ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೆಂಗಳೂರಿನ ತೇಜ ತಮ್ಮಯ್ಯ, ಹೈದರಾಬಾದ್‌ನ ಚಂದ್ರಮೋಹನ್, ಶ್ರೀನಿವಾಸ್ ಹಾಗೂ ಜಗದೀಶ್ ವಿಚಾರಣೆ ವೇಳೆ ಹವಾಲಾ ಸಂಗತಿ ಬಹಿರಂಗವಾಗಿದೆ. ಈಗ ನಾಪತ್ತೆಯಾಗಿರುವ ಮತ್ತೊಬ್ಬ ಹವಾಲಾ ದಂಧೆಕೋರ ಎನ್ನಲಾದ ಕಾರ್ತಿ ಶ್ರೀನಿವಾಸ್ ಪತ್ತೆಗೆ ಎಸ್‌ಐಟಿ ಕಾರ್ಯಾಚರಣೆ ನಡೆಸಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಜೂ.30): ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ವರ್ಗಾವಣೆಯಾಗಿದ್ದ ಬಹುಕೋಟಿ ಹಣವನ್ನು ಹವಾಲಾ ಮಾರ್ಗದಲ್ಲಿ ‘ಹೈದರಾಬಾದ್ ಗ್ಯಾಂಗ್’ ಜೇಬಿಗಿಳಿಸಿಕೊಂಡಿದೆ ಎಂಬ ಸಂಗತಿಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ)ವು ಪತ್ತೆ ಹಚ್ಚಿದೆ.
ಈ ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೆಂಗಳೂರಿನ ತೇಜ ತಮ್ಮಯ್ಯ, ಹೈದರಾಬಾದ್‌ನ ಚಂದ್ರಮೋಹನ್, ಶ್ರೀನಿವಾಸ್ ಹಾಗೂ ಜಗದೀಶ್ ವಿಚಾರಣೆ ವೇಳೆ ಹವಾಲಾ ಸಂಗತಿ ಬಹಿರಂಗವಾಗಿದೆ. ಈಗ ನಾಪತ್ತೆಯಾಗಿರುವ ಮತ್ತೊಬ್ಬ ಹವಾಲಾ ದಂಧೆಕೋರ ಎನ್ನಲಾದ ಕಾರ್ತಿ ಶ್ರೀನಿವಾಸ್ ಪತ್ತೆಗೆ ಎಸ್‌ಐಟಿ ಕಾರ್ಯಾಚರಣೆ ನಡೆಸಿದೆ ಎಂದು ಮೂಲಗಳು ಹೇಳಿವೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ: ಆರ್.ಅಶೋಕ್
ಈ ಹವಾಲಾ ದಂಧೆ ಮಾಹಿತಿ ಆಧರಿಸಿಯೇ ವಾಲ್ಮೀಕಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ತನಿಖಾ ರಂಗ ಪ್ರವೇಶಿಸಿದೆ. ಈ ಅಕ್ರಮ ಹಣದ ವಿಚಾರವಾಗಿ ಇ.ಡಿ. ಅಧಿಕಾರಿಗಳಿಗೆ ಎಸ್‌ಐಟಿ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ಕೂಡ ನೀಡಿದ್ದು, ಅದರಂತೆ ಪ್ರತ್ಯೇಕವಾಗಿ ಇ.ಡಿ. ತನಿಖೆ ಆರಂಭಿಸಿದೆ.
ಈಗಾಗಲೇ ಸಿಐಡಿ ವಶದಲ್ಲಿರುವ ನಿಗಮದ ಮಾಜಿ ನಿರ್ದೇಶಕ ಪದ್ಮನಾಭ್, ಹೈದರಾಬಾದ್‌ನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ್ ಹಾಗೂ ಮಾಜಿ ಸಚಿವರ ಆಪ್ತರಾದ ನೆಕ್ಕುಂಟಿ ನಾಗರಾಜ್ ಮತ್ತು ನಾಗೇಶ್ವರ್ ರಾವ್ ಅವರನ್ನು ಇ.ಡಿ. ವಿಚಾರಣೆಗೊಳಪಡಿಸಿ ಪ್ರಾಥಮಿಕ ಹಂತದ ಮಾಹಿತಿ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.
