ಉದ್ಯಮಿ ಅಜೀಂ ಪ್ರೇಮ್‌ಜೀ ಫೌಂಡೇಷನ್‌ನ 1500 ಕೋಟಿ ರು. ಆರ್ಥಿಕ ಅನುದಾನದಡಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನ ಮೊಟ್ಟೆ ನೀಡುವ ಯೋಜನೆ ಆರಂಭಿಸಿ ತಿಂಗಳು ಕಳೆದರೂ ಬಹಳಷ್ಟು ಶಾಲೆಗಳಲ್ಲಿ ಯೋಜನೆ ಸಮರ್ಪಕವಾಗಿ ಅನುಷ್ಠಾನವೇ ಆಗಿಲ್ಲ.
ಲಿಂಗರಾಜು ಕೋರಾ
ಬೆಂಗಳೂರು (ನ.08): ಉದ್ಯಮಿ ಅಜೀಂ ಪ್ರೇಮ್‌ಜೀ ಫೌಂಡೇಷನ್‌ನ 1500 ಕೋಟಿ ರು. ಆರ್ಥಿಕ ಅನುದಾನದಡಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನ ಮೊಟ್ಟೆ ನೀಡುವ ಯೋಜನೆ ಆರಂಭಿಸಿ ತಿಂಗಳು ಕಳೆದರೂ ಬಹಳಷ್ಟು ಶಾಲೆಗಳಲ್ಲಿ ಯೋಜನೆ ಸಮರ್ಪಕವಾಗಿ ಅನುಷ್ಠಾನವೇ ಆಗಿಲ್ಲ. ಇಂಥದ್ದೊಂದು ಅಂಶ ಸ್ವತಃ ಫೌಂಡೇಷನ್, 357 ಶಾಲೆಗಳಲ್ಲಿ ನಡೆಸಿದ ಯೋಜನೆಯ ಮೌಲ್ಯಮಾಪನ ಅಧ್ಯಯನ ವರದಿಯಲ್ಲಿ ಬೆಳಕಿಗೆ ಬಂದಿದೆ.
undefined
ನೋಟಿಸ್ ಜಾರಿ: ಈ ವರದಿ ಆಧರಿಸಿ ಯೋಜನೆಯನ್ನು ಅನುಷ್ಠಾನಗೊಳಿಸದೇ ಉದಾಸೀನ ಮತ್ತು ಕರ್ತವ್ಯ ಲೋಪ ಎಸಗಿರುವ 26 ಜಿಲ್ಲೆಗಳ 50 ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು 48 ಮಂದಿ ಪಿಎಂ ಪೋಷಣ್ ಯೋಜನೆಯ ಸಹಾಯಕ ನಿರ್ದೇಶಕರುಗಳಿಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಈ ಆದೇಶ ಪ್ರತಿ ‘ಕನ್ನಡಪ್ರಭ’ಗೆ ಲಭ್ಯವಾಗಿದ್ದು, ಈ ನೋಟಿಸ್‌ಗೆ ಏಳು ದಿನಗಳೊಳಗಾಗಿ ಸೂಕ್ತ ಸಮಜಾಯಿಷಿ ನೀಡದೆ ಹೋದರೆ ಯೋಜನೆ ವಿಫಲತೆಗೆ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಿಎಂ ಪತ್ನಿ ಪ್ರಕರಣದ ಎಫೆಕ್ಟ್: ಮುಡಾ ಎಲ್ಲ 50:50 ಸೈಟ್ ರದ್ದು!
