
ಕೊಪ್ಪಳ/ವಿಜಯನಗರ (ಮಾ.09): ಭಾರತದಲ್ಲಿ ಅತಿಹೆಚ್ಚು ವಿದೇಶಿ ಪ್ರವಾಸಿಗಳು ಬರುವ ಪ್ರವಾಸಿ ಸ್ಥಳ ಹಂಪಿಯ ತುಸು ದೂರದಲ್ಲಿರುವ ಹೋಮ್ ಸ್ಟೇ ಮಾಲಕಿಯ ಮೇಲೆ ಅತ್ಯಾಚಾರ ನಡೆದ ಘಟನೆ ವರದಿಯಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ವಿಫಲತೆಯೇ ಕಾರಣ. ಇಲ್ಲಿ ಮಾಡಲಾಗಿದ್ದ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ಹಿಂಪಡೆದಿದ್ದರಿಂದ ಈ ಅವಘಡ ಸಂಭವಿಸಿದ್ದು, ಹಂಪಿಯಲ್ಲಿ ಕೂಡಲೇ ಪೊಲೀಸ್ ಸಬ್ ಡಿವಿಷನ್ ಆರಂಭಿಸಬೇಕು ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಗಂಗಾವತಿ ತಾಲೂಕಿನ ಸಣಾಪುರದಲ್ಲಿ ಇಸ್ರೇಲಿ ಪ್ರವಾಸಿಗರೊಬ್ಬರು ಹಾಗೂ ಹೋಮ್ ಸ್ಟೇ ಮಾಲಕಿಯ ಮೇಲೆ ನಡೆದ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣ ಅತ್ಯಂತ ಹೀನ ಕೃತ್ಯವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಘಟನೆ ಕುರಿತು ವರದಿ ಪಡೆದು ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದೆನು. ಅದರಂತೆ ಪೊಲೀಸ್ ಅಧಿಕಾರಿಗಳು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಸರ್ಕಾರದಲ್ಲಿ ನಾನು ಅಖಂಡ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಅವರ ಸಹಕಾರದೊಂದಿಗೆ ಹಂಪಿಯಲ್ಲಿ ಪೊಲೀಸ್ ಸಬ್ ಡಿವಿಷನ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಡಿವೈಎಸ್ಪಿ ಮಟ್ಟದ ಅಧಿಕಾರಿಯನ್ನು ನೇಮಿಸಿ 32 ಪೊಲೀಸ್ ತಂಡಗಳನ್ನು ರಚಿಸಿ ಅವರಿಗೆ ದ್ವಿಚಕ್ರ ವಾಹನವನ್ನು ನೀಡಲಾಗಿತ್ತು. ಈ ಮೂಲಕ ಹಂಪಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಆನೆಗೊಂದಿ ಸಹ ಒಳಗೊಂಡಿರುವ ಕಾರಣ ಎರಡು ಐತಿಹಾಸಿಕ ಸ್ಥಳಗಳಿಗೆ ಆಗಮಿಸುವ ದೇಶ ವಿದೇಶದ ಪ್ರವಾಸಿಗರ ರಕ್ಷಣೆಗೆ ಹಗಲಿರುಳು ಗಸ್ತು ತಿರುಗುವ ಉತ್ತಮ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇದನ್ನೂ ಓದಿ: ಹಂಪಿಯಲ್ಲಿ ಇಸ್ರೇಲ್ ಮಹಿಳೆ ಮೇಲೆ ಸಾಮೂಹಿಕ ಬಲತ್ಕಾರ: ಬೆಚ್ಚಿಬಿದ್ದ ಪ್ರವಾಸಿಗರು! 'ಮಹಿಳಾ ದಿನ' ಹೊತ್ತಲ್ಲಿ ಇದೆಂಥ ಕ್ರೌರ್ಯ?
ಇದೀಗ ದುರಾದೃಷ್ಟಕರ ಸಂಗತಿ ಎಂದರೆ ನಂತರ ಬಂದ ಸರ್ಕಾರ ಆ ಪೊಲೀಸ್ ಸಬ್ ಡಿವಿಷನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಅದನ್ನು ಬೇರೆಡೆಗೆ ಸ್ಥಳಾಂತರಗೊಳಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಅತ್ಯಂತ ವಿನಮ್ರವಾಗಿ ವಿನಂತಿಸುತ್ತಾ, ಹಂಪಿ ಹಾಗೂ ಆನೆಗೊಂದಿಗೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರ ರಕ್ಷಣೆಗಾಗಿ ಈ ಹಿಂದೆ ಕಲ್ಪಿಸಲಾಗಿದ್ದ ಪೊಲೀಸ್ ಸಬ್ ಡಿವಿಷನ್ ಹಂಪಿಯಲ್ಲಿ ಪುನಃ ಸ್ಥಾಪಿಸಬೇಕು. ಜೊತೆಗೆ, ಆನೆಗೊಂದಿಯಲ್ಲಿ ಪ್ರತ್ಯೇಕ ಪೊಲೀಸ್ ಠಾಣೆ ನಿರ್ಮಿಸಿ ಉತ್ತಮ ಭದ್ರತಾ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡುತ್ತೇನೆ.
ಭಾರತದಲ್ಲಿಯೇ ಅತಿ ಹೆಚ್ಚು ದೇಶ-ವಿದೇಶಗಳ ಪ್ರವಾಸಿಗರು ಆಗಮಿಸುವ ಪ್ರಸಿದ್ಧ ಪುಣ್ಯಕ್ಷೇತ್ರ ಹಾಗೂ ಪ್ರವಾಸಿ ತಾಣಗಳಾಗಿರುವ ಹಂಪಿ ಮತ್ತು ಆನೆಗೊಂದಿ ಭಾಗದ ಪ್ರತಿಯೊಬ್ಬರ ಸುರಕ್ಷತೆ ಕಾಪಾಡುವಲ್ಲಿ ಸರ್ಕಾರ ಬದ್ಧತೆ ತೋರಲಿ ಎಂಬುವುದು ನನ್ನ ಆಶಯವಾಗಿದೆ' ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Koppal:ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಗ್ಯಾಂಗ್ ರೇಪ್, ಆರೋಪಿಗಳ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