
ಬೆಂಗಳೂರು(ಸೆ.20): ಅರಣ್ಯ ಸಮೀಪ ಇರುವ ಜಮೀನಿನಲ್ಲಿನ ಬೆಳೆಯ ಸಂರಕ್ಷಣೆಗೆ ತಂತಿ ಬೇಲಿ ಅಳವಡಿಸಿದ್ದಲ್ಲಿ, ಅರಣ್ಯ ಮತ್ತು ವಿದ್ಯುತ್ ಇಲಾಖೆಯ ಅಧಿಕಾರಿಗಳು ಆಗಾಗ ಜಮೀನಿಗೆ ಭೇಟಿ ನೀಡಿ ತಂತಿ ಬೇಲಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವ ಮೂಲಕ ವಿದ್ಯುತ್ ಸ್ಪರ್ಶದಿಂದ ವನ್ಯಜೀವಿಗಳು ಸಾವಿಗೀಡಾಗುವುದನ್ನು ತಪ್ಪಿಸಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ.
ಮೈಸೂರಿನ ಎಚ್.ಡಿ.ಕೋಟೆಯ ಮಲಿಯೂರ್ ಅರಣ್ಯ ವ್ಯಾಪ್ತಿಯಲ್ಲಿ ಕೃಷಿ ಜಮೀನಿನ ಸುತ್ತಲಿನ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ಆಹಾರ ಅರಸಿ ಬಂದ ಹೆಣ್ಣಾನೆಯೊಂದು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಪ್ರಕರಣ ಸಂಬಂಧ ನೀಡಿದ ತೀರ್ಪಿನಲ್ಲಿ ಹೈಕೋರ್ಟ್ ಈ ಸಲಹೆ ನೀಡಿದೆ.
ಬೆಳೆಯನ್ನು ವನ್ಯಜೀವಿಗಳಿಂದ ರಕ್ಷಣೆ ಮಾಡಲು ರೈತರು ಜಮೀನಿಗೆ ತಂತಿ ಬೇಲಿ ಅಳವಡಿಸುವುದು ಸಾಮಾನ್ಯ. ಬೆಳೆ ಸಂರಕ್ಷಿಸಲು ಬೇಲಿ ಹಾಕಿದಾಗ, ಸರ್ಕಾರದ ಸ್ವತ್ತಾಗಿರುವ ವನ್ಯ ಜೀವಿಗಳ ರಕ್ಷಣೆ ಬಗ್ಗೆ ಸಹ ರೈತರು ಗಮನ ಹರಿಸಬೇಕಾಗುತ್ತದೆ. ಅರಣ್ಯ ಹತ್ತಿರದ ಜಮೀನು ಹಾಗೂ ವಾಸದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದಾಗ ವಿದ್ಯುತ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಜಮೀನಿನ ಬೆಳೆಯನ್ನು ವನ್ಯ ಜೀವಿಗಳಿಂದ ಸಂರಕ್ಷಣೆ ಮಾಡಿಕೊಳ್ಳಲು ರೈತರು ತಂತಿಬೇಲಿ ಅಳವಡಿಸಿದ್ದಾರೆಯೇ? ಅದಕ್ಕೆ ವಿದ್ಯುತ್ ಸಂಪರ್ಕವನ್ನೇನಾದರೂ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಅರಣ್ಯ ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳು ಜಮೀನಿಗೆ ಪದೇ ಪದೇ ಭೇಟಿ ನೀಡಬೇಕು. ಅನಧಿಕೃತವಾಗಿ ತಂತಿಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೆ ತೆರವುಗೊಳಿಸುವ ಮೂಲಕ ವನ್ಯಜೀವಿಗಳ ಪ್ರಾಣ ಕಾಪಾಡಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಂತಾರಾಷ್ಟ್ರೀಯ ಹುಲಿ ದಿನ: ವನ್ಯಜೀವಿ ಪ್ರೇಮಿಗಳಿಗೆ ಶುಭ ಕೋರಿದ ಪ್ರಧಾನಿ!
