ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೇಲಿ ಆಘಾತಕಾರಿ ಕ್ಲಿನಿಕಲ್‌ ಟ್ರಯಲ್‌ ಹಗರಣದ ಬೃಹತ್‌ ಬಿರುಗಾಳಿ!

Kannadaprabha News   | Kannada Prabha
Published : Jul 02, 2025, 07:24 AM IST
HCG Cancer Hospital

ಸಾರಾಂಶ

ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್‌ ಆಸ್ಪತ್ರೆಯಾಗಿರುವ ಎಚ್‌ಸಿಜಿ (ಹೆಲ್ತ್‌ಕೇರ್‌ ಗ್ಲೋಬಲ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌) ವಿರುದ್ಧ ಅತ್ಯಂತ ಗಂಭೀರವಾದ ಆರೋಪ ಕೇಳಿಬಂದಿದೆ.

ಬೆಂಗಳೂರು (ಜು.02): ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್‌ ಆಸ್ಪತ್ರೆಯಾಗಿರುವ ಎಚ್‌ಸಿಜಿ (ಹೆಲ್ತ್‌ಕೇರ್‌ ಗ್ಲೋಬಲ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌) ವಿರುದ್ಧ ಅತ್ಯಂತ ಗಂಭೀರವಾದ ಆರೋಪ ಕೇಳಿಬಂದಿದೆ. ‘ಕ್ಲಿನಿಕಲ್‌ ಟ್ರಯಲ್‌’ ಚಟುವಟಿಕೆಗಳಲ್ಲಿ ಈ ಆಸ್ಪತ್ರೆ ಹಗರಣ ರೀತಿಯ ನೀತಿಬಾಹಿರ ಕೃತ್ಯಗಳಲ್ಲಿ ತೊಡಗಿದೆ ಎಂದು ಅದರ ನೈತಿಕ ಸಮಿತಿ ಮುಖ್ಯಸ್ಥ, ನಿವೃತ್ತ ನ್ಯಾ। ಪಿ. ಕೃಷ್ಣಭಟ್‌ ಅವರೇ ಸ್ಫೋಟಕ ಆರೋಪ ಮಾಡಿರುವುದರಿಂದ ಭಾರಿ ಬಿರುಗಾಳಿ ಎದ್ದಿದೆ.

ಈ ವಿಷಯವಾಗಿ ಕಠಿಣ ಶಬ್ದಗಳನ್ನು ಬಳಸಿ ಪತ್ರ ಮುಖೇನ ಹಾಗೂ ಖುದ್ದು ಹಲವು ಬಾರಿ ಆಸ್ಪತ್ರೆಯ ಆಡಳಿತ ಮಂಡಳಿ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡಲು ಯತ್ನಿಸಿದರೂ, ಆಸ್ಪತ್ರೆಯಲ್ಲಿ ಆ ವಿಚಾರವನ್ನೇ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಇದರಿಂದ ಬೇಸತ್ತು ನ್ಯಾ। ಪಿ. ಕೃಷ್ಣಭಟ್‌ ಅವರು ನೈತಿಕ ಸಮಿತಿ ಮುಖ್ಯಸ್ಥ ಹುದ್ದೆಗೇ ರಾಜೀನಾಮೆ ನೀಡಿದ್ದಾರೆ. ಗಂಭೀರ ಆರೋಪಗಳ ಬೆನ್ನಲ್ಲೇ ಆಸ್ಪತ್ರೆಯ ಸಿಇಒ, ನಿರ್ದೇಶಕರು