ಸರ್ಕಾರಿ ಶಾಲಾ ಮಕ್ಕಳು ಮೊಟ್ಟೆ ಕೇಳಿದರೆ ಮೊಟ್ಟೆಯನ್ನೇ ನೀಡಬೇಕು. ಬಾಳೆಹಣ್ಣು, ಚಿಕ್ಕಿ ನೀಡುವಂತಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಬೆಂಗಳೂರು (ಜ.22): ಸರ್ಕಾರಿ ಶಾಲಾ ಮಕ್ಕಳು ಮೊಟ್ಟೆ ಕೇಳಿದರೆ ಮೊಟ್ಟೆಯನ್ನೇ ನೀಡಬೇಕು. ಬಾಳೆಹಣ್ಣು, ಚಿಕ್ಕಿ ನೀಡುವಂತಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಸರ್ಕಾರಿ ಶಾಲೆಯ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಶಿಕ್ಷಣ ಇಲಾಖೆ ಜಾರಿಗೆ ತಂದಿದ್ದು, ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಮಾತ್ರ ಬಾಳೆಹಣ್ಣು, ಚಿಕ್ಕಿ ನೀಡಬಹುದು. ಆದರೆ ಕೆಲವು ಕಡೆ ಮಕ್ಕಳು ಮೊಟ್ಟೆ ಕೇಳಿದರೂ ಬಲವಂತವಾಗಿ ಬಾಳೆಹಣ್ಣು, ಚಿಕ್ಕಿ ನೀಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಆದ್ದರಿಂದ ಮೊಟ್ಟೆ ಕೇಳಿದವರಿಗೆ ಮೊಟ್ಟೆಯನ್ನೇ ನೀಡಬೇಕು ಎಂದು ಸೂಚಿಸಿದೆ.
ಮೊಟ್ಟೆ ಕೇಳಿದವರಿಗೆ ಬಾಳೆಹಣ್ಣು, ಚಿಕ್ಕಿ ನೀಡದಂತೆ ರಾಜ್ಯದ ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಸ್ತುವಾರಿ ವಹಿಸಬೇಕು. ಇಲಾಖೆಯು ಮೊಟ್ಟೆಗಾಗಿ 6 ರು. ನೀಡುತ್ತಿದ್ದು, ಮೊಟ್ಟೆದರ ಹೆಚ್ಚಳವಾಗಿದ್ದರೂ ಪರಿಷ್ಕರಣೆಗೆ ಅವಕಾಶವಿಲ್ಲ. ಈ ಹಿಂದೆ ಕಡಿಮೆ ದರಕ್ಕೆ ಮೊಟ್ಟೆ ಖರೀದಿಸಿದ್ದರೆ ಆ ಹಣದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಅಥವಾ ಎಸ್‌ಡಿಎಂಸಿ ಹಂತದಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಬೇಕು ಎಂದು ವಿವರಿಸಲಾಗಿದೆ.
Ballari Festival: ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್ ಹೊಡೆದ ಪುಂಡರು
ಅರೆಬೆಂದ ಮೊಟ್ಟೆ ನೀಡಬೇಡಿ: ಬಿಸಿಯೂಟ ವಿತರಿಸುವ ಶಾಲೆ ಹಂತದಲ್ಲೇ ಮೊಟ್ಟೆಬೇಯಿಸಿ ಕೊಡಬೇಕು. ಕೆಲವು ಕಡೆ ಅರೆಬೆಂದ ಮೊಟ್ಟೆನೀಡುತ್ತಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಎಚ್ಚೆತ್ತುಕೊಳ್ಳಬೇಕು. ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಿಸಿರುವ ಬಗ್ಗೆ ಸೂಕ್ತ ಲೆಕ್ಕ ನಿರ್ವಹಿಸಿ ಮೇಲ್ವಿಚಾರಣೆ ಮಾಡಬೇಕು. ಮಕ್ಕಳಲ್ಲಿರುವ ಅಪೌಷ್ಟಿಕತೆ ಹೋಗಲಾಡಿಸಲು ಜಾರಿಗೆ ತಂದಿರುವ ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.
ಸದೃಢ ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ನೀಡಿ: ಆರೋಗ್ಯವಂತ ಮಗು ಪಡೆಯಬೇಕಾದರೆ ಗರ್ಭ ಧರಿಸುವ ಮೊದಲ ಹಂತದಿಂದಲೇ ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ ಹೇಳಿದರು. ನಗರದ ವಿಜಯನಗರ ಬಡಾವಣೆಯ ಸ್ತ್ರೀ ಶಕ್ತಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಬಾಷ್ ಇಂಡಿಯಾ ಫೌಂಡೇಷನ್ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಗರ್ಭಿಣಿಯ ಸಂದರ್ಭದಲ್ಲಿ ಸ್ಥಳೀಯವಾಗಿ ದೊರೆಯುವ ಆಹಾರ ಉತ್ಪನ್ನಗಳಾದ ಹಸಿರು ಸೊಪ್ಪು ತರಕಾರಿ, ಕಾಳು, ಹಾಲು, ಮೊಟ್ಟೆ, ಮಾಂಸ ಇತ್ಯಾದಿಗಳನ್ನು ಸಮರ್ಪಕವಾಗಿ ಸೇವಿಸುವಂತೆ ಹಾಗೂ ಮಗು ಹುಟ್ಟಿದ ಒಂದು ಗಂಟೆಯೊಳಗೆ ಮತ್ತು ಮಗುವಿಗೆ 6 ತಿಂಗಳವರೆಗೆ ಸಮರ್ಪಕವಾಗಿ ಎದೆಹಾಲು ಕುಡಿಸಬೇಕು. 6 ತಿಂಗಳ ನಂತರ ಎದೆಹಾಲಿನ ಜೊತೆಗೆ ಪೂರಕ ಆಹಾರ ನೀಡಬೇಕು. ಕನಿಷ್ಠ ಪಕ್ಷ 2 ವರ್ಷದವರೆಗೆ ಮಗುವಿಗೆ ಹಾಲು ಕುಡಿಸುವಂತೆ ಮತ್ತು ಮಕ್ಕಳ ವೈಯಕ್ತಿಕ ಸ್ವಚ್ಛತೆ ಕುರಿತು ಅಂಗನವಾಡಿ ಕೇಂದ್ರಗಳಲ್ಲಿ ತಾಯಂದಿರಿಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷ ಜೆಡಿಎಸ್: ಸಿದ್ದರಾಮಯ್ಯ
ಅಂಗನವಾಡಿ ಕೇಂದ್ರದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ತಾಯಂದಿರಿಗೆ ಆರೋಗ್ಯವಂತ ಮಗುವಿನ ತಾಯಂದಿರಿಂದ ತಮ್ಮ ಮಗುವಿಗೆ ನೀಡುತ್ತಿರುವ ಆಹಾರ ಪದ್ಧತಿ ಬಗ್ಗೆ ಮಾಹಿತಿ ಕೊಡಿಸಬೇಕು ಹಾಗೂ ಅಪೌಷ್ಟಿಕ ಮಗುವಿಗೆ ಮನೆಯಲ್ಲಿ ಆರೋಗ್ಯವಂತ ಮಗುವಿನ ತಾಯಿ ನೀಡಿದ ಆಹಾರ ಪದ್ಧತಿಯನ್ನು ನೀಡುತ್ತಿರುವ ಬಗ್ಗೆ ಮನೆ ಭೇಟಿ ವೇಳೆಯಲ್ಲಿ ಮೇಲ್ವಿಚಾರಣೆ ಮಾಡಿ ಸೂಕ್ತ ಸಲಹೆ ನೀಡಬೇಕು. ಪೌಷ್ಟಿಕ ಆಹಾರ ಸೇವನೆಯಿಂದ ಸದೃಢ ಮಕ್ಕಳ ಬೆಳವಣಿಗೆ ಸಾಧ್ಯವೆಂದು ತಿಳಿಸಿದರು.