ಪ್ರಕರಣದ ಹಿನ್ನೆಲೆ:
ಮೈಸೂರಿನ ಎಚ್.ಡಿ. ಕೋಟೆ ತಾಲೂಕಿನ ಮಲಿಯೂರ್ ಅರಣ್ಯ ವಲಯ ವ್ಯಾಪ್ತಿಯ ರಾಜು ಎಂಬುವರ ಜಮೀನಿನಲ್ಲಿ 2007ರ ಡಿ.4ರಂದು ರಾತ್ರಿ 18-20 ವರ್ಷದ ಹೆಣ್ಣಾನೆಯೊಂದು ಸತ್ತು ಬಿದ್ದಿತ್ತು. ಬೆಳೆದಿದ್ದ ರಾಗಿ ರಕ್ಷಿಸಲು ರಾಜು ತಮ್ಮ ಜಮೀನು ಸುತ್ತಲೂ ಮರದ ಕಂಬಗಳನ್ನು ನೆಟ್ಟು ತಂತಿಬೇಲಿ ಅಳವಡಿಸಿದ್ದರು. 2007ರ ಡಿ.3ರಂದು ರಾತ್ರಿ ವೇಳೆಯಲ್ಲಿ ತಂತಿಬೇಲಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು. ಆಹಾರ ಅರಸಿ ರಾಜು ಜಮೀನು ಬಳಿಗೆ ಬಂದ ಆನೆ, ತಂತಿಬೇಲಿಯಿಂದ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿತ್ತು ಎನ್ನಲಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜು ವಿರುದ್ಧ ದೂರು ದಾಖಲಿಸಿದ್ದ ಸರಗೂರು ಠಾಣಾ ಪೊಲೀಸರು, ದೋಷಾರೋಪ ಸಲ್ಲಿಸುವಾಗ ರಾಜುವನ್ನು ಪ್ರಕರಣದಿಂದ ಕೈಬಿಟ್ಟು ಪಕ್ಕದ ಜಮೀನಿನ ಮಾಲೀಕ ಪ್ರಭ ಎಂಬುವವರನ್ನು ಆರೋಪಿ ಮಾಡಿದ್ದರು. ರಾಜು ಜಮೀನಿನಿಂದ 27 ಅಡಿ ದೂರದಲ್ಲಿ ಪ್ರಭ ಜಮೀನು ಮತ್ತು ಮನೆ ಇದೆ. ಜಮೀನಿನಲ್ಲಿ ಬೆಳೆದಿದ್ದ ರಾಗಿ ರಕ್ಷಿಸಲು ಮನೆಯ ಸ್ವಿಚ್ ಬೋರ್ಡ್‌ನಿಂದ ಜಮೀನು ಸುತ್ತ ಅಳವಡಿಸಿದ್ದ ತಂತಿಬೇಲಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು. ಆಹಾರ ಅರಸಿ ಬಂದ ಆನೆ ತಂತಿಬೇಲಿಯಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಸಾವನ್ನಪ್ಪಿತ್ತು ಎಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಮೈಸೂರಿನ 1ನೇ ಹೆಚ್ಚುವರಿ ಸೆಷನ್ಸ್ ಹಾಗೂ ವಿಶೇಷ ನ್ಯಾಯಾಲಯ ಪ್ರಭಗೆ ಶಿಕ್ಷೆ ವಿಧಿಸಿತ್ತು. ಈ ಆದೇಶ ರದ್ದುಪಡಿಸಲು ಕೋರಿ ಪ್ರಭ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಪ್ರಭ ವಿರುದ್ಧ ಆರೋಪಗಳನ್ನು ಸಾಕ್ಷ್ಯಾಧಾರ ಸಮೇತ ಸಾಬೀತುಪಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ತೀರ್ಮಾನಿಸಿದ ಹೈಕೋರ್ಟ್, ಆರೋಪಿಯನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