ಪದತ್ಯಾಗ ಮಾಡಿದ್ದಾರೆ. ಸಾಲು ಸಾಲಾಗಿ ವೈದ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಪರಿಸ್ಥಿತಿಯ ಗಂಭೀರತೆ ಅರಿತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಅಧೀನದ ಭಾರತೀಯ ಔಷಧ ನಿರ್ದೇಶನಾಲಯಕ್ಕೆ ಪತ್ರ ಬರೆದಿದೆ. ಎಚ್‌ಸಿಜಿ ಆಸ್ಪತ್ರೆಯಲ್ಲಿನ ನ್ಯಾಯೋಚಿತವಲ್ಲದ ಕ್ಲಿನಿಕಲ್‌ ಟ್ರಯಲ್‌ ಚಟುವಟಿಕೆಗಳ ಕುರಿತು ಕೂಡಲೇ ತನಿಖೆ ನಡೆಸುವಂತೆ ಮನವಿ ಮಾಡಿದೆ. ಈ ಬೆಳವಣಿಗೆಗಳಿಗೆ ವಿಚಿತ್ರ ತಿರುವೊಂದು ಸಿಕ್ಕಿದೆ. ಎಚ್‌ಸಿಜಿ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಡಾ। ಬಸವಲಿಂಗ ಎಸ್‌. ಅಜಯ್‌ಕುಮಾರ್‌ ಅಮೆರಿಕದಲ್ಲಿದ್ದಾಗ ವೃತ್ತಿಪರ ಅಸಮರ್ಥತೆಯ ಆರೋಪ ಎದುರಿಸಿದ್ದರು. ಬಳಿಕ ತಮ್ಮ ವೈದ್ಯಕೀಯ ಪರವಾನಗಿಯನ್ನೇ ಮರಳಿಸಿ ಸೆಟಲ್‌ಮೆಂಟ್‌ ಮಾಡಿಕೊಂಡಿದ್ದರು ಎಂದು ವರದಿಗಳು ತಿಳಿಸಿವೆ.

ಬಯಲಿಗೆಳೆದಿದ್ದು ನ್ಯಾ। ಕೃಷ್ಣಭಟ್‌: ಎಚ್‌ಸಿಜಿ ಆಸ್ಪತ್ರೆಯಲ್ಲಿನ ಕರ್ಮಕಾಂಡ ಶುರುವಾಗಿದ್ದು, ಆಸ್ಪತ್ರೆಯ ನೈತಿಕ ಸಮಿತಿ ಮುಖ್ಯಸ್ಥರಾಗಿದ್ದ ನ್ಯಾ। ಪಿ. ಕೃಷ್ಣಭಟ್‌ ಅವರು ಬರೆದ ಹರಿತ ಶಬ್ದಗಳ ಪತ್ರದೊಂದಿಗೆ. ಕ್ಲಿನಿಕಲ್‌ ಟ್ರಯಲ್‌ ನಿರ್ವಹಣೆ ಹಾಗೂ ಅದರಲ್ಲಿ ಕ್ಲಿನಿಕಲ್‌ ಟ್ರಯಲ್ಸ್‌ ನಿರ್ದೇಶಕ ಡಾ। ಸತೀಶ್‌ ಪಾತ್ರದ ಬಗ್ಗೆ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿ ಎಚ್‌ಸಿಜಿ ಆಡಳಿತ ಮಂಡಳಿಗೆ ನ್ಯಾ। ಭಟ್‌ ಪತ್ರ ಬರೆದು ಎಚ್ಚರಿಕೆ ನೀಡಿದ್ದರು. ನ್ಯಾ। ಭಟ್‌ ಅವರ ಪ್ರಕಾರ, ಡಾ। ಸತೀಶ್‌ ಅವರು ಆಸ್ಪತ್ರೆಯಲ್ಲಿ ಎರಡು ಹುದ್ದೆಗಳನ್ನು ನಿರ್ವಹಿಸುತ್ತಿದ್ದರು. ಕ್ಲಿನಿಕಲ್‌ ಟ್ರಯಲ್‌ಗಳ ಹಣಕಾಸು ಸಾಧನೆಯ ಮೇಲುಸ್ತುವಾರಿ ಜತೆಗೆ ಕ್ಲಿನಿಕಲ್‌ ಟ್ರಯಲ್‌ನ ಪ್ರಧಾನ ತನಿಖಾಧಿಕಾರಿಯಾಗಿ 15ರಿಂದ 20 ಪ್ರಕರಣ ನಿರ್ವಹಿಸಿದ್ದರು.

