ಡ್ರೈವಿಂಗ್ ಲೈಸನ್ಸ್ ಪಡೆಯೋಕೆ ಕಳ್ಳಾಟ ಆಡೋರಿಗೆ ಬ್ರೇಕ್, ಇನ್ಮುಂದೆ ಸೆನ್ಸಾರ್ ಆಧಾರಿತ ಚಾಲನಾ ಪರೀಕ್ಷೆ ಕಡ್ಡಾಯ!

Published : Jan 22, 2026, 04:39 PM IST
Driving Test

ಸಾರಾಂಶ

ರಾಜ್ಯದಲ್ಲಿ ಇನ್ನು ಮುಂದೆ ಚಾಲನಾ ಪರವಾನಗಿ ಪರೀಕ್ಷೆಗಳು ಸಂಪೂರ್ಣವಾಗಿ ಸೆನ್ಸಾರ್ ಆಧಾರಿತವಾಗಿರಲಿವೆ.   ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ತಂತ್ರಜ್ಞಾನ ಆಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಪರವಾನಗಿ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ (ಮೂಡಲಗಿ): ವಾಹನ ಚಾಲನಾ ಪರವಾನಗಿ ಪಡೆಯಲು ಇನ್ನು ಮುಂದೆ ಮ್ಯಾನ್ಯುಯೆಲ್ (ಮಾನವೀಯ ಹಸ್ತಕ್ಷೇಪದ) ಪರೀಕ್ಷಾ ವ್ಯವಸ್ಥೆ ಇರುವುದಿಲ್ಲ. ಬದಲಾಗಿ, ರಾಜ್ಯದ ಎಲ್ಲ ಚಾಲನಾ ಪಥಗಳಲ್ಲಿ ಸಂಪೂರ್ಣವಾಗಿ ಸೆನ್ಸಾರ್ ಆಧಾರಿತ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು, ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಚಾಲನಾ ಪರವಾನಗಿ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮೂಡಲಗಿ ತಾಲೂಕಿನ ಅರಭಾವಿಯಲ್ಲಿ ಮಂಗಳವಾರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ARTO) ಕಚೇರಿಯ ನೂತನ ಕಟ್ಟಡ ಹಾಗೂ ಆಧುನಿಕ ಚಾಲನಾ ಪಥವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಾಲನಾ ಪರೀಕ್ಷೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ವ್ಯವಸ್ಥೆ ಜಾರಿಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅಧಿಕಾರಿಗಳ ಹಸ್ತಕ್ಷೇಪಕ್ಕೆ ಇನ್ನು ಅವಕಾಶವಿಲ್ಲ

“ಹಿಂದೆ ಚಾಲನಾ ಪರೀಕ್ಷೆಯಲ್ಲಿ ಮ್ಯಾನ್ಯುಯೆಲ್ ವ್ಯವಸ್ಥೆ ಇತ್ತು. ಕೆಲವೊಮ್ಮೆ ಅಧಿಕಾರಿಗಳೇ ಪರೀಕ್ಷಾ ಪಥದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು. ಇನ್ನು ಮುಂದೆ ಅದು ಸಾಧ್ಯವಿಲ್ಲ. ಎಲ್ಲ ಚಾಲನಾ ಪಥಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗಿದ್ದು, ಅಭ್ಯರ್ಥಿಯ ಚಾಲನಾ ಕೌಶಲ್ಯವನ್ನು ತಂತ್ರಜ್ಞಾನವೇ ಮೌಲ್ಯಮಾಪನ ಮಾಡಲಿದೆ. ನಿಯಮಾನುಸಾರವಾಗಿ ಉತ್ತಮವಾಗಿ ವಾಹನ ಚಾಲನೆ ಮಾಡಿದರೆ ಮಾತ್ರ ಅಭ್ಯರ್ಥಿ ಪಾಸ್ ಆಗುತ್ತಾರೆ. ಇಲ್ಲವಾದರೆ ನಿಷ್ಪಕ್ಷಪಾತವಾಗಿ ಫೇಲ್ ಆಗುತ್ತಾರೆ” ಎಂದು ಸಚಿವರು ಸ್ಪಷ್ಟಪಡಿಸಿದರು.

ಬಹುಕಾಲದ ಬೇಡಿಕೆ ಈಡೇರಿಕೆ

ಈ ಭಾಗದ ವಾಹನ ಸವಾರರ ಬಹುಕಾಲದ ಬೇಡಿಕೆಯಾದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಚಾಲನಾ ಪಥ ನಿರ್ಮಾಣ ಈಗ ಸಾಕಾರಗೊಂಡಿದೆ ಎಂದು ಸಚಿವರು ಹೇಳಿದರು. ಈ ಯೋಜನೆ ಅನುಷ್ಠಾನಕ್ಕೆ ಜಾರಕಿಹೊಳಿ ಸಹೋದರರ ಶ್ರಮ ಶ್ಲಾಘನೀಯವಾಗಿದ್ದು, ಸಾರ್ವಜನಿಕ ಸೇವೆಗೆ ಇದು ದೊಡ್ಡ ಕೊಡುಗೆ ಎಂದು ಪ್ರಶಂಸಿಸಿದರು.

ಒಂದೇ ಕಡೆ ಕಚೇರಿ ಹಾಗೂ ಚಾಲನಾ ಪಥ – ಅಪರೂಪದ ಸೌಲಭ್ಯ

ಬೆಮುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, “ಸಾರಿಗೆ ಇಲಾಖೆ ಕಚೇರಿ ಮತ್ತು ಚಾಲನಾ ಪರೀಕ್ಷಾ ಪಥ ಒಂದೇ ಸ್ಥಳದಲ್ಲಿ ಲಭ್ಯವಿರುವಂತೆ ನಿರ್ಮಿಸಿರುವುದು ಸಾರ್ವಜನಿಕರಿಗೆ ಬಹಳ ಅನುಕೂಲವಾಗಿದೆ. ಈ ಸೌಲಭ್ಯವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಹೇಳಿದರು.

