ಆಕ್ಸಿಜನ್‌ ಘಟಕ ಆರಂಭಕ್ಕೆ ವಿಶೇಷ ರಿಯಾಯಿತಿ: ಸಚಿವ ಶೆಟ್ಟರ್‌

By Kannadaprabha NewsFirst Published Jun 3, 2021, 7:11 AM IST
Highlights
  •  ರಾಜ್ಯದಲ್ಲಿ ನೂತನ ಆಮ್ಲಜನಕ ಘಟಕ ನಿರ್ಮಾಣ ಪ್ರಾರಂಭಿಸಲು ಉದ್ಯಮಿಗಳಿಗೆ ಪ್ರೋತ್ಸಾಹ
  • ಕೈಗಾರಿಕಾ ಇಲಾಖೆಯಿಂದ ವಿಶೇಷ ರಿಯಾಯಿತಿ ಪ್ರಸ್ತಾವನೆ
  •  ಅನುಮತಿ ದೊರೆತ ನಂತರ ಕೆಲವೇ ದಿನಗಳಲ್ಲಿ ಘೋಷಣೆ

ಬೆಂಗಳೂರು (ಜೂ.03):  ರಾಜ್ಯದಲ್ಲಿ ನೂತನ ಆಮ್ಲಜನಕ ಘಟಕ ನಿರ್ಮಾಣ ಪ್ರಾರಂಭಿಸಲು ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕೈಗಾರಿಕಾ ಇಲಾಖೆಯಿಂದ ವಿಶೇಷ ರಿಯಾಯಿತಿ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು ಆರ್ಥಿಕ ಇಲಾಖೆಯ ಪರಾಮರ್ಶೆಗೆ ಕಳುಹಿಸಲಾಗಿದೆ.

 ಅನುಮತಿ ದೊರೆತ ನಂತರ ಕೆಲವೇ ದಿನಗಳಲ್ಲಿ ಘೋಷಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಮತ್ತು ಸರಬರಾಜು ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯವನ್ನು ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬಿ ಮಾಡಬೇಕು ಎಂದು ಕರೆ ನೀಡಿದರು.

 ಕೇಂದ್ರ ಸರಕಾರದ ಸಹಕಾರದಿಂದ ಹಾಗೂ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಡಿಮೆ ಆಗುತ್ತಿರುವ ನಿಟ್ಟಿನಲ್ಲಿ ಆಮ್ಲಜನಕದ ಬೇಡಿಕೆ ನಿಧಾನವಾಗಿ ತಗ್ಗುತ್ತಿದೆ. ತಜ್ಞರಅಂದಾಜಿನಂತೆ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ರಾಜ್ಯವನ್ನು ಆಮ್ಲಜನಕ ಉತ್ಪಾದನೆಯನ್ನು ಹೆಚ್ಚಿಸಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸದಾಗಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಲಾಗುವುದು ಎಂದು ಹೇಳಿದರು.

ಕೇಂದ್ರ, ರಾಜ್ಯ ಮತ್ತು ಹಲವಾರು ಸಾರ್ವಜನಿಕ ಸಂಸ್ಥೆಗಳು ಆಮ್ಲಜನಕ ಘಟನೆ ಸ್ಥಾಪನೆಗೆ ಮುಂದಾಗಿವೆ.ಆದರೆ, ಅದರ ಸ್ಥಾಪನೆ ಕಾರ್ಯಗಳನ್ನು ಚುರುಕುಗೊಳಿಸುವುದರತ್ತ ಹೆಚ್ಚಿನ ಗಮನ ಬೇಕಾಗಿದೆ. ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ, ಜಾವೇದ್‌ ಅಖ್ತರ್‌, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್‌ ಕೃಷ್ಣಾ, ಆಕ್ಸಿಜನ್‌ ಸರಬರಾಜು ಸಮಿತಿ ಮೌನಿಶ್‌ ಮೌದ್ಗಿಲ್‌ ಸೇರಿದಂತೆ ಹಲವರು ಹಾಜರಿದ್ದರು.

 ಆಮ್ಲಜನರ ಪೂರೈಸದ ಜಿಂದಾಲ್‌ಗೆ ನೋಟಿಸ್‌

ರಾಜ್ಯಕ್ಕೆ ನೀಡಬೇಕಾಗಿದ್ದ ದ್ರವೀಕೃತ ಆಮ್ಲಜನಕವನ್ನು ಮಂಗಳವಾರ ಪೂರೈಸದ ಜಿಂದಾಲ್‌ ಕಂಪೆನಿಗೆ ರಾಜ್ಯ ಸರ್ಕಾರ ನೋಟಿಸ್‌ ಜಾರಿ ಮಾಡಿದೆ ಎಂದು ಸಚಿವ ಜಗದೀಶ್‌ಶೆಟ್ಟರ್‌ ಹೇಳಿದರು. ಜಿಂದಾಲ್‌ ತಾಂತ್ರಿಕ ಸಮಸ್ಯೆ ಮುಂದಿಟ್ಟುಕೊಂಡು ಮಂಗಳವಾರ ಆಮ್ಲಜನ ನೀಡಿರಲಿಲ್ಲ. ಇದರಿಂದ ರಾಜ್ಯದಿಂದ ಲಭ್ಯವಾಗಬೇಕಿದ್ದ 830 ಟನ್‌ಗಳಲ್ಲಿ ನಮಗೆ ದೊರಕಿದ್ದು ಕೇವಲ 386 ಟನ್‌ ಮಾತ್ರ. ಇಂತಹ ಸಂಕಷ್ಟದ ಸಮಯದಲ್ಲಿ ಆಮ್ಲಜನಕ ನೀಡದೇ ಇರುವುದರ ಬಗ್ಗೆ ನಿನ್ನೆ ಜಿಂದಾಲ್‌ಗೆ ನೋಟಿಸ್‌ ನೀಡಲಾಗಿದ್ದು ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಇನ್ನು ಮುಂದೆ ಇಂತಹ ಘಟನೆಗಳು ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.

click me!