ಗೃಹಲಕ್ಷ್ಮಿ ಹಣಕ್ಕೆ ಹೊಸ ರೂಲ್ಸ್? ಇನ್ಮುಂದೆ 'ಜೀವಿತ ಪ್ರಮಾಣ ಪತ್ರ' ಕಡ್ಡಾಯ; ಸಿಎಂ ಮಹತ್ವದ ಆದೇಶ

Published : Feb 07, 2026, 06:21 PM IST
gruha lakshmi scheme

ಸಾರಾಂಶ

ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಸೋರಿಕೆ ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ತರಲು ಚಿಂತಿಸುತ್ತಿದೆ. ಯೋಜನೆಯ ಫಲಾನುಭವಿಗಳು ಇನ್ನು ಮುಂದೆ ಪ್ರತಿ ವರ್ಷ 'ಜೀವಿತ ಪ್ರಮಾಣ ಪತ್ರ' ಸಲ್ಲಿಸುವುದು ಕಡ್ಡಾಯವಾಗುವ ಸಾಧ್ಯತೆಯಿದ್ದು, ಈ ಪ್ರಸ್ತಾವನೆ ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಬೆಂಗಳೂರು (ಫೆ.07): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬೆನ್ನೆಲುಬಾಗಿರುವ 'ಗೃಹಲಕ್ಷ್ಮಿ' ಯೋಜನೆಯಲ್ಲಿ (Gruha Lakshmi Scheme) ಮಹತ್ವದ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರದ ಹಣ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಪ್ರತಿ ವರ್ಷ ಕಡ್ಡಾಯವಾಗಿ 'ಜೀವಿತ ಪ್ರಮಾಣ ಪತ್ರ' (Life Certificate) ಸಲ್ಲಿಸಬೇಕಾದ ನಿಯಮ ಜಾರಿಗೆ ಬರುವ ಲಕ್ಷಣಗಳು ಗೋಚರಿಸಿವೆ.

ಈ ಸಂಬಂಧ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಸಲ್ಲಿಸಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಈ ಕುರಿತು ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತ ಆದೇಶ ನೀಡಿದ್ದಾರೆ.

ಏನಿದು ಪ್ರಸ್ತಾವನೆ?

ರಾಜ್ಯದಲ್ಲಿ ಸುಮಾರು 1.24 ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದು, ಸರ್ಕಾರ ಈವರೆಗೆ ಸುಮಾರು 57,300 ಕೋಟಿ ರೂ.ಗಳಿಗೂ ಅಧಿಕ ಆರ್ಥಿಕ ನೆರವನ್ನು ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯೋಜನೆಯ ಫಲಾನುಭವಿಗಳಲ್ಲಿ ಕೆಲವರು ಮರಣ ಹೊಂದಿದ್ದರೂ, ಅವರ ಮಾಹಿತಿ ಸರ್ಕಾರಕ್ಕೆ ತಲುಪುತ್ತಿಲ್ಲ. ಪರಿಣಾಮವಾಗಿ, ಮೃತಪಟ್ಟ ಮಹಿಳೆಯರ ಖಾತೆಗೂ ಹಣ ಜಮಾವಣೆಯಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ದಿನೇಶ್ ಗೂಳಿಗೌಡ ಅವರು, 'ಕುಟುಂಬದ ಜೀವನ ನಿರ್ವಹಣೆಗೆ ಆಸರೆಯಾಗಿರುವ ಈ ಯೋಜನೆಯ ಹಣವು ಮರಣ ಹೊಂದಿರುವ ಫಲಾನುಭವಿಗಳಿಗೆ ಪಾವತಿಯಾಗುವುದನ್ನು ತಡೆಗಟ್ಟುವುದು ಅವಶ್ಯಕ. ಇದರಿಂದ ಉಳಿತಾಯವಾಗುವ ಮೊತ್ತವನ್ನು ಇತರೆ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಥವಾ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಅನುಕೂಲವಾಗುತ್ತದೆ' ಎಂದು ವಿವರಿಸಿದ್ದಾರೆ.

ಪಿಂಚಣಿ ಮಾದರಿ ಅನ್ವಯ?

ಸರ್ಕಾರಿ ನೌಕರರು ನಿವೃತ್ತಿಯ ನಂತರ ಪಿಂಚಣಿ ಪಡೆಯಲು ಹೇಗೆ ಪ್ರತಿ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ತೆರಳಿ ತಾವು ಬದುಕಿದ್ದೇವೆ ಎಂದು 'ಜೀವಿತ ಪ್ರಮಾಣ ಪತ್ರ'ವನ್ನು ಸಲ್ಲಿಸುತ್ತಾರೋ, ಅದೇ ಮಾದರಿಯನ್ನು ಗೃಹಲಕ್ಷ್ಮಿ ಯೋಜನೆಗೂ ಅನ್ವಯಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಈ ವ್ಯವಸ್ಥೆಯನ್ನು ಜಾರಿಗೊಳಿಸುವುದರಿಂದ ಅನರ್ಹರಿಗೆ ಹಣ ವರ್ಗಾವಣೆಯಾಗುವುದನ್ನು ತಪ್ಪಿಸಬಹುದು ಎಂಬುದು ಪ್ರಾಧಿಕಾರದ ಅಭಿಪ್ರಾಯವಾಗಿದೆ.

ಸಿಎಂ ಕಡಕ್ ಸೂಚನೆ:

ದಿನೇಶ್ ಗೂಳಿಗೌಡ ಅವರ ಪತ್ರವನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪತ್ರದ ಮೇಲೆಯೇ "ಪರಿಶೀಲಿಸಿ, ಕೂಡಲೇ ಕ್ರಮ ತೆಗೆದುಕೊಳ್ಳುವುದು" ಎಂದು ಷರಾ ಬರೆದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ರವಾನಿಸಿದ್ದಾರೆ (ದಿನಾಂಕ: 07/02/2026). ಹೀಗಾಗಿ, ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಈ ಬಗ್ಗೆ ಹೊಸ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಯಿದೆ.

ಒಂದು ವೇಳೆ ಈ ನಿಯಮ ಜಾರಿಯಾದರೆ, ರಾಜ್ಯದ ಕೋಟ್ಯಂತರ ಗೃಹಲಕ್ಷ್ಮಿ ಫಲಾನುಭವಿಗಳು ವರ್ಷಕ್ಕೊಮ್ಮೆ ತಮ್ಮ ಬ್ಯಾಂಕ್ ಅಥವಾ ಸೇವಾ ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಕ್ ಅಥವಾ ಇತರೆ ವಿಧಾನಗಳ ಮೂಲಕ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಮೆಟ್ರೋ ದರ ಏರಿಕೆಗೆ ಸದ್ಯಕ್ಕೆ ತಡೆ, ಸಂಸದ ತೇಜಸ್ವಿ ಸೂರ್ಯ ಮನವಿಗೆ ಕೇಂದ್ರದ ಸ್ಪಂದನೆ
ದೇಶದಲ್ಲೇ ದುಬಾರಿ ನಮ್ಮ ಬೆಂಗಳೂರು ಮೆಟ್ರೋ! ದೇಶದ ಇತರ ನಗರಗಳಲ್ಲಿ ಮೆಟ್ರೋ ದರ ಎಷ್ಟಿದೆ?