
ಬೆಂಗಳೂರು (ಜೂ.28): ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲು ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ. ನಾನು 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೆ. ನಾನೇನೂ ಆ ಹಣವನ್ನು ದರೋಡೆ ಮಾಡಿ ತಂದು ಕೊಟ್ಟಿದ್ನಾ? ಇದೇ ರಾಜ್ಯದ ಜನತೆಯ ಹಣವನ್ನೇ ಕೊಟ್ಟಿದ್ದೇನೆ. ನಾನು ಮೊದಲೇ ಹೇಳಿದ್ದೇನೆ. ಸರ್ಕಾರದ ಖಜಾನೆಗೆ ನಮ್ಮ ಜನ ಹಣ ತುಂಬಿಸಿ ಇಟ್ಟಿದ್ದಾರೆ. ಇವತ್ತು ಅದಾಗಲೇ ಬೀರ್ ಬಾಟಲ್ ಬೆಲೆಯನ್ನು ಅದೆಷ್ಟೋ ಏರಿಸಿದ್ದಾರೆ. ಇದಕ್ಕೆನಾದರೂ ಜನ ಪ್ರತಿಭಟನೆ ಮಾಡಿದ್ರಾ? ದುಡ್ಡು ಕೊಟ್ಟು ಕುಡ್ಕೊಂಡು ಬರ್ತಿದ್ದಾರೆ. ಆ ದುಡ್ಡನ್ನೇ ಇವರು ಕೊಡಬೇಕು. ಸರಿಯಾದ ರೀತಿ ಸರ್ಕಾರ ಮ್ಯಾನೇಜ್ ಮಾಡಲಿ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅನ್ನಭಾಗ್ಯದ ಅಕ್ಕಿ ಬದಲು ಹಣ ನೀಡುವ ಸಿದ್ಧರಾಮಯ್ಯ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯೊಂದಿಗೆ ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ಬದಲು ಹಣ ನೀಡುವ ಕುರಿತಾಗಿ ಚೆನ್ನಪಟ್ಟಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 'ಅಕ್ಕಿ ಕೊಡ್ತಾರೋ, ದುಡ್ಡು ಕೊಡ್ತಾರೋ ಅದು ಅವರ ಹಣೆಬರಹ. ಯಾವರೀತಿ ಮಾಡಬೇಕು ಅಂತ ಅವರೇ ತೀರ್ಮಾನ ಮಾಡಲಿ. ಚುನಾವಣೆಯಲ್ಲಿ ಮತ ಪಡೆಯಲು ತರಾತುರಿಯಲ್ಲಿ ಘೋಷಣೆ ಮಾಡಿದ್ದರು. ಇದು ಅವರು ಮಾಡಿಕೊಂಡಿರೋ ಯಡವಟ್ಟು. ಮುಂದಾಗುವ ಅನಾಹುತಗಳ ಬಗ್ಗೆ ಯೋಚನೆ ಮಾಡದೇ ಘೋಷಣೆ ಮಾಡಿದ್ದರು. 5ಕೆ.ಜಿ ಅಕ್ಕಿ ಬದಲು ಹಣ ಕೊಡೋದಾದರೆ ಯಾವರೀತಿ ಕೊಡ್ತೀರಿ? ಯಾವರೀತಿ ಹಣ ತಲುಪಿಸ್ತೀರಿ? ಅದು ಮಧ್ಯವರ್ತಿಗಳ ಕೈ ಸೇರಲ್ವಾ.? ಮುಂದೆ ಇದರ ಬಗ್ಗೆ ಮಾತನಾಡ್ತಿನಿ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ 20 ಸಾವಿರ ಲೋಡ್ ಅಕ್ಕಿ ಕೊಡಲು ಗಿರಣಿ ಮಾಲೀಕರು ರೆಡಿ ಇದ್ದಾರೆ. ಆದರೆ ಇವರಿಗೆ ಕಮಿಟ್ಮೆಂಟ್, ಪಾರದರ್ಶಕತೆ ಇಲ್ಲ. ನನ್ನ ಪ್ರಕಾರ ಯೋಜನೆಗೆ ಹಣ ಒದಗಿಸಲು ಎನೂ ಸಮಸ್ಯೆ ಇಲ್ಲ. ಹಣ ಎಲ್ಲಿಂದ ತರ್ತಾರೆ ಅಂತ ಬಿಜೆಪಿಯವರು ಏನು ಬೇಕಾದರೂ ಹೇಳಬಹುದು. ರಾಜ್ಯದೇ ಯೋಜನೆಗೂ ಯಾವುದಕ್ಕೂ ಹಣಕಾಸಿನ ಕೊರತೆ ಇಲ್ಲ. ಸರಿಯಾಗಿ ಮ್ಯಾನೇಜ್‌ಮೆಂಟ್ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬೆಲೆ ಏರಿಕೆ ಬಗ್ಗೆ ಸಿದ್ದು ಸರ್ಕಾರಕ್ಕೆ ಚಿಂತೆಯೇ ಇಲ್ಲ: ಕುಮಾರಸ್ವಾಮಿ ಕಿಡಿ
ಗ್ಯಾರಂಟಿ ಘೋಷಣೆ ಮಾಡಿ ಜನರಿಗೆ ಉಪಕಾರ ಮಾಡುವ ಬದಲು ಸಮಸ್ಯೆ ಮಾಡಿದ್ದಾರೆ. ವಿದ್ಯುತ್ ದರ ಏರಿಕೆ ಇಂದಾಗಿ ಇಂದು ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚುವ ಹಂತದಲ್ಲಿದೆ. ಈ ಕುಟುಂಬದ ಭವಿಷ್ಯವನ್ನು ನಾವು ಸರಿ ಮಾಡಬೇಕಿದೆ. ಈ ಸರ್ಕಾರ ಜನರ ಮುಂದೆ ಸುಳ್ಳು ಸುಳ್ಳು ಹೇಳಿ, ಜನರಿಗೆ ಆಸೆ ಹುಟ್ಟಿಸಿ, ಈ ಐದು ಗ್ಯಾರಂಟಿ ಕಾರ್ಯಕ್ರಮ ತಂದು ಅವರ ಜೀವನವನ್ನೇ ಹಾಳು ಮಾಡಿದ್ದಾರೆ. ನಿನ್ನೆ ಸಚಿವ ಬೋಸರಾಜು ಅವರು ಹೇಳಿದ ಮಾತನ್ನು ಕೇಳುತ್ತಿದ್ದೆ. ಕುಮಾರಸ್ವಾಮಿ 6 ತಿಂಗಳು ಟೈಮ್ ಕೊಡ್ಬೇಕು ಅಂತಾ ಹೇಳಿದ್ದಾರೆ. ನಿಗೆ 6 ತಿಂಗಳಲ್ಲ, ಐದು ವರ್ಷ ಬೇಕಾದ್ರೂ ತೆಗೆದುಕೊಳ್ಳಿ. ಆಮೇಲಾದರೂ ಜನರ ಮುಂದೆ ನೀವೆಲ್ಲರೂ ಬರಲೇಬೇಕಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಕಿ ಘೋಷಣೆ ಮಾಡುವಾಗ ಜ್ಞಾನ ಇರಲಿಲ್ವೇ? ಕಾಂಗ್ರೆಸ್ ಉಚಿತ ಗ್ಯಾರೆಂಟಿ ವಿರುದ್ಧ ಹೆಚ್‌ಡಿಕೆ ಗರಂ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