66 ಶಾಲೆಗಳಲ್ಲಿ ಮೊಟ್ಟೆ ವಿತರಿಸಿಲ್ಲ: ಮೊಟ್ಟೆ ವಿತರಣೆ ಕಾರ್ಯಕ್ರಮ ಅನುಷ್ಠಾನದ ಕುರಿತು ಅಜೀಂ ಪ್ರೇಮ್‌ಜೀ ಫೌಂಡೇಷನ್ ಫಾರ್ ಡೆವಲಪ್‌ಮೆಂಟ್ (ಎಪಿಎಫ್) ಸಂಸ್ಥೆಯ ಪರಿಶೀಲನಾ ತಂಡವು ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ರಾಜ್ಯದಲ್ಲಿ ರ್‍ಯಾಂಡಮ್ ಆಗಿ 4 ವಿಭಾಗಗಳು ಸೇರಿದಂತೆ ಒಟ್ಟು 357 ಶಾಲೆಗಳಿಗೆ ಭೇಟಿ ನೀಡಿ ಮೌಲ್ಯಮಾಪನ ಅಧ್ಯಯನ ನಡೆಸಿ ವರದಿ ನೀಡಿದೆ. ಈ 357 ಶಾಲೆಗಳ ಪೈಕಿ 66 ಶಾಲೆಗಳಲ್ಲಿ ಇದುವರೆಗೂ ಮೊಟ್ಟೆಯನ್ನೇ ವಿತರಿಸದಿರುವುದು ಕಂಡುಬಂದಿದೆ. ಈ ಶಾಲೆಗಳಲ್ಲಿ ಶೇ.30ರಷ್ಟು ವಿದ್ಯಾರ್ಥಿಗಳು ಮೊಟ್ಟೆ ಸೇವಿಸಲು ಒಪ್ಪಿಗೆ ನೀಡಿದ್ದರೂ ಅವರಿಗೆ ಮೊಟ್ಟೆ ನೀಡಿಲ್ಲ. ಬದಲಾಗಿ ಶೇಂಗಾ ಚಿಕ್ಕಿ/ ಬಾಳೆಹಣ್ಣು ವಿತರಿಸಲಾಗಿದೆ.
ಎಪಿಎಫ್ ತಂಡ ಭೇಟಿ ನೀಡಿದ ಶಾಲೆಗಳಲ್ಲಿ ಒಟ್ಟಾರೆ ಶೇ.64 ಪ್ರಮಾಣದಷ್ಟು ಮೊಟ್ಟೆ ಸೇವಿಸುವ ಮಕ್ಕಳು ಇದ್ದಾರೆ. ಆದರೂ, ಹಲವು ಶಾಲೆಗಳಲ್ಲಿ ಮೊಟ್ಟೆ ವಿತರಿಸಿದೆ ಶೇಂಗಾ ಚಿಕ್ಕಿ ಇಲ್ಲವೇ ಬಾಳೆಹಣ್ಣು ನೀಡಲಾಗುತ್ತಿದೆ. ಇನ್ನು ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣನ್ನು ಮೊದಲ ಆದ್ಯತೆಯಾಗಿ ವಿತರಿಸಬೇಕು. ಆದರೆ, ಬರೀ ಶೇಂಗಾ ಚಿಕ್ಕಿಯನ್ನು ಮಾತ್ರ ವಿತರಿಸುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ ನಿರ್ದಿಷ್ಟ ಪಡಿಸಿದ ತೂಕದಲ್ಲಿ ಶೇಂಗಾ ಚಿಕ್ಕಿ ನೀಡದೆ ಲೋಪವೆಸಗಿರುವುದು ಕಂಡುಬಂದಿದೆ. ಒಬ್ಬ ವಿದ್ಯಾರ್ಥಿಗೆ ಕನಿಷ್ಠ 35 ಗ್ರಾಂ ನಿಂದ 40 ಗ್ರಾಂ ತೂಕವಿರಬೇಕು. ಆದರೆ, ತೂಕದ ಪ್ರಮಾಣ 30 ಗ್ರಾಂ ಗಿಂತ ಕಡಿಮೆ ಇರುವುದು ಕಂಡುಬಂದಿದೆ ಎಂದು ವರದಿ ಹೇಳಿದೆ.
