Belagavi Violence ಪುಂಡರ ವಿರುದ್ಧ ಕೆಂಡ: ಬೆಳಗಾವಿ ಚಲೋ, ಸುವರ್ಣಸೌಧಕ್ಕೆ ಮುತ್ತಿಗೆ, ಡಿ.20ಕ್ಕೆ ಕನ್ನಡಿಗರ ಶಕ್ತಿಪ್ರದರ್ಶನ!

By Suvarna News  |  First Published Dec 19, 2021, 1:50 AM IST
  • ನಾಳೆ ಕನ್ನಡ ಸಂಘಟನೆಗಳಿಂದ ಬೆಳಗಾವಿ ಚಲೋ, ಸುವರ್ಣಸೌಧಕ್ಕೆ ಮುತ್ತಿಗೆ
  •  ಎಂಇಎಸ್‌, ಶಿವಸೇನೆ ಪುಂಡರ ವಿರುದ್ಧ ಕನ್ನಡಿಗರ ಕೆಂಡ, ನಿಷೇಧಕ್ಕೆ ಆಗ್ರಹ
  • ಸರ್ಕಾರ ಕ್ರಮ ಕೈಗೊಳ್ಳದಿದ್ದರೇ ನಾವೇ ಪಾಠ ಕಲಿಸುತ್ತೇವೆ
  • ಮರಾಠಿ ಪುಂಡರ ವಿರುದ್ಧ ಕನ್ನಡ ಹೋರಾಟಗಾರರು ಕೆಂಡ
     

ಬೆಂಗಳೂರು(ಡಿ.19):  ಕರುನಾಡ(Karnataka) ನೆಲದಲ್ಲೇ ಕನ್ನಡಿಗರ ವಿರುದ್ಧ ಪುಂಡಾಟ ನಡೆಸಿದ ಹಾಗೂ ಕನ್ನಡ ಬಾವುಟ(Kannada Flag) ಸುಟ್ಟ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ವಿರುದ್ಧ ಕನ್ನಡ ಸಂಘಟನೆಗಳು ಕೆಂಡವಾಗಿದ್ದು, ಮರಾಠಿ ಪುಂಡರ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಗ್ರಹಿಸಿವೆ. ಅಲ್ಲದೆ, ರಾಜ್ಯದಲ್ಲಿ ಎಂಇಎಸ್‌ ನಿಷೇಧಿಸಬೇಕು ಹಾಗೂ ಮಹಾರಾಷ್ಟ್ರದಲ್ಲಿ(Maharastra) ಕನ್ನಡಿಗರ ಹಿತ ರಕ್ಷಣೆಗೆ ಮುಂದಾಗಬೇಕು ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ನಿರ್ಮಾಣ ಮಾಡಲು ಸೋಮವಾರ (ಡಿ.20) ಬೆಳಗಾವಿ ಚಲೋ(Belagavi Chalo) ಆಂದೋಲನ ಆಯೋಜಿವೆ. ಈ ಆಂದೋಲನದ ಅಂಗವಾಗಿ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆಯನ್ನೂ ಹಾಕಲು ಉದ್ದೇಶಿಸಿವೆ.

ಮರಾಠಿ(Marathi) ಪುಂಡರ ದಾಳಿ ಹಿನ್ನೆಲೆಯಲ್ಲಿ ಕನ್ನಡಿಗರ ಹೋರಾಟದ ರೂಪರೇಷೆ ತೀರ್ಮಾನಿಸಲು ನಗರದಲ್ಲಿ ಕನ್ನಡಪರ, ರೈತ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರು ಶನಿವಾರ ಸಭೆ ಸೇರಿ ಈ ತೀರ್ಮಾನ ಕೈಗೊಂಡಿದ್ದಾರೆ. ಈ ಪುಂಡರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದ್ದಿದರೆ ಕನ್ನಡಪರ ಸಂಘಟನೆಗಳು(kannada organisation) ಕಾನೂನನ್ನು ಕೈಗೆ ತೆಗೆದುಕೊಂಡು ದೊಂಬಿಕೋರರಿಗೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನಾಯಕರು ನೀಡಿದ್ದಾರೆ.

