಮಾರ್ಗ ಬಳಸಲು ಸೂಚನೆ
ಭಾನುವಾರ (ಸೆಪ್ಟೆಂಬರ್ 4) ಭಾರೀ ಮಳೆಯಾಗುವ ಮುನ್ಸೂಚನೆಯಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಬದಲಿ ಮಾರ್ಗದಲ್ಲಿ ಸಂಚರಿಸುವುದು ಒಳ್ಳೆಯದು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ರಾಮನಗರದ ಬದಲಿಗೆ ಬೆಂಗಳೂರು-ಕನಕಪುರ ಅಥವಾ ಬೆಂಗಳೂರು-ಕುಣಿಗಲ್ ಮಾರ್ಗವಾಗಿ ಮೈಸೂರು ತಲುಪುವಂತೆ ಪೊಲೀಸರು ಸಲಹೆ ಕೊಟ್ಟಿದ್ದಾರೆ. ಸ್ವಲ್ಪ ಮಳೆ ಸುರಿದರೂ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಒಂದು ವೇಳೆ ಮಳೆ ಪ್ರಮಾಣ ಹೆಚ್ಚಾದರೆ ಹೆದ್ದಾರಿಯಲ್ಲಿ ಪ್ರವಾಹದಂತೆ ನೀರು ನುಗ್ಗುತ್ತದೆ. ಹೀಗಾಗಿಯೇ ಬದಲಿ ಮಾರ್ಗದ ಮೂಲಕ ಸಂಚರಿಸುವುದು ಒಳಿತು ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ಸುರಿದಿದ್ದ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಲವು ಸಮಸ್ಯೆಗಳಾಗಿದ್ದವು. ಸಂಚಾರವನ್ನೇ ನಿರ್ಬಂಧಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮೊದಲೇ ಮಾಹಿತಿ ನೀಡಿದ್ದಾರೆ.