ಇದು ಹಿತಾಸಕ್ತಿಯ ಸಂಘರ್ಷ ಎಂದು ನ್ಯಾ। ಭಟ್‌ ಅವರು ವಾದಿಸಿದ್ದರು. ಹಣಕಾಸು ಪ್ರೋತ್ಸಾಹವು ಕ್ಲಿನಿಕಲ್‌ ನಿರ್ಧಾರದ ಮೇಲೆ ಪ್ರಭಾವ ಬೀರಬಹುದು ಹಾಗೂ ಕ್ಲಿನಿಕಲ್‌ ಟ್ರಯಲ್‌ನ ಲಾಭ ಹೆಚ್ಚಿಸುವ ಸಲುವಾಗಿ ರೋಗಿಗಳ ಸೇರ್ಪಡೆ ವೇಳೆ ವಿನಾಯಿತಿ ನೀಡುವುದರಿಂದ ರೋಗಿಗಳ ಸುರಕ್ಷತೆಯಲ್ಲೇ ರಾಜಿಯಾಗಬಹುದು ಎಂಬುದು ನ್ಯಾ। ಭಟ್‌ ಅವರ ಆತಂಕವಾಗಿತ್ತು. ಕ್ಲಿನಿಕಲ್‌ ಟ್ರಯಲ್‌ ವೇಳೆ ಸಂಭವಿಸುವ ರೋಗಿಗಳ ಸಾವನ್ನು ವರದಿ ಮಾಡುವ ವಿಚಾರದಲ್ಲಿ ಮಾರ್ಗಸೂಚಿಗಳಿಗೆ ಆಸ್ಪತ್ರೆ ಬದ್ಧವಾಗಿಲ್ಲ. ಇದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಸೂಚನೆಗೆ ವಿರುದ್ಧ ಎಂದು ನ್ಯಾ। ಭಟ್‌ ಎತ್ತಿ ತೋರಿಸಿದ್ದರು. ಇಂತಹ ನಿಯಮ ಉಲ್ಲಂಘನೆಗಳು ಆಸ್ಪತ್ರೆಯ ಪ್ರತಿಷ್ಠೆಗೆ ಕುಂದು ತರುತ್ತವೆ, ಔಷಧ ಕಂಪನಿಗಳು ಸಹಯೋಗದಿಂದ ಹಿಂದೆ ಸರಿಯಬಹುದು ಎಂದು ಎಚ್ಚರಿಸಿದ್ದರು.

ನ್ಯಾ। ಭಟ್‌ ಸಲಹೆಗೆ ಆಂತರಿಕ ವಿರೋಧ: ಈ ಸಂಬಂಧ ಆಸ್ಪತ್ರೆಯ ಸಿಇಒ ರಾಜ್‌ ಗೋರೆ ಅವರನ್ನು 8 ತಿಂಗಳ ಹಿಂದೆ ಖುದ್ದು ಭೇಟಿಯಾಗಿ ನ್ಯಾ। ಭಟ್‌ ವಿವರಿಸಿದ್ದರು. ಪದೇ ಪದೇ ಮನವಿ ಮಾಡಿದ್ದರು. ಆದರೆ ಆಸ್ಪತ್ರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ನ್ಯಾ। ಭಟ್‌ ಹೇಳಿದ್ದರು. ಕ್ಲಿನಿಕಲ್‌ ಟ್ರಯಲ್ಸ್‌ನ ನಿರ್ದೇಶಕರಿಗೆ ನಿರ್ದಿಷ್ಟ ಅವಧಿ ನಿಗದಿಗೊಳಿಸುವ ಹಾಗೂ ಪಾರದರ್ಶಕ ನೇಮಕ ಪ್ರಕ್ರಿಯೆ ಆರಂಭಿಸುವ ನ್ಯಾ। ಭಟ್ ಅವರ ಪ್ರಸ್ತಾಪಗಳಿಗೆ ಆಂತರಿಕವಾಗಿ ವಿರೋಧ ವ್ಯಕ್ತವಾಗಿತ್ತು. ಕ್ಲಿನಿಕಲ್‌ ಟ್ರಯಲ್ಸ್‌ನಲ್ಲಿ ಡಾ। ಸತೀಶ್‌ ಅವರ ಪಾತ್ರವನ್ನು ಈ ಮೊದಲು ಒಪ್ಪಿದ್ದ ನೈತಿಕ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ। ರಮೇಶ್‌ ಅವರು, ಬಳಿಕ ದಿಢೀರನೆ ವರಸೆ ಬದಲಿಸಿದ್ದರು. ಆಸ್ಪತ್ರೆಯಲ್ಲಿ ಕ್ಲಿನಿಕಲ್‌ ಟ್ರಯಲ್ಸ್‌ ನಿರ್ದೇಶಕರೇ ಇಲ್ಲ ಎಂದು ಅವರು ವಾದಿಸಿದ್ದರಿಂದ ಇಡೀ ಪ್ರಕರಣ ವಿಚಿತ್ರ ಸ್ವರೂಪ ಪಡೆದುಕೊಂಡಿತು. ಇದು ವಿಷಯವನ್ನು ಮುಚ್ಚಿ ಹಾಕುವ ಆಸ್ಪತ್ರೆಯ ಯತ್ನ ಎಂದು ಬಿಂಬಿತವಾಯಿತು.