Tap to resize

Latest Videos

undefined

Belagavi Row: ಬೆಳಗಾವಿಯಲ್ಲಿ ಪುಂಡಾಟ, ಪುಂಡರಿಗೆ ನ್ಯಾಯಾಂಗ ಬಂಧನ

ಸಭೆಯ ನಂತರ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಎರಡು ಬಣಗಳ ಮುಖ್ಯಸ್ಥರಾದ ನಾರಾಯಣ ಗೌಡ ಹಾಗೂ ಪ್ರವೀಣ್‌ ಶೆಟ್ಟಿಅವರು, ಪುಂಡರು ಗಲಭೆ ನಡೆಸಿರುವ ಬೆಳಗಾವಿಯ ನೆಲದಲ್ಲಿಯೇ ಕನ್ನಡಿಗರ ಶಕ್ತಿ ಪ್ರದರ್ಶನಕ್ಕೆ ಕನ್ನಡಪರ, ರೈತ, ದಲಿತ, ಪ್ರಗತಿಪರ ಸಂಘಟನೆಗಳು ತೀರ್ಮಾನಿಸಿ ಈ ಬೆಳಗಾವಿ ಚಲೋ ಚಳವಳಿ ಹಮ್ಮಿಕೊಂಡಿವೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ನೆಲಮಂಗಲ ಬಳಿ ಹೋರಾಟಗಾರೆಲ್ಲರೂ ಒಗ್ಗೂಡಿ ಬೆಳಗಾವಿಗೆ ತೆರಳಿದ್ದು, ಸೋಮವಾರ ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತದಿಂದ ಪಾದಯಾತ್ರೆ ಮೂಲಕ ತೆರಳಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿವೆ. ಈ ಆಂದೋಲನಕ್ಕೆ ನಾಡಿನ ಎಲ್ಲ ಕಡೆಯಿಂದ ಸಾಗರೋಪಾದಿಯಲ್ಲಿ ಕನ್ನಡ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

Sangolli Rayanna Statue Row: ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಧ್ವಂಸ, 27 ಆರೋಪಿಗಳ ಬಂಧನ

ರಾಜ್ಯಾದ್ಯಂತ ಪ್ರತಿಭಟನೆ:
ಮರಾಠಿ ಪುಂಡರ ಹಲ್ಲೆ ವಿರುದ್ಧ ಶನಿವಾರವೇ ರಾಜ್ಯಾದ್ಯಂತ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ನವಕರ್ನಾಟಕ ನಿರ್ಮಾಣ ವೇದಿಕೆ, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘ ಸೇರಿದಂತೆ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಬೆಳಗಾವಿಯಲ್ಲಿ ಪದೇ ಪದೇ ಕನ್ನಡಿಗರನ್ನು ಕೆಣಕುತ್ತಿರುವ ಎಂಇಎಸ್‌, ಶಿವಸೇನೆಯ ಪುಂಡರಿಗೆ ಮತ್ತು ಅವರ ಕೃತ್ಯಗಳಿಗೆ ಕಡಿವಾಣ ಹಾಕದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗೂಂಡಾಗಿರಿಯ ಕುರಿತು ಮೃದು ಧೋರಣೆ ಹೊಂದಿರುವ, ಮಾತನಾಡದಿರುವ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕಿದರು. ಇತ್ತ ಸಾಮಾಜಿಕ ಜಾಲತಾಣಗಳಲ್ಲಿಯೂ ಘಟನೆಯನ್ನು ವ್ಯಾಪಕವಾಗಿ ವಿರೋಧಿಸಿದ್ದು, ಎಂಇಎಸ್‌ನವರು ಕನ್ನಡಿಗರ ತಾಳ್ಮೆಯನ್ನು ಹೇಡಿತನ ಎಂದುಕೊಳ್ಳಬಾರದು. ಎಲ್ಲರೂ ಶಾಂತಿ ಸೌಹಾರ್ದದಿಂದ ಬಾಳೋಣ ಎಂದು ನೆಟ್ಟಿಗರು ಮನವಿ ಮಾಡಿದರು.

ಸಂಘಟನೆಗಳು ಒಟ್ಟಾಗಿ ಸಭೆ:
ಬೆಳಿಗ್ಗೆಯಿಂದ ಬೀದಿಗಿಳಿದು ಹೋರಾಟ ನಡೆಸಿದ ವಿವಿಧ ಕನ್ನಡ ಪರ ಸಂಘಟನೆಗಳು ಸಂಜೆಯಾಗುತ್ತಿದ್ದಂತೆ ಕರವೇ ಪ್ರವೀಣ್‌ ಶೆಟ್ಟಿನೇತೃತ್ವದಲ್ಲಿ ಬೆಂಗಳೂರಿನ ಚಾಲುಕ್ಯ ಸರ್ಕಲ… ಬಳಿಯಿರುವ ಗಾಲ್‌್ಫ ಕ್ಲಬ್‌ನಲ್ಲಿ ಸಭೆ ನಡೆಸಿದವು. ಈ ಸಭೆಯಲ್ಲಿ ಬಣ ರಾಜಕಾರಣವನ್ನು ಹೊರಗಿಟ್ಟು ಕರ್ನಾಟಕ ರಕ್ಷಣಾ ವೇದಿಕೆಯ ಎರಡೂ ಬಣಗಳ ಮುಖ್ಯಸ್ಥರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸೋಮವಾರ ನಡೆಯಲಿರುವ ಹೋರಾಟದಲ್ಲಿ ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಸಾ.ರಾ.ಗೋವಿಂದು, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಸೇರಿದಂತೆ ಪ್ರಮುಖರು ಕೂಡ ಭಾಗಿಯಾಗಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿತಿಳಿಸಿದರು.

ಜನಪ್ರತಿನಿಧಿಗಳಿಗೆ ಛೀಮಾರಿ:
ಘಟನೆಯನ್ನು ನೋಡಿಕೊಂಡು ಸುಮ್ಮನಿರುವ ಬೆಳಗಾವಿಯ ಶಾಸಕರು ಮತ್ತು ಸಚಿವರ ನಡೆಗೆ ಕನ್ನಡ ಹೋರಾಟಗಾರರು ಕಿಡಿಕಾರಿದ್ದಾರೆ. ಶನಿವಾರ ಬೆಳಿಗ್ಗೆ ಮೊದಲ ಟ್ವೀಟ್‌ನಲ್ಲೇ ಬೆಂಗಳೂರಿನ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಘಟನೆಯನ್ನು ಖಂಡಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ನಡೆಯನ್ನು ಕನ್ನಡಿಗರು ವಿರೋಧಿಸಿದ್ದಾರೆ. ರಾಜ್ಯದ ಸಚಿವೆಯಾಗಿ ಅಲ್ಲಿನ ಜನರನ್ನು ಓಲೈಸುವ ತಂತ್ರ ಮಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ. ಶಿವಸೇನೆಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್‌ ನಾಯಕರು ಕೂಡ ಮೃದು ಧೋರಣೆ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಇಎಸ್‌ ಪುಂಡರು ಗೂಂಡಾಗಿರಿ ನಡೆಸಿ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಈ ಮೂಲಕ ಕನ್ನಡಿಗರ ಸ್ವಾಭಿಮಾನ ಕೆರಳಿಸುತ್ತಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡಿರುವ ರಾಜ್ಯ ಸರ್ಕಾರವು ರಣಹೇಡಿ ಸರ್ಕಾರವಾಗಿದ್ದು, ಸ್ವಾಭಿಮಾನ ಇದ್ದರೆ ಎಂಇಎಸ್‌ ನಿಷೇಧಿಸಲಿ.
- ಡಾ.ಟಿ.ಎ.ನಾರಾಯಣಗೌಡ, ಅಧಕ್ಷ, ಕರವೇ

ಎಂಇಎಸ್‌ ಪುಂಡರಿಗೆ ರಾಜ್ಯದಲ್ಲಿ ಅವಕಾಶ ನೀಡಬಾರದು. ಬೆಳಗಾವಿಯಲ್ಲಿ ನಡೆದಿರುವ ದಾಳಿಯನ್ನು ಖಂಡಿಸಿ ಎಲ್ಲಾ ಸಂಘಟನೆಗಳು ಒಟ್ಟಾಗಿ ಗೋಕಾಕ್‌ ಚಳವಳಿ ಮಾದರಿಯಲ್ಲಿ ಹೋರಾಟ ಮಾಡಬೇಕು.
- ಕುರುಬೂರು ಶಾಂತಕುಮಾರ್‌, ರಾಜ್ಯಾಧ್ಯಕ್ಷ, ಕಬ್ಬು ಬೆಳಗಾರರ ಸಂಘ

ಬೆಳಗಾವಿಯಲ್ಲಿ ಎಂಇಎಸ್‌ ರೌಡಿತನ ಜಾಸ್ತಿಯಾಗಿದೆ. ಶಿವಸೇನೆ ಕನ್ನಡದ ಬಾವುಟ ಸುಟ್ಟಿದ್ದು ಕ್ಷಮಿಸಲಾರದ ಅಪರಾಧ. ಇದನ್ನು ನೋಡಿಕೊಂಡು ಸುಮ್ಮನೆ ಕುಳಿತಿರುವ ರಾಜ್ಯ ಸರ್ಕಾರವು ಬದುಕಿಲ್ಲ. ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳು ಮಾತ್ರ ಉಳಿದಿದ್ದು, ರಾಜ್ಯಾದ್ಯಂತ ಹೋರಾಟ ನಡೆಯಲಿದೆ. ಸೋಮವಾರ ಕರಾಳ ದಿನಾಚರಣೆ ಮಾಡಲಾಗುತ್ತದೆ.
- ವಾಟಾಳ್‌ ನಾಗರಾಜ್‌, ಕನ್ನಡ ಹೋರಾಟಗಾರ

ಕನ್ನಡ ಸಂಘಗಳ ಬೇಡಿಕೆ
- ರಾಜ್ಯದಲ್ಲಿ ಎಂಇಎಸ್‌ ನಿಷೇಧಿಸಬೇಕು
- ಗಲಭೆ ಮಾಡಿರುವ ಪುಂಡರಿಗೆ ಕಠಿಣ ಶಿಕ್ಷೆ ವಿಧಿಸಬೇಕು
- ಬೆಳಗಾವಿಯಲ್ಲಿ ಕನ್ನಡಿಗರಿಗೆ ಮುಕ್ತ ವಾತಾವರಣ ನಿರ್ಮಿಸಬೇಕು
- ಕನ್ನಡಪರ ಹೋರಾಟಗಾರರ ವಿರುದ್ಧದ ಕೇಸ್‌ಗಳನ್ನು ರದ್ದು ಮಾಡಬೇಕು

click me!