
ಶಿವಮೊಗ್ಗ (ಜ.22): ರಾಜ್ಯಪಾಲರ ಭಾಷಣದ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಉಂಟಾಗಿರುವ ಸಂಘರ್ಷದ ಕುರಿತು ಮಾಜಿ ಸಚಿವ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕರ ನಡೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತದ್ದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದ ಕಾರಜೋಳ ಅವರು, ನಿಮ್ಮ ಟೀಕೆ ಟಿಪ್ಪಣಿಗಳನ್ನು ಹೇಳಲು ವಿಧಾನಸಭೆ ಇದೆ, ಹೊರಗಡೆಯೂ ಮುಕ್ತ ಅವಕಾಶವಿದೆ. ಆದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಭಾಷಣವನ್ನು ಬರೆದುಕೊಟ್ಟು, ಅದನ್ನು ರಾಜ್ಯಪಾಲರ ಬಾಯಲ್ಲಿ ಹೇಳಿಸಲು ಹೊರಟಿರುವುದು ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ ಸರ್ಕಾರದ ನಡೆ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಬರೆದುಕೊಟ್ಟಿದ್ದ ಭಾಷಣದ ಪ್ರತಿಯಲ್ಲಿ 11 ಪ್ಯಾರಾಗಳನ್ನು ಬದಲಾವಣೆ ಮಾಡಲು ರಾಜ್ಯಪಾಲರು ಸೂಚಿಸಿದ್ದರು. ಆದರೆ ಸರ್ಕಾರ ಮೊಂಡುತನ ಪ್ರದರ್ಶಿಸಿ ಅದನ್ನು ಸರಿಪಡಿಸಿರಲಿಲ್ಲ. ರಾಜ್ಯಪಾಲರು ಸಂವಿಧಾನದ ಆಶಯಗಳನ್ನು ಪೂರೈಸುವ ಕೆಲಸ ಮಾಡಿದ್ದಾರೆ. ಅವರು ಅಧಿವೇಶನವನ್ನು ಬಹಿಷ್ಕರಿಸಲಿಲ್ಲ, ಬದಲಿಗೆ ಎಲ್ಲರಿಗೂ ವಂದಿಸಿ ಗೌರವಯುತವಾಗಿ ತೆರಳಿದ್ದಾರೆ. ಇದರಲ್ಲಿ ರಾಜ್ಯಪಾಲರ ತಪ್ಪು ಏನೂ ಇಲ್ಲ ಎಂದು ಕಾರಜೋಳ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದ ಹೆಸರಿನ ರಾಜಕಾರಣವನ್ನು ಟೀಕಿಸಿದ ಅವರು, ಕರ್ನಾಟಕದಲ್ಲಿ 25 ಯೋಜನೆಗಳಿಗೆ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹೆಸರನ್ನು ಇಟ್ಟಿದ್ದಾರೆ. ಆದರೆ ಯಾರು ಕೂಡ ಮಹಾತ್ಮ ಗಾಂಧೀಜಿ ಹೆಸರನ್ನು ಇಟ್ಟಿಲ್ಲ. ಜವಹಾರ್ ರೋಜ್ಗಾರ್ ಯೋಜನೆಗೆ ನಂತರ ಗಾಂಧಿ ಹೆಸರು ಸೇರಿಸಲಾಯಿತು. ಇದಕ್ಕೆ ಸಿದ್ದರಾಮಯ್ಯ ಅಥವಾ ರಾಹುಲ್ ಗಾಂಧಿ ಉತ್ತರ ನೀಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ನೆಹರು ಕಾಲದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದ ಸಬರಮತಿ ಆಶ್ರಮವನ್ನು ನರೇಂದ್ರ ಮೋದಿ ಅವರು ಅಭಿವೃದ್ಧಿಪಡಿಸಿ ಐತಿಹಾಸಿಕ ಪ್ರವಾಸಿ ಕೇಂದ್ರವನ್ನಾಗಿ ಮಾಡಿದ್ದಾರೆ ಎಂದಿದ್ದಾರೆ.
40% ಆರೋಪ ಮಾಡಿದ್ದವರೇ ಈಗ 60% ಪತ್ರ ಕೊಟ್ಟಿದ್ದಾರೆ!
ಹಿಂದಿನ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಬಗ್ಗೆ ಮಾತನಾಡಿದ ಕಾರಜೋಳ, ಅಂದು ಆರೋಪ ಮಾಡಿದ್ದ ಅದೇ ಗುತ್ತಿಗೆದಾರರು ಇಂದು ಕಾಂಗ್ರೆಸ್ ಸರ್ಕಾರದಲ್ಲಿ 60% ಕಮಿಷನ್ ನಡೆಯುತ್ತಿದೆ ಎಂದು ಪತ್ರ ಕೊಟ್ಟಿದ್ದಾರೆ. ಕಾಂಗ್ರೆಸ್‌ನವರು ಸುಳ್ಳನ್ನು ಸತ್ಯ ಮಾಡಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಶಾಸಕರ ಸದಸ್ಯತ್ವ ರದ್ದುಪಡಿಸಲು ಆಗ್ರಹ
ರಾಜ್ಯಪಾಲರನ್ನು ತಡೆಯುವ ಮತ್ತು ಅವಮಾನಿಸುವ ಕೆಲಸ ಅಕ್ಷಮ್ಯ ಅಪರಾಧ ಎಂದು ಬಣ್ಣಿಸಿದ ಅವರು, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುವ ರಾಜ್ಯಪಾಲರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು. ರಾಜ್ಯಪಾಲರ ಹಾದಿ ತಡೆದ ಶಾಸಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರ ಶಾಸಕ ಸ್ಥಾನದ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಕಾರಜೋಳ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