ಆಸ್ಪತ್ರೆ ಆಡಳಿತ ಮಂಡಳಿಯಲ್ಲಿ ಕಂಪನ: ನ್ಯಾ। ಭಟ್‌ ಅವರ ಸ್ಫೋಟಕ ವರದಿ ಬೆನ್ನಲ್ಲೇ ಆಸ್ಪತ್ರೆಯ ಉನ್ನತ ಆಡಳಿತ ಮಂಡಳಿಯಲ್ಲಿ ಕಂಪನವಾಯಿತು. ಸಿಇಒ ರಾಜ್‌ ಗೋರೆ ಹಾಗೂ ವೈದ್ಯಕೀಯ ವ್ಯವಹಾರಗಳ ನಿರ್ದೇಶಕ ಡಾ। ಹರೀಶ್‌ ರೆಡ್ಡಿ ಇಬ್ಬರೂ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ವಿವಾದಗಳ ಹಿನ್ನೆಲೆಯಲ್ಲಿ ಬದಲಾವಣೆ ತರಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ ನೈತಿಕ ಸಮಿತಿ ಮುಖ್ಯಸ್ಥ ಸ್ಥಾನವನ್ನು ನ್ಯಾ। ಭಟ್‌ ಕೂಡ ತ್ಯಜಿಸಿದ್ದಾರೆ. ಇದಾದ ಬಳಿಕ ಕನಿಷ್ಠ ಆರು ವೈದ್ಯರನ್ನು ಆಸ್ಪತ್ರೆಯನ್ನು ಬಿಟ್ಟು ಹೋಗಿದ್ದಾರೆ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಎಚ್‌ಸಿಜಿಯಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೂಡಲೇ ತನಿಖೆ ನಡೆಸುವಂತೆ ಮನವಿ ಮಾಡಿದೆ.

ಹಿತಾಸಕ್ತಿಯ ಸಂಘರ್ಷ ಹಾಗೂ ರೋಗಿಗಳ ನೋಂದಣಿ ಸೇರಿದಂತೆ ಕ್ಲಿನಿಕಲ್‌ ಟ್ರಯಲ್‌ ನಡೆಸುವ ವಿಷಯವಾಗಿ ಎಚ್‌ಸಿಜಿ ಆಸ್ಪತ್ರೆಯಲ್ಲಿ ರೋಗಿಗಳ ಸುರಕ್ಷತೆ, ನಿಯಂತ್ರಣ ಕ್ರಮಗಳ ಪಾಲನೆ ಹಾಗೂ ಸಾಂಸ್ಥಿಕ ಸಮಗ್ರತೆ ಕುರಿತು ಹಲವಾರು ಕಳವಳಗಳು ಎದ್ದಿವೆ. ಆಸ್ಪತ್ರೆಯ ಎಥಿಕ್ಸ್‌ ಕಮಿಟಿಯ ಮುಖ್ಯಸ್ಥರೇ ಈ ಕಳವಳಗಳನ್ನು ಎತ್ತಿದ್ದು, ಬಳಿಕ ರಾಜೀನಾಮೆ ನೀಡಿದ್ದಾರೆ. ಒಂದು ವೇಳೆ ಈ ಲೋಪಗಳು ಸಾಬೀತಾದರೆ ಕ್ಲಿನಿಕಲ್‌ ಟ್ರಯಲ್‌ನಲ್ಲಿ ರೋಗಿಗಳ ಸುರಕ್ಷತೆ ಹಾಗೂ ನೈತಿಕ ನಡೆ ಸಂಬಂಧ ಡಬ್ಲ್ಯುಎಚ್‌ಒ, ಐಸಿಎಂಆರ್‌ನಂತಹ ಸಂಸ್ಥೆಗಳು ರೂಪಿಸಿರುವ ಶ್ರೇಷ್ಠ ಗುಣಮಟ್ಟವನ್ನೇ ಕಡೆಗಣಿಸಿದಂತಾಗುತ್ತದೆ. ಈ ವಿಚಾರ ಗಂಭೀರತೆಯಿಂದ ಕೂಡಿರುವ ಕಾರಣ, ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಕೋರಲಾಗಿದೆ.

ಸಂಸ್ಥೆಯ ಅಧ್ಯಕ್ಷರ ಅಮೆರಿಕ ಹಗರಣವೂ ಇದೀಗ ಬಯಲಿಗೆ: ಆಸ್ಪತ್ರೆಯಲ್ಲಿ ಇಷ್ಟೆಲ್ಲಾ ರಾದ್ಧಾಂತವಾಗಿರುವಾಗಲೇ, ಕಾರ್ಯನಿರ್ವಾಹಕ ಅಧ್ಯಕ್ಷ ಡಾ। ಬಸವಲಿಂಗ ಎಸ್‌. ಅಜಯ್‌ಕುಮಾರ್‌ ಅವರ ವೃತ್ತಿಗೆ ಸಂಬಂಧಿಸಿದ ಹಿಂದಿನ ಪ್ರಕರಣವೊಂದು ಧುತ್ತನೆ ಎದ್ದು ಕುಳಿತಿದೆ. ಅನುಚಿತ ಚಿಕಿತ್ಸಾ ವಿಧಾನ, ಆಕ್ರಮಣಕಾರಿ ಚಿಕಿತ್ಸೆ, ಮಿತಿ ಮೀರಿದ ಪ್ರಮಾಣದಲ್ಲಿ ಅಪಾಯಕಾರಿ ರೀತಿ ಔಷಧ ಬಳಕೆ ಸೇರಿದಂತೆ ವಿವಿಧ ಕಾರಣಗಳ ಸಂಬಂಧ ಅಜಯ್‌ ಕುಮಾರ್‌ ಅವರು ತಮ್ಮ ವೈದ್ಯಕೀಯ ಪರವಾನಗಿಯನ್ನೇ ಅಮೆರಿಕದ ಅಯೋವಾದಲ್ಲಿ ಮರಳಿಸಿದ್ದರು. ಅಯೋವಾದ ಬಲಿಂಗ್ಟನ್‌ನಲ್ಲಿ ಕ್ಯಾನ್ಸರ್‌ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಸೆಟಲ್‌ಮೆಂಟ್‌ ಒಪ್ಪಂದವನ್ನು ಮಾಡಿಕೊಂಡಿದ್ದರು ಎಂದು ಅಯೋವಾ ವೈದ್ಯರ ಮಂಡಳಿಯ ದಾಖಲೆಗಳು ತಿಳಿಸುತ್ತವೆ. ವೃತ್ತಿ ಅಸಮರ್ಥತೆ, ಸಾರ್ವಜನಿಕ ಆರೋಗ್ಯಕ್ಕೆ ಪ್ರತಿಕೂಲ ಪರಿಣಾಮ ಬೀರುವ ಕ್ರಮ ಕುರಿತು ಅವರ ವಿರುದ್ಧ ಆರೋಪ ಹೊರಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಎಚ್‌ಸಿಜಿಗೆ ಈಗ ಸೆಬಿ ಕುತ್ತು?: ರಾಷ್ಟ್ರೀಯ ಷೇರುಪೇಟೆ (ಎನ್‌ಸಿಇ)ಯಲ್ಲಿ ನೋಂದಣಿಯಾಗಿದ್ದರೂ, ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಯಾವುದೇ ಘಟನೆಗಳ ಕುರಿತ ಮಾಹಿತಿಯನ್ನು ಎಚ್‌ಸಿಜಿ ಕಂಪನಿ ಷೇರುಪೇಟೆಗೆ ನೀಡಿಲ್ಲ. ಇದರಿಂದಾಗಿ ಸೆಬಿ ಅಥವಾ ಷೇರುಪೇಟೆಯ ಬಿಸಿಯನ್ನು ಈ ಸಂಸ್ಥೆ ಎದುರಿಸಬೇಕಾಗಿ ಬರಬಹುದು ಎನ್ನಲಾಗಿದೆ. ಸೆಬಿ ನಿಯಮಗಳ ಪ್ರಕಾರ, ಲಿಸ್ಟ್‌ ಆಗಿರುವ ಕಂಪನಿ ಹೂಡಿಕೆದಾರರ ನಿರ್ಧಾರದ ಮೇಲೆ ಪರಿಣಾಮ ಬೀರುವ ಯಾವುದೇ ಘಟನೆ ಅಥವಾ ಮಾಹಿತಿಯನ್ನು ಷೇರುಪೇಟೆ ಜತೆ ಹಂಚಿಕೊಳ್ಳಬೇಕು. ಆದರೆ ಸಿಇಒ, ವೈದ್ಯಕೀಯ ನಿರ್ದೇಶಕರು, ನೈತಿಕ ಸಮಿತಿ ಮುಖ್ಯಸ್ಥರ ರಾಜೀನಾಮೆ, ಹಗರಣ ರೀತಿಯ ಕ್ಲಿನಿಕಲ್‌ ಟ್ರಯಲ್‌ ಚಟುವಟಿಕೆ ಕುರಿತು ನೈತಿಕ ಸಮಿತಿ ಆರೋಪ ಸೇರಿ ಯಾವ ಮಾಹಿತಿಯನ್ನೂ ಎಚ್‌ಸಿಜಿ ಸಂಸ್ಥೆ ಷೇರುಪೇಟೆಗೆ ತಿಳಿಸಿಲ್ಲ. ಇದರಿಂದಾಗಿ ಕಾರ್ಪೋರೆಟ್‌ ಆಡಳಿತ ನಿಯಮಗಳಿಗೆ ಎಚ್‌ಸಿಜಿ ಯಾವ ರೀತಿ ಬದ್ಧವಾಗಿದೆ ಎಂಬ ಪ್ರಶ್ನೆ ಎದುರಾಗಿದೆ. ಈ ವಿಚಾರವಾಗಿ ಸೆಬಿ ಪರಿಶೀಲನೆ ನಡೆಸಿದರೆ ಕಾನೂನು, ಇನ್ನಿತರೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಬಡ ಕ್ಯಾನ್ಸರ್‌ ರೋಗಿಗಳಿಗೆ ಅನೈತಿಕ ಕ್ಲಿನಿಕಲ್‌ ಟ್ರಯಲ್‌ ಗಾಳ: ಕ್ಯಾನ್ಸರ್‌ ಚಿಕಿತ್ಸೆಗೆ ಹಣ ಹೊಂದಿಸಲು ಆಗದ ಬಡ ರೋಗಿಗಳನ್ನು ಕ್ಲಿನಿಕಲ್‌ ಟ್ರಯಲ್‌ಗೆ ಎಚ್‌ಸಿಜಿ ಆಸ್ಪತ್ರೆ ಸೆಳೆಯುತ್ತಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ಪಡೆಯುವಷ್ಟು ಆರ್ಥಿಕವಾಗಿ ಸಬಲರಲ್ಲದ ರೋಗಿಗಳು ನಿಮಗೆ ಕಂಡುಬಂದರೆ ಕ್ಲಿನಿಕಲ್‌ ಟ್ರಯಲ್‌ಗೆ ಶಿಫಾರಸು ಮಾಡಿ ಎಂದು ಎಚ್‌ಸಿಜಿ ಆಸ್ಪತ್ರೆಯ ಕ್ಲಿನಿಕಲ್‌ ಟ್ರಯಲ್ಸ್‌ ನಿರ್ದೇಶಕ ಡಾ। ಸತೀಶ್‌ ಅವರು 2025ರಲ್ಲಿ ‘ಬೆಂಗಳೂರು ಆಂಕಾಲಜಿ ಗ್ರೂಪ್‌’ ಎಂಬ ವಾಟ್ಸಾಪ್‌ ಗ್ರೂಪ್‌ನಲ್ಲಿ ಸಂದೇಶ ಕಳುಹಿಸಿದ್ದರು. ಇದಕ್ಕೆ ಅದೇ ಗ್ರೂಪ್‌ನಲ್ಲಿದ್ದ ಕ್ಯಾನ್ಸರ್ ವೈದ್ಯರು ತೀಕ್ಷ್ಣ ತಿರುಗೇಟು ಕೊಟ್ಟಿದ್ದರು. ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಆಧರಿಸಿ ಕ್ಲಿನಿಕಲ್‌ ಟ್ರಯಲ್‌ಗೆ ರೋಗಿಗಳನ್ನು ಆಯ್ಕೆ ಮಾಡುವುದು ನೈತಿಕತೆ ವಿರೋಧ ಎಂದು ಪದ್ಮಶ್ರೀ ಪುರಸ್ಕೃ ಡಾ। ಕೆ.ಎಸ್‌. ಗೋಪಿನಾಥ್‌ ಅವರೇ ಕಿಡಿಕಾರಿದ್ದರು. ವೈದ್ಯರ ತಪರಾಕಿ ಬಳಿಕ ಡಾ। ಸತೀಶ್‌ ಅವರು ಕ್ಷಮೆ ಕೇಳಿದ್ದರು.

ನಾವು ನೋಡಿರುವ ಹಾಗೂ ಸ್ವೀಕರಿಸಿರುವ ವರದಿಗಳ ಆಧಾರದ ಮೇಲೆ ಇದೊಂದು ಗಂಭೀರ ವಿಚಾರ ಎಂಬುದು ತಿಳಿಯಿತು. ಈ ವಿಷಯವನ್ನು ಎಚ್‌ಸಿಜಿ ಆಸ್ಪತ್ರೆಯ ಎಥಿಕ್ಸ್‌ ಕಮಿಟಿಯ ಮುಖ್ಯಸ್ಥರಾದ ನ್ಯಾ। ಕೃಷ್ಣಭಟ್‌ ಅವರೇ ಬಹಿರಂಗಪಡಿಸಿದ್ದಾರೆ. ಈಗಾಗಲೇ ನಮ್ಮ ಆಯುಕ್ತರು ಭಾರತೀಯ ಔಷಧ ಮಹಾ ನಿಯಂತ್ರಕರಿಗೆ ಪತ್ರ ಬರೆದಿದ್ದು, ಈ ವಿಚಾರವಾಗಿ ಗಮನಹರಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಏಕೆಂದರೆ ಈ ವಿಚಾರ ಕ್ಲಿನಿಕಲ್‌ ಟ್ರಯಲ್‌ ಮೇಲೆ ಗಂಭೀರ ಪರಿಣಾಮಗಳನ್ನು ಹೊಂದಿದೆ. ಸತ್ಯ ಏನೆಂಬುದನ್ನು ಸಂಬಂಧಿಸಿದ ಸಂಸ್ಥೆಯೇ ತನಿಖೆ ನಡೆಸಬೇಕಾಗುತ್ತದೆ. ಆಸ್ಪತ್ರೆಯ ಮುಖ್ಯಸ್ಥ ಅಜಯ್‌ಕುಮಾರ್‌ ಅವರ ಅಮೆರಿಕ ಘಟನೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಮಾಹಿತಿ ಬಂದರೆ ಪರಿಶೀಲಿಸುತ್ತೇವೆ. ಎಚ್‌ಸಿಜಿ ಆಸ್ಪತ್ರೆ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆಯಾಗಿದ್ದು, ಸಾಕಷ್ಟು ರೋಗಿಗಳು ಹೋಗುತ್ತಾರೆ. ಅಲ್ಲಿ ಅಕ್ರಮವಾಗಿದ್ದರೆ ನಾವು ನಿಶ್ಚಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇವೆ.
- ದಿನೇಶ್‌ ಗುಂಡೂರಾವ್, ಆರೋಗ್ಯ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