
ಬೆಂಗಳೂರು (ಸೆ.20): ಸಾರಿಗೆ ಮುಷ್ಕರದ ವೇಳೆಯಲ್ಲಿ ಸೇವೆಯಿಂದ ವಜಾಗೊಳಿಸಿರುವ ನೌಕರರ ಪುನರ್ ನೇಮಕ, ವರ್ಗಾವಣೆ, ಅಮಾನತು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಸಿಐಟಿಯು ಸಂಯೋಜಿತ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ ನೇತೃತ್ವದಲ್ಲಿಇಂದು ನಗರದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಸುಮಾರು 200-300 ಮಂದಿ ಸಾರಿಗೆ ನೌಕರರು ಭಾಗವಹಿಸಲಿದ್ದಾರೆ. ಧರಣಿ ನಡುವೆಯೂ ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯವಾಗುವುದಿಲ್ಲ. ಕೇವಲ ಸಾಂಕೇತಿಕವಾಗಿ ಪ್ರತಿಭಟನೆ ಮಾಡುವುದರಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬಸ್ ಸೇವೆ ಎಂದಿನಂತೆ ಇರಲಿದೆ.
ಸಾರಿಗೆ ನೌಕರರ ವಿರುದ್ಧ ಕೆಎಸ್‌ಆರ್‌ಟಿಸಿ ಕೇಸ್
ಸಾರಿಗೆ ನಿಗಮಗಳ ಬಸ್ ಘಟಕಗಳಲ್ಲಿ ನೌಕರರಿಗೆ ಕಾರ್ಯದೊತ್ತಡ ಹಾಗೂ ಅಧಿಕಾರಿಗಳ ದಬ್ಬಾಳಿಕೆ ಹೆಚ್ಚಾಗಿದೆ. ವೇತನ ತಾರತಮ್ಯ, ಕಿರುಕುಳದಿಂದ ಬೇಸತ್ತು ಕಳೆದ ಡಿಸೆಂಬರ್ ಹಾಗೂ ಏಪ್ರಿಲ್‌ನಲ್ಲಿ ಸಾರಿಗೆ ಮುಷ್ಕರ ಮಾಡಲಾಗಿತ್ತು. ಇದೀಗ ಮುಷ್ಕರದ ಹೆಸರಿನಲ್ಲಿ ಆಡಳಿತ ಮಂಡಳಿಗಳು ನೌಕರರಿಗೆ ಕಿರುಕುಳ ನೀಡುತ್ತಿವೆ. ಮುಷ್ಕರದಲ್ಲಿ ಭಾಗವಹಿಸಿದ್ದ ಆರೋಪದಡಿ ನಾಲ್ಕು ಸಾರಿಗೆ ನಿಗಮಗಳಲ್ಲಿ ಸಾವಿರಾರು ನೌಕರರನ್ನು ವಜಾ, ವರ್ಗಾವಣೆ, ಅಮಾನತು ಮಾಡಲಾಗಿದೆ. ಕೂಡಲೇ ಈ ಎಲ್ಲ ನೌಕರರನ್ನು ಸೇವೆಗೆ ಪುನರ್ ನೇಮಿಸಿಕೊಳ್ಳಬೇಕು. ಈ ಸಂಬಂಧ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸಾಂಕೇತಿಕ ಧರಣೆ ಹಮ್ಮಿಕೊಳ್ಳಲಾಗಿದೆ ಎಂದು ಫೆಡರೇಶನ್ ಅಧ್ಯಕ್ಷ ಎಚ್.ಡಿ.ರೇವಪ್ಪ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