ಬೆಂಗಳೂರು(ಡಿ.19): ತ್ವರಿತವಾಗಿ ಹರಡುವ ಸಾಮರ್ಥ್ಯವಿರುವ ಕೊರೋನಾದ ಒಮಿಕ್ರೋನ್(Omicron virus) ರೂಪಾಂತರಿ ತಳಿಯ ಕಡಿವಾಣಕ್ಕೆ ಮತ್ತಷ್ಟುಕಠಿಣ ಕ್ರಮಗಳ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಜೊತೆ ಚರ್ಚೆ ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್(K Sudhakar) ಹೇಳಿದ್ದಾರೆ.
ತನ್ಮೂಲಕ ರಾಜ್ಯದಲ್ಲಿ(Karnataka) ಒಮಿಕ್ರೋನ್ ಪ್ರಕರಣ ಅಥವಾ ಒಟ್ಟಾರೆ ಕೋವಿಡ್(Coronavirus) ಪ್ರಕರಣಗಳು ಹೆಚ್ಚಳಗೊಂಡರೆ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸುಳಿವನ್ನು ಆರೋಗ್ಯ ಸಚಿವರು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರೋನ್‌ನಿಂದ ಬ್ರಿಟನ್‌ನಲ್ಲಿ(Britain) ಉದ್ಭವಿಸಿರುವ ಪರಿಸ್ಥಿತಿ ಗಮನಿಸಿದರೆ ಆತಂಕವಾಗುತ್ತದೆ. ನಮ್ಮಲ್ಲಿ ಸೋಂಕನ್ನು ನಿಯಂತ್ರಿಸಲು ಜನರ ಚಲನ ವಲನಗಳ ಬಗ್ಗೆ ಅತಿ ಜಾಗೃತಿ ವಹಿಸಬೇಕು. ಸರ್ಕಾರ ಬಿಗಿ ಕ್ರಮಗಳನ್ನು ಜಾರಿಗೊಳಿಸಿದರೆ ಜನರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
Omicron lockdown ಕ್ರಿಸ್ಮಸ್ ಬಳಿಕ 2 ವಾರ ಲಾಕ್‌ಡೌನ್, ಬ್ರಿಟನ್‌ನಲ್ಲಿ ಕಠಿಣ ಜಾರಿ ಸಾಧ್ಯತೆ!
ಕ್ರಿಸ್‌ಮಸ್(christmas), ಹೊಸ ವರ್ಷಾಚರಣೆ(New Year 2022) ಸೇರಿದಂತೆ ವಿವಿಧ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರುವ ಬಗ್ಗೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸುತ್ತಿದ್ದು, ಶೀಘ್ರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ವಿದೇಶದಿಂದ ಬಂದವರ ಸಾಂಸ್ಥಿಕ ಕ್ವಾರಂಟೈನ್ ಇಲ್ಲ:
ವಿದೇಶದಿಂದ ಬಂದವರನ್ನು ಏರ್‌ಪೋರ್ಟ್‌ನಲ್ಲಿ ಕ್ವಾರಂಟೈನ್ ಮಾಡಲು ಸದ್ಯ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಂಸ್ಥಿಕ ಕ್ವಾರಂಟೈನ್ ಇನ್ನೂ ಆರಂಭಿಸಿಲ್ಲ. ಒಮಿಕ್ರೋನ್ ಸೋಂಕು ಮೂರ್ನಾಲ್ಕು ದಿನದಲ್ಲೇ ಪತ್ತೆಯಾಗುತ್ತದೆ. ಆದರೆ ಈ ಅವಧಿಯಲ್ಲಿ ವಿದೇಶದಿಂದ ಬಂದಿದ್ದರೆ ವಿಮಾನ ನಿಲ್ದಾಣದ ಪರೀಕ್ಷೆಯ ಸಂದರ್ಭದಲ್ಲಿ ತಪ್ಪಾಗಿ ನೆಗೆಟಿವ್ ಬರುತ್ತದೆ. ಮನೆಗೆ ಹೋದ ಒಂದೆರಡು ದಿನದಲ್ಲಿ ಪಾಸಿಟಿವ್ ಬರುತ್ತದೆ. ಆದ್ದರಿಂದ ವಿಮಾನ ನಿಲ್ದಾಣದಲ್ಲೇ ವಿದೇಶದಿಂದ ಬಂದವರನ್ನು ಪ್ರತ್ಯೇಕವಾಗಿರಿಸಬೇಕು ಎಂಬ ಬೇಡಿಕೆ ಇದೆ. ಆದರೆ ನಾವಿನ್ನೂ ಈ ಬಗ್ಗೆ ತೀರ್ಮಾನಕ್ಕೆ ಬಂದಿಲ್ಲ. ಸದ್ಯ ಮನೆಯಲ್ಲೇ ಪ್ರತ್ಯೇಕವಾಗಿರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅವರ ಮೇಲೆ ನಿಗಾ ಇಡುತ್ತಿದ್ದೇವೆ. ಸಂಪರ್ಕಿತರನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದೇವೆ ಎಂದು ಸುಧಾಕರ್ ತಿಳಿಸಿದ್ದಾರೆ.
