ರಾಜ್ಯದಲ್ಲಿ ಲಾಕ್‌ಡೌನ್‌ 1 ವಾರ ವಿಸ್ತರಣೆ ಬಹುತೇಕ ಖಚಿತ!

By Kannadaprabha NewsFirst Published Jun 3, 2021, 7:20 AM IST
Highlights

* ನಾಡಿದ್ದು ಸಿಎಂ ಅಂತಿಮ ನಿರ್ಧಾರ ಸಾಧ್ಯತೆ

* ರಾಜ್ಯದಲ್ಲಿ ಲಾಕ್‌ಡೌನ್‌ 1 ವಾರ ವಿಸ್ತರಣೆ ಬಹುತೇಕ ಖಚಿತ

* ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಾರದ್ದರಿಂದ ನಿರ್ಬಂಧ ವಿಸ್ತರಣೆ

* ನಿನ್ನೆ ಸಚಿವರ ಜತೆ ಸಿಎಂ ಸಭೆ

* ಇನ್ನೊಮ್ಮೆ ತಜ್ಞರ ಸಭೆ ನಡೆಸಿ ಫೈನಲ್‌

ಬೆಂಗಳೂರು(ಜೂ.03): ರಾಜ್ಯದಲ್ಲಿ ಮತ್ತೊಂದು ವಾರ ಲಾಕ್‌ಡೌನ್‌ ಮುಂದುವರೆಯುವುದು ಬಹುತೇಕ ಖಚಿತ. ಈ ಬಗ್ಗೆ ಜೂ.5ರಂದು ನಡೆಯಲಿರುವ ಸಚಿವರ ಸಭೆಯ ನಂತರ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊರೋನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬುಧವಾರ ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವರ ಸಭೆ ನಡೆಸಿದ್ದು, ಈ ಸಭೆಯಲ್ಲೂ ಲೌಕ್‌ಡೌನ್‌ ಮುಂದುವರಿಕೆ ಚರ್ಚೆ ನಡೆದು ಅಂತಿಮ ನಿರ್ಧಾರ ಜೂ.5 ರಂದು ಕೈಗೊಳ್ಳಲು ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ.

Latest Videos

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ತಾಂತ್ರಿಕ ಸಲಹಾ ಸಮಿತಿ ವರದಿ ಆಧಾರದ ಮೇಲೆ ಸೆಮಿ ಲಾಕ್ಡೌನ್‌ ಅನ್ನು ಜೂ.7ರಿಂದ ಮತ್ತೆ ಒಂದು ವಾರ ವಿಸ್ತರಿಸಬೇಕಿದೆ. ಮುಂದಿನ ಲಾಕ್ಡೌನ್‌ ಅವಧಿಗಾಗಿ ಮತ್ತಷ್ಟುಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕಾಗಿದ್ದು ಕೆಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಬೇಕಾಗಿದೆ. ಹೀಗಾಗಿ 4 ಅಥವಾ 5ರಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಯವರು ಸಭೆಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಹಳ್ಳಿಗಳ ಬಗ್ಗೆ ಎಚ್ಚರ ವಹಿಸಿ:

ಸಭೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಎಚ್ಚರ ತಪ್ಪದೆ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರೆಸಿ ಎಂದು ಯಡಿಯೂರಪ್ಪ ಸೂಚಿಸಿದರು.

ರಾಜ್ಯದಲ್ಲಿ ಕೊರೋನಾ ಸೋಂಕು ಈಗಷ್ಟೇ ನಿಯಂತ್ರಣಕ್ಕೆ ಬರುತ್ತಿದೆ. ನಿತ್ಯದ ಪ್ರಕರಣ, ಪಾಸಿಟಿವಿಟಿ ದರ ಹಾಗೂ ಸಾವಿನ ದರ ಕಡಿಮೆಯಾಗುತ್ತಿದೆ. ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿರುವುದರಿಂದ ಬೆಡ್‌ಗಳ ಕೊರತೆ ಸಮಸ್ಯೆ ಕಡಿಮೆಯಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿರುವುದರಿಂದ ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಒತ್ತಡ ಹೆಚ್ಚಾಗಿದೆ.