ಬಾರ್‌ಗಳಿಂದ ಹವಾಲಾ ಹಣ:
ವಾಲ್ಮೀಕಿ ನಿಗಮದಿಂದ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್‌ನ 18 ಖಾತೆಗಳಿಗೆ 94 ಕೋಟಿ ರು. ಹಣ ವರ್ಗಾವಣೆಯಾಗಿತ್ತು. ಈ ಹಣದ ವಹಿವಾಟಿನಲ್ಲಿ ಈಗ ಬಂಧಿತನಾಗಿರುವ ಆ ಬ್ಯಾಂಕ್‌ನ ಅಧ್ಯಕ್ಷ ಸತ್ಯನಾರಾಯಣ ವರ್ಮಾ ಸಾಥ್ ಕೊಟ್ಟಿದ್ದ. ಬ್ಯಾಂಕ್‌ಗೆ ಹಣ ಬಂದ ಬಳಿಕ ಆ ಹಣವನ್ನು ಬಾರ್‌ಗಳು, ಹೋಟೆಲ್‌ಗಳು, ಚಿನ್ನಾಭರಣ ಮಳಿಗೆಗಳು ಹಾಗೂ ಕೆಲ ಐಟಿ ಕಂಪನಿಗಳ ನೂರಾರು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದ. ಹಣ ಸಾಗಣೆ ಜಾಲ ಶೋಧಿಸಿದಾಗ 193 ಬ್ಯಾಂಕ್ ಖಾತೆಗಳ ವಿವರ ಸಿಕ್ಕಿವೆ. ಅವುಗಳಲ್ಲಿದ್ದ 10 ಕೋಟಿ ರು. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಆದರೆ, ಈ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ಸತ್ಯನಾರಾಯಣ ವರ್ಮಾನ ಬಳಿ 8.21 ಕೋಟಿ ರು., ಮಾಜಿ ಸಚಿವರ ಆಪ್ತ ನಾಗೇಶ್ವರ್ ರಾವ್ ಬಳಿ 1.49 ಕೋಟಿ ರು., ನಿಗಮದ ಮಾಜಿ ನಿರ್ದೇಶಕ ಪದ್ಮನಾಭ ಬಳಿ 3.6 ಕೋಟಿ ರು. ಹಾಗೂ ಜಗದೀಶ್‌ನಿಂದ 30 ಲಕ್ಷ ರು. ಹಣ ಪತ್ತೆಯಾಗಿವೆ. ಈ ಹಣದ ಬಗ್ಗೆ ತನಿಖೆ ನಡೆಸಿದಾಗ ಹವಾಲಾ ಮೂಲಕ ನಿಗಮದ ಹಣವು ಆರೋಪಿಗಳ ಜೇಬು ಸೇರಿರುವುದು ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಕಮಿಷನ್ ಆಧಾರದಲ್ಲಿ ಬಾರ್ ಹಾಗೂ ಚಿನ್ನಾಭರಣ ಸೇರಿದಂತೆ ಕೆಲ ವ್ಯಾಪಾರಿಗಳ ಖಾತೆಗಳಿಗೆ ಹೈದರಾಬಾದ್ ಗ್ಯಾಂಗ್ ಹಣ ವರ್ಗಾಯಿಸಿತು. ಬಳಿಕ ಆ ಹಣವನ್ನು ಕಮಿಷನ್ ಕೊಟ್ಟು ಹೈದರಾಬಾದ್, ಬೆಂಗಳೂರು ಹಾಗೂ ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೂಡ ಹವಾಲಾ ಮೂಲಕ ಆರೋಪಿಗಳು ನಗದು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಗಮನಕ್ಕೆ ಬಾರದೇ ವಾಲ್ಮೀಕಿ ಹಗರಣ ಆಗಿದೆಯಾ.?: ಪ್ರಲ್ಹಾದ್ ಜೋಶಿ ವಾಗ್ದಾಳಿ
