ಕರ್ನಾಟಕದಲ್ಲಿ ಅನರ್ಹರ ‘ಪಿಂಚಣಿ’ಗೆ ಸರ್ಕಾರದ ಕೊಕ್‌..!

By Kannadaprabha News  |  First Published Aug 20, 2023, 2:00 AM IST

ನಕಲಿ ದಾಖಲೆ, ಸೂಕ್ತ ದಾಖಲೆ ಇಲ್ಲದ, ಖಾತೆಗೆ ಆಧಾರ್‌ ಜೋಡಿಸದವರ ಪಿಂಚಣಿ ರದ್ದು, ಅನರ್ಹ ಪಿಂಚಣಿದಾರರಿಂದ 3 ಕೋಟಿ ರುಪಾಯಿಗೂ ಅಧಿಕ ಮೊತ್ತ ವಸೂಲಿ. 


ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಆ.20): ಸಾಮಾಜಿಕ ಭದ್ರತಾ ಯೋಜನೆಗಳಡಿ ರಾಜ್ಯದಲ್ಲಿ 75 ಲಕ್ಷಕ್ಕೂ ಅಧಿಕ ಮಂದಿ ಪಿಂಚಣಿ ಪಡೆಯುತ್ತಿದ್ದು ಇದರಲ್ಲಿ ಒಂದು ಲಕ್ಷಕ್ಕೂ ಅಧಿಕ ಅನರ್ಹರನ್ನು ಪತ್ತೆ ಹಚ್ಚಿ ಪಾವತಿಯಾಗುತ್ತಿದ್ದ ಹಣಕ್ಕೆ ಕಂದಾಯ ಇಲಾಖೆ ಬ್ರೇಕ್‌ ಹಾಕಿದೆ.

Tap to resize

Latest Videos

undefined

ನಕಲಿ ಫಲಾನುಭವಿಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ವಲಸೆ, ಅನರ್ಹ ಫಲಾನುಭವಿಗಳನ್ನು ಗುರುತಿಸಲು ನವೋದಯ ಮೊಬೈಲ್‌ ಆಧಾರಿತ ಸಮಗ್ರ ವಾರ್ಷಿಕ ಪರಿಶೀಲನಾ ಕಾರ್ಯ ಕೈಗೊಂಡು 83,565 ಮಂದಿಯ ಪಿಂಚಣಿ ಸ್ಥಗಿತಗೊಳಿಸಲಾಗಿದೆ. ಮತ್ತೊಂದೆಡೆ ಆಧಾರ್‌ ಜೋಡಣೆಯಲ್ಲಿ ವಿಫಲರಾದ 35,204 ಅನರ್ಹರಿಗೂ ಹಣ ಪಾವತಿಸುವುದನ್ನು ನಿಲ್ಲಿಸಲಾಗಿದೆ.

ಗಂಟೆಯೊಳಗೆ ವೃದ್ಧಾಪ್ಯ ವೇತನ ಮಂಜೂರು: ವೃದ್ಧ ದಂಪತಿಗಳ ಬದುಕಿಗೆ ಆಸರೆಯಾದ ಜಿಲ್ಲಾಧಿಕಾರಿ

ಅನರ್ಹರೂ ಪಿಂಚಣಿ ಪಡೆಯುತ್ತಿದ್ದಾರೆ ಎಂಬ ದೂರು ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್‌ನಿಂದ ಈಚೆಗೆ ಕಂದಾಯ ಇಲಾಖೆಯು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಅನರ್ಹರ ಪಿಂಚಣಿಯನ್ನು ಸ್ಥಗಿತಗೊಳಿಸಿದೆ. 53,524 ಪ್ರಕರಣದಲ್ಲಿ ಪಿಂಚಣಿ ಪಡೆಯುತ್ತಿದ್ದವರು ಮೂಲ ಸ್ಥಾನದಲ್ಲಿ ಇರದೇ ವಲಸೆ ಹೋಗಿದ್ದು ಸಮರ್ಪಕ ದಾಖಲೆ ಇಲ್ಲದಿದ್ದರಿಂದ ಇವರಿಗೆ ಪಾವತಿಯಾಗುತ್ತಿದ್ದ ಹಣವನ್ನೂ ನಿಲ್ಲಿಸಲಾಗಿದೆ.