ಗ್ರಾಮೀಣ ಭಾಗದಲ್ಲಿ ಜಾಗೇತಿ ಕೊರತೆಯಿಂದಾಗಿ ಜನರು ಅಂತಿಮ ಹಂತದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಸೂಕ್ತ ವೇಳೆಯಲ್ಲಿ ಪರೀಕ್ಷೆ ನಡೆಸಿ ಸೋಂಕು ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ಈ ಬಗ್ಗೆ ಹಮ್ಮಿಕೊಂಡಿರುವ ವೈದ್ಯರ ನಡಿಗೆ, ಹಳ್ಳಿಗಳ ಕಡೆಗೆ ಕಾರ್ಯಕ್ರಮವನ್ನು ಸೂಕ್ತವಾಗಿ ಅನುಷ್ಠಾನ ಮಾಡಬೇಕು ಎಂದು ಯಡಿಯೂರಪ್ಪ ಸಲಹೆ ನೀಡಿದರು ಎಂದು ಮೂಲಗಳು ಹೇಳಿವೆ.

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

ಆಕ್ಸಿಜನ್‌ ಕೊರತೆ ನೀಗಿಸಿ:

ಕಳೆದ ಎರಡು ಮೂರು ದಿನಗಳಿಂದ ಆಕ್ಸಿಜನ್‌ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇನ್ನು ಆಕ್ಸಿಜನ್‌ನ ಜಿಲ್ಲಾವಾರು ಹಂಚಿಕೆ ಬಗ್ಗೆ ನಿಗಾ ಇಡಬೇಕು. ಯಾವ ಜಿಲ್ಲೆಯಲ್ಲೂ ಆಕ್ಸಿಜನ್‌ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಇನ್ನು ರಾಜ್ಯದಲ್ಲಿ ಬ್ಲಾಕ್‌ ಫಂಗಸ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬ್ಲಾಕ್‌ ಫಂಗಸ್‌ನಿಂದ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದ್ದು, ಮಾರಣಾಂತಿಕ ಕಾಯಿಲೆ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಸೂಕ್ತ ಚಿಕಿತ್ಸೆ ನೀಡಲು ಎಲ್ಲಾ ಜಿಲ್ಲೆಗಳಲ್ಲೂ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೇರಿದಂತೆ ಹಲವು ಸಚಿವರು ಭಾಗವಹಿಸಿದ್ದರು.

3ನೇ ಅಲೆ ತಡೆಗೆ ವಾರದಲ್ಲಿ ವರದಿ

- ಕೋವಿಡ್‌ 3ನೇ ಅಲೆ ನಿಯಂತ್ರಣಕ್ಕೆ ವಾರದಲ್ಲಿ ವಿಸ್ತೃತ ವರದಿ ನೀಡಲು ತಜ್ಞರ ಸಮಿತಿಗೆ ಸಿಎಂ ಸೂಚನೆ

- 3ನೇ ಅಲೆಗೂ ಮುನ್ನ 12ರಿಂದ 18 ವರ್ಷದ ಮಕ್ಕಳಿಗೆ ಫೈಝರ್‌ ಲಸಿಕೆ ನೀಡಲು ತಜ್ಞರ ಸಲಹೆ

- ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಪ್ರಯೋಗ ಮುಗಿದರೆ ಆ ಲಸಿಕೆಯನ್ನೂ ಬೇಗ ನೀಡಬೇಕು

- ಮಕ್ಕಳಿಗೆ ಸೋಂಕು ಹರಡದಿರಲು ವಯಸ್ಕರಿಗೂ ತ್ವರಿತವಾಗಿ ಲಸಿಕೆ ನೀಡಬೇಕು

- ಜಿಲ್ಲಾಸ್ಪತ್ರೆಗಳಲ್ಲಿ ಎಚ್‌ಡಿಯು ಬೆಡ್‌, ಮಕ್ಕಳ ಐಸಿಯು ಬೆಡ್‌ ಹೆಚ್ಚಿಸಬೇಕು: ತಜ್ಞರ ಸಲಹೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!