ಆನ್‌ಲೈನ್ ಮೂಲಕ ವರ್ಗಾವಣೆಯಾಗಿದ್ದ ಹಣವನ್ನು ನಗದು ಮಾಡಿಕೊಳ್ಳಲು ಹೈದರಾಬಾದ್ ಗ್ಯಾಂಗ್‌ಗೆ ಸಹಕರಿಸಿದ ನೂರಕ್ಕೂ ಹೆಚ್ಚಿನ ಜನರನ್ನು ಎಸ್‌ಐಟಿ ವಿಚಾರಣೆ ನಡೆಸಿದೆ. ಆಗ ಕೆಲವರು ಹವಾಲಾ ದಂಧೆ ಕುರಿತು ಮಾಹಿತಿ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಮಾದರಿಯಲ್ಲೇ ಬೇರೆ ರಾಜ್ಯಗಳಲ್ಲಿ ಸರ್ಕಾರಿ ನಿಗಮ-ಮಂಡಳಿಗಳಲ್ಲಿ ಈ ಆರೋಪಿಗಳು ಹಣ ದೋಚಿದ್ದರು. ಹೀಗಾಗಿ ಮೊದಲಿನಿಂದಲೂ ಹಣ ವರ್ಗಾವಣೆಗೆ ಹವಾಲಾ ದಂಧೆಕೋರರು ಕೈ ಜೋಡಿಸಿದ್ದಾರೆ. ಹೀಗಾಗಿ ಸರ್ಕಾರಿ ಹಣ ದೋಚಲು ಎರಡು ತಂಡಗಳು ಸಂಘಟಿತವಾಗಿ ಕಾರ್ಯಾಚರಣೆ ನಡೆಸಿರುವ ಮಾಹಿತಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೇಗೆ ವರ್ಗವಾಗಿತ್ತು ಹಣ?
- ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ವರ್ಗಾವಣೆಯಾಗಿದ್ದ 94 ಕೋಟಿ ರು.
- ಮೊದಲು ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಬ್ಯಾಂಕ್‌ನ 18 ಖಾತೆಗೆ ವರ್ಗ
- ಬಳಿಕ ಆ ಹಣ ಬಾರ್, ಹೋಟೆಲ್, ಚಿನ್ನಾಭರಣ ಮಳಿಗೆ ಖಾತೆಗಳಿಗೆ ಶಿಫ್ಟ್
- ಆ ಖಾತೆಗಳಲ್ಲಿದ್ದ 10 ಕೋಟಿ ರು. ಈಗಾಗಲೇ ಎಸ್‌ಐಟಿಯಿಂದ ವಶಕ್ಕೆ
- ನಿಗಮದ ಮಾಜಿ ಎಂಡಿ, ಮಾಜಿ ಸಚಿವರ ಆಪ್ತನಿಗೂ ವರ್ಗವಾಗಿತ್ತು ಹಣ
- ಕೋಟಿಗಟ್ಟಲೆ ಹಣ ಅವರೆಲ್ಲರ ಖಾತೆಗೆ ಬಂದಿದ್ದು ಹವಾಲಾ ಜಾಲದ ಮೂಲಕ
- ಕಮಿಷನ್ ಕೊಟ್ಟು ಹೈದರಾಬಾದ್, ಬೆಂಗಳೂರು, ಮಂಗಳೂರಿಗೆ ಹಣ ವರ್ಗ
- ಹವಾಲಾ ಜಾಲದ ಮೂಲಕ ನಗದು ಮಾಡಿಕೊಂಡಿದ್ದ ಪ್ರಕರಣದ ಆರೋಪಿಗಳು
- ನಗದು ಮಾಡಿಕೊಳ್ಳಲು ಸಹಕರಿಸಿದ ನೂರಕ್ಕೂ ಹೆಚ್ಚು ಜನರ ವಿಚಾರಣೆ ವೇಳೆ ಪತ್ತೆ