News Hour ಫೆಬ್ರವರಿಯಲ್ಲಿ ಮೂರನೇ ಅಲೆ ಎದುರಿಸಲು ಸಿದ್ದರಾಗಿ, ಭಾರತಕ್ಕೆ ಎಚ್ಚರಿಕೆ!
ಮಹಾರಾಷ್ಟ್ರದಲ್ಲಿ ಲಸಿಕೆ ಪಡೆದಿರುವವರಿಗೆ ಯೂನಿವರ್ಸಲ್ ಪಾಸ್ ವ್ಯವಸ್ಥೆ ಜಾರಿ ಮಾಡಿದ್ದಾರೆ. ಆದರೆ ನಮ್ಮಲ್ಲಿ ಆ ಬಗ್ಗೆ ಇನ್ನೂ ತೀರ್ಮಾನಕ್ಕೆ ಬಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸಕ್ರಿಯ ಸೋಂಕಿತರು 7 ಮಾತ್ರ
ರಾಜ್ಯದಲ್ಲಿ ಈವರೆಗೂ 14 ಮಂದಿಯಲ್ಲಿ ಒಮಿಕ್ರೋನ್ ಸೋಂಕು ದೃಢಪಟ್ಟಿವೆ. ಬೆಂಗಳೂರಿನ ಇಬ್ಬರು (ಮೊದಲ ಮತ್ತು ಎರಡನೇ ಪ್ರಕರಣ) ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಒಬ್ಬ ವೃದ್ಧ (3ನೇ ಪ್ರಕರಣ) ನೆಗೆಟಿವ್ ವರದಿ ನೀಡಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಕಳೆದ ಗುರುವಾರ ವರದಿಯಾದ ಐದು ಒಮಿಕ್ರೋನ್ ಸೋಂಕಿತರಲ್ಲಿ ನಾಲ್ವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ, ಒಬ್ಬ ಬೆಳಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಶನಿವಾರ ವರದಿಯಾದ ಪ್ರಕರಣಗಳಲ್ಲಿ ಬಂಟ್ವಾಳದ ನಾಲ್ವರು ವಿದ್ಯಾರ್ಥಿನಿಯರು ಕಳೆದ ತಿಂಗಳೇ ಸೋಂಕು ಬಂದು ಗುಣಮುಖರಾಗಿದ್ದಾರೆ. ಇಂಗ್ಲೆಂಡ್‌ನಿಂದ ಬಂದ ಯುವತಿ ಬೆಂಗಳೂರಿನಲ್ಲಿ, ಮಂಗಳೂರಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂಲಕ ಒಟ್ಟಾರೆ 14 ಸೋಂಕಿತರಲ್ಲಿ ಏಳು ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
WHO ಎಚ್ಚರಿಕೆ
ಒಮಿಕ್ರೋನ್ ಕೊರೋನಾ ರೂಪಾಂತರಿ ತಳಿಯು ಕೋವಿಡ್ ವಿರುದ್ಧ ಜನರಲ್ಲಿ ಸಾಮೂಹಿಕ ರೋಗನಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ) ಹೆಚ್ಚಿರುವ ದೇಶಗಳಲ್ಲೂ ಶರವೇಗದಲ್ಲಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ. ಸದ್ಯ 89 ದೇಶಗಳಿಗೆ ಈ ವೈರಸ್ ಹರಡಿದ್ದು, 1.5 ದಿನದಿಂದ 3 ದಿನದಲ್ಲಿ ಒಮಿಕ್ರೋನ್ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ ಎಂದೂ ತಿಳಿಸಿದೆ.