ಎಚ್ಚರ...! ರಾಜ್ಯದಲ್ಲಿ ಹಂದಿಜ್ವರ ಹಾವಳಿ: ಒಂದೇ ದಿನ 12 ಸಾವು!

By Web DeskFirst Published Nov 18, 2018, 8:02 AM IST
Highlights

ಪ್ರಸಕ್ತ ಸಾಲಿನಲ್ಲಿ ಒಂದೇ ದಿನ ಅತಿ ಹೆಚ್ಚು ಎಚ್‌1ಎನ್‌1 ಸಾವು ವರದಿಯಾಗಿರುವುದು ಇದೇ ಮೊದಲು. ಅ.12ರಂದು ಒಂದೇ ದಿನ ಐದು ಮಂದಿ ಬಲಿಯಾಗಿದ್ದರು. ಈ ಮೂಲಕ ಮೃತರ ಸಂಖ್ಯೆ 13ಕ್ಕೆ ಹೆಚ್ಚಳವಾಗಿತ್ತು. ಬಳಿಕ ನವೆಂಬರ್‌ 16ರ ವೇಳೆಗೆ 19ಕ್ಕೆ ಏರಿಕೆಯಾಗಿದ್ದ ಮೃತರ ಸಂಖ್ಯೆ ನ.17ರಂದು ಒಂದೇ ದಿನ 31ಕ್ಕೆ ತಲುಪಿದೆ. ಈ ಮೂಲಕ ಅ.17ರಂದು ಒಂದೇ ದಿನ 12 ಮಂದಿ ಮೃತಪಟ್ಟಂತಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಬೆಂಗಳೂರು[ನ.18]: ರಾಜ್ಯದಲ್ಲಿ ಹಂದಿ ಜ್ವರ (ಎಚ್‌1ಎನ್‌1) ಮಹಾಮಾರಿಗೆ ಶನಿವಾರ ಒಂದೇ ದಿನ ಬರೋಬ್ಬರಿ 12 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಮಾರಣಾಂತಿಕ ಕಾಯಿಲೆಯಿಂದ ಜೀವ ಕಳೆದುಕೊಂಡವರ ಸಂಖ್ಯೆ ರಾಜ್ಯದಲ್ಲಿ 31ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆತಂಕ ಮತ್ತಷ್ಟು ತೀವ್ರಗೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಒಂದೇ ದಿನ ಅತಿ ಹೆಚ್ಚು ಎಚ್‌1ಎನ್‌1 ಸಾವು ವರದಿಯಾಗಿರುವುದು ಇದೇ ಮೊದಲು. ಅ.12ರಂದು ಒಂದೇ ದಿನ ಐದು ಮಂದಿ ಬಲಿಯಾಗಿದ್ದರು. ಈ ಮೂಲಕ ಮೃತರ ಸಂಖ್ಯೆ 13ಕ್ಕೆ ಹೆಚ್ಚಳವಾಗಿತ್ತು. ಬಳಿಕ ನವೆಂಬರ್‌ 16ರ ವೇಳೆಗೆ 19ಕ್ಕೆ ಏರಿಕೆಯಾಗಿದ್ದ ಮೃತರ ಸಂಖ್ಯೆ ನ.17ರಂದು ಒಂದೇ ದಿನ 31ಕ್ಕೆ ತಲುಪಿದೆ. ಈ ಮೂಲಕ ಅ.17ರಂದು ಒಂದೇ ದಿನ 12 ಮಂದಿ ಮೃತಪಟ್ಟಂತಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಶನಿವಾರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಎಲ್ಲಾ ಜಿಲ್ಲಾ ವೈದ್ಯಾಧಿಕಾರಿಗಳು ಹಾಗೂ ವಿಶೇಷ ವೈದ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ಕೂಡಲೇ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಕಾಯಿಲೆಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶ ನೀಡಿದ್ದಾರೆ.

ಎಲ್ಲೆಲ್ಲಿ ಎಷ್ಟು ಸಾವು?:

ಆರೋಗ್ಯ ಇಲಾಖೆ ಅಂಕಿ-ಅಂಶದ ಪ್ರಕಾರ, ಶನಿವಾರ ಒಂದೇ ದಿನ ಬೆಂಗಳೂರು ಗ್ರಾಮೀಣ ಭಾಗದಲ್ಲಿ 1, ದಾವಣಗೆರೆ 2, ಶಿವಮೊಗ್ಗ 1, ತುಮಕೂರು 1, ಬೆಳಗಾವಿ 2, ಧಾರವಾಡ 2, ಗದಗ 1, ಹಾವೇರಿ 1, ಹಾಸನ 1 ಸೇರಿದಂತೆ ಹನ್ನೆರಡು ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಹಾಸನದಲ್ಲಿ ಈವರೆಗೆ ಎಚ್‌1ಎನ್‌1ಗೆ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಇನ್ನು ತುಮಕೂರಿನಲ್ಲೂ ಈವರೆಗೂ ನಾಲ್ಕು ಮಂದಿ ಬಲಿಯಾದಂತಾಗಿದೆ.

ತೀವ್ರಗೊಳ್ಳುತ್ತಿದೆ ಸೋಂಕು:

ಎಚ್‌1ಎನ್‌1 ಜ್ವರ ಸಾಂಕ್ರಾಮಿಕ ಕಾಯಿಲೆಯಾಗಿರುವುದರಿಂದ ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ. ಜನವರಿಯಿಂದ ಈವರೆಗೆ ರಾಜ್ಯದಲ್ಲಿ 1246 ಎಚ್‌1ಎನ್‌1 ಪ್ರಕರಣ ದೃಢಪಟ್ಟಿವೆ. ಕಳೆದ ಒಂದೇ ದಿನದಲ್ಲಿ 15 ಪ್ರಕರಣಗಳು ದೃಢಪಟ್ಟಿವೆ.

ಜನವರಿಯಿಂದ ಈವರೆಗೆ 8,135 ಮಾದರಿಗಳನ್ನು ಪರೀಕ್ಷೆ ನಡೆಸಿದ್ದು, 1246 ಪ್ರಕರಣಗಳು ಖಚಿತಪಟ್ಟಿವೆ. ಇವುಗಳಲ್ಲಿ ಬೆಂಗಳೂರು ನಗರದಲ್ಲಿ 358 ಪ್ರಕರಣ ದೃಢಪಟ್ಟಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಕಾಯಿಲೆ ತೀವ್ರವಾಗಿ ಹರಡುತ್ತಿರುವ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ರೋಗದ ಬಗ್ಗೆ ಅರಿವು ಮೂಡಿಸುವ ಶಿಬಿರಗಳನ್ನು ಏರ್ಪಡಿಸಬೇಕು. ರೋಗ ಲಕ್ಷಣಗಳು ಕಂಡು ಬಂದವರನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ಕೊಡಿಸಬೇಕು. ಈ ಬಗ್ಗೆ ಕಾಲಕಾಲಕ್ಕೆ ವರದಿ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.

ಆತಂಕ ಬೇಡ, ಎಚ್ಚರವಿರಲಿ:

ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳು, ಮೆಟ್ರೋ ನಿಲ್ದಾಣಗಳು, ಪ್ರಾಥಮಿಕ, ತಾಲೂಕು, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಎಚ್‌1ಎನ್‌1 ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ನೀಡಲಾಗುತ್ತಿದೆ. ಪ್ರತಿಯೊಬ್ಬ ಶಂಕಿತರಿಗೂ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಸೂಚಿಸಲಾಗಿದೆ. ರೋಗದ ಬಗ್ಗೆ ಎಚ್ಚರವಿರಲಿ, ಆದರೆ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮದ ನಿರ್ದೇಶಕ ಡಾ.ಸಜ್ಜನ್‌ ಶೆಟ್ಟಿ ಹೇಳಿದ್ದಾರೆ.

click me!