ಇದಷ್ಟೇ ಅಲ್ಲದೇ, ಫಲಾನುಭವಿಗಳ ಬ್ಯಾಂಕ್‌, ಅಂಚೆ ಕಚೇರಿ ಖಾತೆಗೆ ನೇರ ಹಣ ಸಂದಾಯವಾಗಬೇಕಾದರೆ ಆಧಾರ್‌ ಜೋಡಣೆಗೆ ಬಾಕಿ ಇದ್ದ 1,45,992 ಜನರ ಪಿಂಚಣಿಯನ್ನು ತಡೆ ಹಿಡಿಯಲಾಗಿತ್ತು. ಇದರಲ್ಲಿ ದಾಖಲೆ ಸಲ್ಲಿಸಿದವರ 72,349 ಪ್ರಕರಣಗಳನ್ನು ಸಕ್ರಿಯಗೊಳಿಸಿದ್ದು 38,439 ಜನರ ಪಿಂಚಣಿ ಅಮಾನತಿನಲ್ಲಿ ಇಡಲಾಗಿದೆ. 35,204 ಜನರಿಗೆ ನೀಡುತ್ತಿದ್ದ ಪಿಂಚಣಿಯನ್ನು ರದ್ದು ಮಾಡಲಾಗಿದೆ. ಅನರ್ಹರಿಗೆ ಪಾವತಿಯಾಗಿದ್ದ ಹಣದಲ್ಲಿ ಮೂರು ಕೋಟಿ ರುಪಾಯಿಗೂ ಅಧಿಕ ಹಣವನ್ನು ವಾಪಸ್‌ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೃದ್ದಾಪ್ಯ ಪಿಂಚಣಿ ಯೋಜನೆ, ವಿಧವಾ ಪಿಂಚಣಿ, ವಿಕಲಚೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ಆ್ಯಸಿಡ್‌ ದಾಳಿಗೆ ಒಳಗಾದವರು, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ, ಎಂಡೋಸಲ್ಫಾನ್‌ ಸಂತ್ರಸ್ತರು ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ರಾಜ್ಯದಲ್ಲಿ 75 ಲಕ್ಷಕ್ಕೂ ಅಧಿಕ ಫಲಾನುಭವಿಗಳಿದ್ದಾರೆ.

ಮೃತ ಸ್ವಾತಂತ್ರ್ಯಯೋಧನ ಪತ್ನಿ ಪಿಂಚಣಿಗೆ ಅರ್ಹರಲ್ಲ: ಕರ್ನಾಟಕ ಹೈಕೋರ್ಟ್‌

ಎರಡೆರಡು ಪಿಂಚಣಿ

ಎರಡೆರಡು ಪಿಂಚಣಿ ಪಡೆದು ಸರ್ಕಾರದ ಸೌಲಭ್ಯ ದುರ್ಬಳಕೆ ಮಾಡಿಕೊಂಡವರೂ ಪರಿಶೀಲನೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ವೃದ್ಧಾಪ್ಯ ವೇತನ(ಮಾಸಿಕ 600 ರು.) ಪಡೆಯಬೇಕೆಂದರೆ 60 ವರ್ಷ ಪೂರ್ಣಗೊಳ್ಳಬೇಕು. ಸಂಧ್ಯಾ ಸುರಕ್ಷಾ ಯೋಜನೆ (ಮಾಸಿಕ 1200 ರು.)ಗೆ 65 ವರ್ಷ ಪೂರ್ಣಗೊಂಡಿರಬೇಕು. ಆದರೆ ಕೆಲವರು 60 ವರ್ಷವಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿಕೊಂಡು ವಯಸ್ಸಾಗದಿದ್ದರೂ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಮತ್ತೆ ಕೆಲವರು ವೃದ್ಧಾಪ್ಯ ವೇತನದ ಜೊತೆಗೆ ಸಂಧ್ಯಾ ಸುರಕ್ಷಾ ಯೋಜನೆಯ ಹಣವನ್ನೂ ಪಡೆಯುತ್ತಿದ್ದರು. ಇಂತಹ ಅನರ್ಹರಿಗೆ ಪಾವತಿಯಾಗುತ್ತಿದ್ದ 30,041 ಪ್ರಕರಣಗಳಲ್ಲಿ ಪಿಂಚಣಿ ಸ್ಥಗಿತ ಮಾಡಲಾಗಿದೆ.

ನಕಲಿ ಪಿಂಚಣಿದಾರರನ್ನು ಪತ್ತೆ ಹಚ್ಚಲು ವಿಶೇಷ ಅಭಿಯಾನ ನಡೆಸಲಾಗಿದ್ದು ಎರಡೆರಡು ಪಿಂಚಣಿ ಪಡೆಯುತ್ತಿದ್ದವರು, ವಯಸ್ಸಿನ ಬಗ್ಗೆ ನಕಲಿ ದಾಖಲೆ ನೀಡಿ ಪಿಂಚಣಿ ಪಡೆಯುತ್ತಿದ್ದವರನ್ನು ಪತ್ತೆ ಹಚ್ಚಿ ಹಣ ಪಾವತಿ ನಿಲ್ಲಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್‌ ಕಠಾರಿಯ ತಿಳಿಸಿದ್ದಾರೆ.  

click me!