ಬೆಂಗಳೂರು ಮೆಟ್ರೋ ದರ ಏರಿಕೆಗೆ ಸದ್ಯಕ್ಕೆ ತಡೆ, ಸಂಸದ ತೇಜಸ್ವಿ ಸೂರ್ಯ ಮನವಿಗೆ ಕೇಂದ್ರದ ಸ್ಪಂದನೆ

Published : Feb 07, 2026, 06:05 PM IST
MP Tejasvi Surya

ಸಾರಾಂಶ

ಸೋಮವಾರದಿಂದ ಜಾರಿಯಾಗಬೇಕಿದ್ದ ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರ ಮನವಿಯ ಮೇರೆಗೆ ಕೇಂದ್ರ ಸಚಿವ ಎಂ.ಎಲ್. ಖಟ್ಟರ್ ಈ ಸೂಚನೆ ನೀಡಿದ್ದು, ಪ್ರಯಾಣಿಕರಿಗೆ ಸದ್ಯಕ್ಕೆ ನಿರಾಳ ಸಿಕ್ಕಿದೆ. 

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಸದ್ಯಕ್ಕೆ ನಿರಾಳದ ಸುದ್ದಿ ಸಿಕ್ಕಿದೆ. ಸೋಮವಾರದಿಂದ ಜಾರಿಗೆ ಬರಬೇಕಿದ್ದ ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ವಿಷಯವನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಬೆಂಗಳೂರು ಮೆಟ್ರೋ ದರ ಏರಿಕೆ ಅನ್ಯಾಯವಾಗಿದೆ ಎಂದು ಹೇಳಿರುವ ತೇಜಸ್ವಿ ಸೂರ್ಯ, ಈ ಕುರಿತು ತಕ್ಷಣದ ಹಸ್ತಕ್ಷೇಪವನ್ನು ಕೋರಿ ಕೇಂದ್ರ ಗೃಹ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ (mlkhattar) ಅವರೊಂದಿಗೆ ವಿವರವಾದ ದೂರವಾಣಿ ಸಂಭಾಷಣೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋ ಈಗಾಗಲೇ ದುಬಾರಿ: ತೇಜಸ್ವಿ ಸೂರ್ಯ

ತಮ್ಮ ಪೋಸ್ಟ್‌ನಲ್ಲಿ ಮಾತನಾಡಿರುವ ತೇಜಸ್ವಿ ಸೂರ್ಯ, ಬೆಂಗಳೂರು ನಗರದಲ್ಲಿ ಈಗಾಗಲೇ ದೇಶದಲ್ಲೇ ಅತೀ ದುಬಾರಿ ಮೆಟ್ರೋ ಪ್ರಯಾಣ ದರಗಳು ಇದೆ. ಇದರ ಮೇಲೂ ಮತ್ತೆ ದರ ಏರಿಕೆ ಮಾಡಿದರೆ, ಲಕ್ಷಾಂತರ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಕಷ್ಟವಾಗುತ್ತದೆ. ಇದು ಮೆಟ್ರೋ ಯೋಜನೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ” ಎಂದು ಕೇಂದ್ರ ಸಚಿವರ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರಸ್ತಾವಿತ ಮೆಟ್ರೋ ಟಿಕೆಟ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಸೂಚನೆ ನೀಡಿರುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದಾರೆ. ಅದರಂತೆ, ಸೋಮವಾರದಿಂದ ಮೆಟ್ರೋ ದರ ಏರಿಕೆ ಜಾರಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಫ್‌ಎಫ್‌ಸಿ ವೈಪರೀತ್ಯಗಳ ಪರಿಶೀಲನೆಗೆ ಭರವಸೆ

ಇದಲ್ಲದೆ, ಮೆಟ್ರೋ ದರ ನಿಗದಿಗೆ ಸಂಬಂಧಿಸಿದ ಎಫ್‌ಎಫ್‌ಸಿ (Fare Fixation Committee) ಯಲ್ಲಿರುವ ವೈಪರೀತ್ಯಗಳ ಬಗ್ಗೆ ವೈಯಕ್ತಿಕವಾಗಿ ಪರಿಶೀಲನೆ ನಡೆಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ವಿನಂತಿ ಬಂದರೆ, ಹೊಸ ಸಮಿತಿಯನ್ನು ರಚಿಸುವ ವಿಚಾರವನ್ನೂ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಪ್ರಯಾಣಿಕರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಸಚಿವರ ತ್ವರಿತ ಹಾಗೂ ಸೂಕ್ಷ್ಮ ಪ್ರತಿಕ್ರಿಯೆಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕ ಅಶೋಕ್ ಹೇಳಿಕೆ

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಪಕ್ಷ ನಾಯಕ ಅಶೋಕ್, ಬೆಂಗಳೂರು ಮೆಟ್ರೋ ದರ ಏರಿಕೆ ಕುರಿತು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ತೇಜಸ್ವಿ ಸೂರ್ಯ ಹಾಗೂ ನಾನು ಸಹ ಮನವಿ ಸಲ್ಲಿಸಿದ್ದೇವೆ. ನಾಳೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಇಲ್ಲಿ ಈ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ, ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರದಲ್ಲಿ ಸದ್ಯಕ್ಕೆ ಪ್ರಯಾಣಿಕರಿಗೆ ತಾತ್ಕಾಲಿಕ ನೆಮ್ಮದಿ ದೊರೆತಿದ್ದು, ಮುಂದಿನ ನಿರ್ಧಾರಗಳ ಮೇಲೆ ನಗರದ ಜನರ ಗಮನ ಕೇಂದ್ರೀಕೃತವಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಶದಲ್ಲೇ ದುಬಾರಿ ನಮ್ಮ ಬೆಂಗಳೂರು ಮೆಟ್ರೋ! ದೇಶದ ಇತರ ನಗರಗಳಲ್ಲಿ ಮೆಟ್ರೋ ದರ ಎಷ್ಟಿದೆ?
Namma Metro fare hike: 'ಸುಳ್ಳು ಹೇಳೋಕೆ ನಾಚಿಕೆ ಆಗೋಲ್ವಾ? ಏನು ತಿಂತೀರಿ?' ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಿಡಿ