
ಹಾಸನ (ನ.21): ಗ್ರಾಮ ಪಂಚಾಯಿತಿ ಕಾಮಗಾರಿಯ ದಾಖಲೆಗಳನ್ನು ಪಡೆಯಲು ಹಾಲು ಕೊಡುವ ಹಸುವನ್ನೇ ಮಾರಾಟ ಮಾಡಿದ ಘಟನೆಯೊಂದು ಹಾಸನ ಜಿಲ್ಲೆಯಲ್ಲಿ ನಡೆದಿದೆ. ಮಾಹಿತಿ ಹಕ್ಕು ಕಾಯ್ದೆಯಡಿ (RTI) ದಾಖಲೆಗಳನ್ನು ಪಡೆಯಲು ಹಣದ ಅವಶ್ಯಕತೆ ಎದುರಾದಾಗ, ರೈತರೊಬ್ಬರು ತಾವು ಸಾಕಿ ಬೆಳೆಸಿದ್ದ ಹಸುವನ್ನೇ ಮಾರಾಟ ಮಾಡಿದ್ದಾರೆ.
ಈ ಘಟನೆ ನಡೆದಿರುವುದು ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ಬಸವನಹಳ್ಳಿ ಕೊಪ್ಪಲು ಗ್ರಾಮದ ಬಿಎಸ್ ರವಿ ಎಂಬ ರೈತರಿಗೆ ಸಂಬಂಧಿಸಿದೆ. ರವಿಯವರು ತಮ್ಮ ಕಾಳೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದ 15ನೇ ಹಣಕಾಸು ಯೋಜನೆಯ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕಿಸಿದ್ದರು. ಈ ಅವ್ಯವಹಾರದ ದಾಖಲೆಗಳನ್ನು ಪಡೆಯಲು ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಮಾಹಿತಿಯನ್ನು ನೀಡುತ್ತೇನೆ. ಆದರೆ ದಾಖಲೆಗಳು ಒಟ್ಟು 16,000 ಪುಟಗಳಷ್ಟು ಇವೆ ಎಂದು ಹೆದರಿಸಿದ್ದ ಪಿಡಿಓ. ಆದರೆ ಇದಕ್ಕೆ ಹೆದರದ ರೈತ. ಆದದ್ದು ಆಗಲಿ ನಾನು ಅಷ್ಟು ಕೊಡಲು ಸಿದ್ಧ ಎಂದಿದ್ದ ರೈತರ. ಕಾಯ್ದೆಯ ನಿಯಮದ ಪ್ರಕಾರ, ಪ್ರತಿ ಪುಟಕ್ಕೆ ₹2 ರಂತೆ ಒಟ್ಟು ₹32,000 ಹಣವನ್ನು ರೈತ ಭರಿಸಬೇಕಾಯಿತು.
ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಕಷ್ಟವಾದಾಗ, ರೈತ ರವಿ ಅವರು ಬೇರೆ ದಾರಿ ಕಾಣದೆ, ಹಾಲು ಕೊಡುತ್ತಿದ್ದ ತಮ್ಮ ಒಂದು ಹಸುವನ್ನು ₹32,000 ರೂಪಾಯಿಗೆ ಮಾರಾಟ ಮಾಡಿ ಬಂದ ಹಣವನ್ನು ಹೊಂದಿಸಿದ್ದಾರೆ. ಈ ಹಣವನ್ನು ಕಟ್ಟಿ ಅವರು ಗ್ರಾಮ ಪಂಚಾಯಿತಿಯಿಂದ 16,000 ಪುಟಗಳ ದಾಖಲೆ ಪತ್ರಗಳನ್ನು ಪಡೆದಿದ್ದಾರೆ.
ಎತ್ತಿನಗಾಡಿಯಲ್ಲಿ ದಾಖಲೆ ಸಾಗಾಟ!
ಸಾವಿರಾರು ಪುಟಗಳ ದಾಖಲೆ ಪತ್ರಗಳ ಬೃಹತ್ ಬಂಡಲ್ ಅನ್ನು ಪಡೆದ ರೈತ ರವಿ ಅದನ್ನು ಸಾಗಿಸಲು ಎತ್ತಿನಗಾಡಿಯ ಮೊರೆ ಹೋಗಿದ್ದು ವಿಶೇಷವಾಗಿತ್ತು. ದಾಖಲೆ ಪತ್ರಗಳ ಪ್ರತಿಗಳನ್ನು ಎತ್ತಿನಗಾಡಿಯ ಮುಖಾಂತರ ತಮ್ಮ ಗ್ರಾಮಕ್ಕೆ ಕೊಂಡೊಯ್ದಿದ್ದಾರೆ. ರೈತ ರವಿ ಅವರ ಈ ನಡೆಯಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಕ್‌ಗೆ ಒಳಗಾಗಿದ್ದಾರೆ.
ದೂರು ನೀಡಿ ಬೆದರಿಸುವ ತಂತ್ರ:
ದಾಖಲೆ ಪಡೆಯಲು ಹೋದಾಗ ಕೆಲವರು ಸುಖಾಸುಮ್ಮನೆ ಪೊಲೀಸ್ ಠಾಣೆಗೆ ದೂರು ನೀಡಿ ರವಿಯವರನ್ನು ತಡೆಯಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ, ಬೆದರಿಕೆಗಗೆ ಬಗ್ಗದೇ ಅಂತಿಮವಾಗಿ ತಮ್ಮ ಹಸು ಮಾರಾಟದ ಹಣದಿಂದ ದಾಖಲೆಗಳನ್ನು ಪಡೆದು, ಪಂಚಾಯಿತಿಯ ಅವ್ಯವಹಾರ ಬಯಲಿಗೆಳೆಯಲು ಸಿದ್ಧರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