ರಾಜ್ಯೋತ್ಸವ ಪ್ರಶಸ್ತಿಗೆ ಈ ಸಲ ಜನರಿಂದಲೇ ಸಾಧಕರ ಹೆಸರು

By Kannadaprabha NewsFirst Published Sep 26, 2021, 8:58 AM IST
Highlights
  •  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಸಾರ್ವಜನಿಕರೇ ಅರ್ಹರ ಹೆಸರನ್ನು ಆನ್‌ಲೈನ್‌ ಮೂಲಕ ಶಿಫಾರಸು ಮಾಡಬಹುದು 
  • ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ಮಾಹಿತಿ

 ಬೆಂಗಳೂರು (ಸೆ.26):  ಕರ್ನಾಟಕ  ರಾಜ್ಯೋತ್ಸವ ಪ್ರಶಸ್ತಿಗೆ ( Karnataka Rajyotsava Award )ಈ ಬಾರಿ ಸಾರ್ವಜನಿಕರೇ ಅರ್ಹರ ಹೆಸರನ್ನು ಆನ್‌ಲೈನ್‌ ಮೂಲಕ ಶಿಫಾರಸು ಮಾಡಬಹುದು ಎಂದು ಕನ್ನಡ   ಮತ್ತು ಸಂಸ್ಕೃತಿ  (Kannada & Culture) ಸಚಿವ ವಿ.ಸುನಿಲ್‌ ಕುಮಾರ್‌  (Sunil kumar) ತಿಳಿಸಿದ್ದಾರೆ.

66ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಬರುವ ನವೆಂಬರ್‌ 1ರಂದು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದ್ದು, ಈ ವರ್ಷ 66 ಅರ್ಹ ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಬಾರಿಯ ವಿಶೇಷವೆಂದರೆ, ಸಾರ್ವಜನಿಕರೇ (publics) ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಗುರುತಿಸಿ ತಮ್ಮ ಮೊಬೈಲ್‌( mobile) ಅಥವಾ ಕಂಪ್ಯೂಟರ್‌ ಮೂಲಕ ಶಿಫಾರಸು ಮಾಡಬಹುದು.

ರಾಜ್ಯೋತ್ಸವ ಪ್ರಶಸ್ತಿಗಳಿಗೆ ಹೊಸ ಸ್ಪರ್ಶ : ಎಲೆಮರೆ ಸಾಧಕರ ಆಯ್ಕೆ

ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ (Seva Sindhu Portal) ನೀಡಲಾಗಿರುವ ವಿಶೇಷ ನಮೂನೆಯ ಅರ್ಜಿಯಲ್ಲಿ ಸಾಧಕರ ಹೆಸರು, ಊರು, ವಿಳಾಸ, ಸಂಪರ್ಕ ಸಂಖ್ಯೆ, ಸೇವಾ ಕ್ಷೇತ್ರ, ಸಾಧನೆ ಇತ್ಯಾದಿ ವಿವರಗಳನ್ನು ದಾಖಲಿಸಿ ಅಕ್ಟೋಬರ್‌ 15ರೊಳಗೆ ಶಿಫಾರಸು ಮಾಡಬಹುದು. ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ಮಾಡಲಾಗುತ್ತಿದ್ದು, ಇದು ಅತ್ಯಂತ ಪಾರದರ್ಶಕ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಒಬ್ಬ ಸಾರ್ವಜನಿಕ ಮೂವರು ಹೆಸರಗಳನ್ನು ಶಿಫಾರಸು ಮಾಡಲು ಅವಕಾಶವಿದೆ. ಇದರಿಂದ ರಾಜ್ಯದ ಯಾವುದೇ ಮೂಲೆಯಲ್ಲಿ ಎಲೆಮರೆ ಕಾಯಿಯಂತೆ ಗಮನಾರ್ಹ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಅವಕಾಶವಾಗಲಿದೆ. ಬರುವ ಶಿಫಾರಸುಗಳನ್ನು ತಜ್ಞರ ಸಮಿತಿ ಪರಿಶೀಲಿಸಿ ರಾಜ್ಯೋತ್ಸವ ಪ್ರಶಸ್ತಿಗೆ 66 ಸಾಧಕರನ್ನು ಅಂತಿಮಗೊಳಿಸಲಿದೆ. ಕ್ರೀಡೆ ಹೊರತುಪಡಿಸಿದರೆ ಉಳಿದ ಕ್ಷೇತ್ರಗಳ ಸಾಧಕರ ಶಿಫಾರಸಿಗೆ ಕನಿಷ್ಠ 60 ವರ್ಷ ಮೇಲ್ಪಟ್ಟವರಾಗಿರಬೇಕು ಎಂದು ಸಚಿವ ಸುನಿಲ್ ಕುಮಾರ್‌ ಹೇಳಿದ್ದಾರೆ.

ಎಲೆಮರೆ ಕಾಯಿಗೆ ಅವಕಾಶ

ರಾಜ್ಯೋತ್ಸವ ಪ್ರಶಸ್ತಿಗಳಿಗೆ ಹೊಸ ಸ್ಪರ್ಶ ನೀಡಲು ಯೋಜಿಸಿದ್ದೇನೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಎಲೆಮರೆಯ ಸಾಧಕರನ್ನು ಬದ್ಧತೆಯಿಂದ ಆಯ್ಕೆ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ. 

ರಾಜ್ಯೋತ್ಸವ ಪ್ರಶಸ್ತಿಗಳಿಗೆ ಸಂಪ್ರದಾಯದಂತೆ 60 ಮಂದಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯೂ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅದರ ಜೊತೆಗೆ ಒಂದು ಆಯ್ಕೆ ಸಮಿತಿಯನ್ನೂ ನೇಮಿಸಲಾಗುತ್ತದೆ. ಸಾರ್ವಜನಿಕರೂ ಪ್ರಶಸ್ತಿಗೆ ಅರ್ಹರನ್ನು ಸಮಿತಿಗೆ ಸೂಚಿಸಬಹುದು. ನಾನು ಬದ್ಧತೆಯಿಂದ ಕೆಲಸ ಮಾಡುವವನು, ಪ್ರಶಸ್ತಿಗಳ ಆಯ್ಕೆಯೂ ಅದೇ ರೀತಿ ನಡೆಯುತ್ತದೆ ಎಂದಿದ್ದಾರೆ.

click me!