ಅರಭಾವಿಯಲ್ಲಿ ಸುಮಾರು 9 ಎಕರೆ ಜಮೀನಿನಲ್ಲಿ ₹10 ಕೋಟಿ ವೆಚ್ಚದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಮತ್ತು ಆಧುನಿಕ ಚಾಲನಾ ಪಥ ನಿರ್ಮಾಣಗೊಂಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಚೇರಿ ಹಾಗೂ ಚಾಲನಾ ಪಥ ಒಂದೇ ಕಡೆ ಇರುವ ವ್ಯವಸ್ಥೆ ಅಪರೂಪವಾಗಿದ್ದು, ನಮ್ಮ ಕ್ಷೇತ್ರದಲ್ಲಿ ಇದು ಸಾಧ್ಯವಾಗಿರುವುದು ಸಂತೋಷದ ಸಂಗತಿ ಎಂದು ಶಾಸಕರು ಹೇಳಿದರು.

ಅರಭಾವಿಯ ಅಭಿವೃದ್ಧಿ ಪಥದಲ್ಲಿ ಹೊಸ ಹೆಜ್ಜೆ

“ಒಮ್ಮೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದ್ದ ಅರಭಾವಿ ಇಂದು ಪಟ್ಟಣ ಪಂಚಾಯತಿಯಾಗಿ ಬೆಳೆಯುತ್ತಿದೆ. ಕಾಲೇಜುಗಳು, ಮೊರಾರ್ಜಿ ದೇಸಾಯಿ ಶಾಲೆ, ಈಗ ಆರ್‌ಟಿಒ ಕಚೇರಿಯೂ ಆರಂಭವಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು” ಎಂದು ಬಾಲಚಂದ್ರ ಜಾರಕಿಹೊಳಿ ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಕೊಡುಗೆಯನ್ನು ಸ್ಮರಿಸಿದ ಅವರು, “ಈ ಜಾಗಕ್ಕಾಗಿ ತಹಶೀಲ್ದಾರ್‌ಗೆ ಸೂಚನೆ ನೀಡಿ ಇಲ್ಲೇ ಕಚೇರಿ ನಿರ್ಮಾಣವಾಗಬೇಕು ಎಂದು ಸಚಿವರು ನಿರ್ಧರಿಸಿದ್ದರು. ಜೊತೆಗೆ ಅರಭಾವಿಯಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೂ ಪ್ರಸ್ತಾವನೆ ಇಡಲಾಗಿದೆ. ಇದಕ್ಕಾಗಿ ಇನ್ನೂ 5 ಎಕರೆ ಜಮೀನು ಒದಗಿಸುವಂತೆ ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಗೋಕಾಕ ಶಿಕ್ಷಣ ಹಬ್ಬವಾಗಬೇಕು” ಎಂದು ಹೇಳಿದರು.

ಗಣ್ಯರ ಉಪಸ್ಥಿತಿ

ಈ ಕಾರ್ಯಕ್ರಮದಲ್ಲಿ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಅರಭಾವಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ರೇಣುಕಾ ಮಾದರ, ಧಾರವಾಡ ಅಪರ್ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ, ಬೆಳಗಾವಿ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕರ್ ಕುಲಕರ್ಣಿ, ಹುಬ್ಬಳ್ಳಿ ಮುಖ್ಯ ಕಾಮಗಾರಿ ಅಭಿಯಂತರ ಸೋಮಣ್ಣ ಅಂಗಡಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

“ಹೆವಿ ವೆಹಿಕಲ್ ಚಾಲನಾ ಪಥಕ್ಕಾಗಿ 3 ಎಕರೆ ಜಮೀನು ಒದಗಿಸಿದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಅರಭಾವಿ ಪಟ್ಟಣದ ಸಮೀಪ ಈ ಕಚೇರಿ ಮತ್ತು ಚಾಲನಾ ಪಥ ನಿರ್ಮಾಣ ಸಾಧ್ಯವಾಗಿದೆ. ಇದರಿಂದ ಈ ಭಾಗದ ಮೂರು ತಾಲೂಕುಗಳ ಜನತೆಗೆ ಅಪಾರ ಅನುಕೂಲವಾಗಿದೆ. ರಾಜ್ಯದಲ್ಲಿ ಒಟ್ಟು 45 ಆರ್‌ಟಿಒ ಕಚೇರಿ ಹಾಗೂ ಚಾಲನಾ ಪರೀಕ್ಷಾ ಕೇಂದ್ರಗಳಿದ್ದು, ಈಗಾಗಲೇ 10 ಆರಂಭಗೊಂಡಿವೆ. ಉಳಿದ 35 ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.”

-ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಬಿಗ್ ರಿಲೀಫ್: 'ಬಲವಂತದ ಕ್ರಮ'ಕ್ಕೆ ಹೈಕೋರ್ಟ್ ಬ್ರೇಕ್! ಏನಿದು ಪ್ರಕರಣ?
ವಿಶ್ವದ ಟ್ರಾಫಿಕ್ ಕಿರಿಕಿರಿ ನಗರಗಳ ಪಟ್ಟಿ ಪ್ರಕಟ, ಬೆಂಗಳೂರಿಗೆ ಎಷ್ಟನೇ ಸ್ಥಾನ?