ಆಯುಕ್ತರ ವಿಷಾದ: ಅಜೀಂ ಪ್ರೇಮ್ ಜಿ ಫೌಂಡೇಷನ್ ತಂಡದ ವರದಿಯನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಹಂತದ ಅಧಿಕಾರಿಗಳಿಗೆ ತರಬೇತಿ ನೀಡಿ ಸ್ಪಷ್ಟ ಸುತ್ತೋಲೆ ಹೊರಡಿಸಿದ್ದರೂ ಇದರ ನಿರ್ವಹಣೆಯಲ್ಲಿ ಕರ್ತವ್ಯದಲ್ಲಿ ಉದಾಸೀನ ಮತ್ತು ನಿರ್ಲಕ್ಷ್ಯತೆ ತೋರಿರುವುದರಿಂದ ಮಕ್ಕಳು ಮೊಟ್ಟೆ ಸೇವನೆಯಿಂದ ವಂಚಿತರಾಗಿರುವುದು ವಿಷಾದದ ಸಂಗತಿ. ಇದರ ಪರಿಣಾಮ ಈ ಮಹತ್ವಾಕಾಂಕ್ಷಿ ಯೋಜನೆ ಈಡೇರಿಕೆಯಾಗದಿರುವುದು ಕಂಡುಬರುತ್ತದೆ ಎಂದು ಆಯುಕ್ತರು ತಮ್ಮ ನೋಟಿಸ್‌ನಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1500 ಕೋಟಿ ರು. ಆರ್ಥಿಕ ನೆರವಿನ ಯೋಜನೆ: ರಾಜ್ಯದ 48 ಸಾವಿರಕ್ಕು ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ವಾರದಲ್ಲಿ 4 ದಿನ ಮೊಟ್ಟೆ ವಿತರಿಸಲು ಅಜೀಂ ಪ್ರೇಂಜ್‌ಜೀ ಫೌಂಡೇಷನ್ ಕೆಲ ತಿಂಗಳ ಹಿಂದೆ ಮುಂದೆ ಬಂದಿತ್ತು. ನಂತರ ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ ಇದಕ್ಕಾಗಿ 1500 ಕೋಟಿ ರು. ಅನುದಾನವನ್ನೂ ಘೋಷಿಸಿತ್ತು. ಇದರಿಂದ ಅದುವರೆಗೂ ಪಿಎಂ ಪೋಷಣ್ ಯೋಜನೆಯಡಿ ಸರ್ಕಾರದಿಂದಲೇ ವಾರದಲ್ಲಿ ಎರಡು ದಿನ ಮಾತ್ರ ವಿತರಿಸುತ್ತಿದ್ದ ಮೊಟ್ಟೆ ಯೋಜನೆಯನ್ನು ಕಳೆದ ಸೆಪ್ಟಂಬರ್ 25ರಿಂದ ವಾರದಲ್ಲಿ 6 ದಿನಗಳಿಗೆ ವಿಸ್ತರಿಸಿತ್ತು. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ತಾಲ್ಲೂಕು ಹಂತದ ಅನುಷ್ಠಾನಾಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪಿಎಂ ಪೋಷಣ್ ಸಹಾಹಕ ನಿರ್ದೇಶಕರಿಗೆ ಜವಾಬ್ದಾರಿ ವಹಿಸಲಾಗಿತ್ತು.
ಯಾವ್ಯಾವ ಅಧಿಕಾರಿಗಳಿಗೆ ನೋಟಿಸ್ ಜಾರಿ: ಬಾಲ್ಕಿ, ಆಳಂದ, ಚಿತ್ತಾಪುರ, ಯಾದಗಿರಿ, ಹುಮ್ನಾಬಾದ್, ಸುರಪುರ, ಬಸವಕಲ್ಯಾಣ, ಕಲಬುರಗಿ, ಹೂವಿನ ಹಡಗಲಿ, ದೇವದುರ್ಗ, ಕೂಡ್ಲಿಗಿ, ಮಾನ್ವಿ, ಬಳ್ಳಾರಿ ಪಶ್ಚಿಮ, ಗಂಗಾವತಿ, ಧಾರವಾಡ, ಇಂಡಿ, ವಿಜಯಪುರ ಗ್ರಾಮೀಣ, ಜಮಖಂಡಿ, ಹುನಗುಂದ, ಬಾಗಲಕೋಟೆ, ರಾಮದುರ್ಗ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಅಥಣಿ, ಸಿಂಧಗಿ, ರಟ್ಟೇಹಳ್ಳಿ, ಗದಗ, ಕುಮಟಾ, ಶೃಂಗೇರಿ, ಬೀರೂರು, ಕಡೂರು, ಕೊಪ್ಪ, ಮಂಗಳೂರು ಉತ್ತರ, ಮೂಡಬಿದ್ರೆ, ಹೊನ್ನಾಳಿ, ಜಗಳೂರು, ದಾವಣಗೆರೆ ಉತ್ತರ, ಬೆಂಗಳೂರು ದಕ್ಷಿಣ ವಲಯ 1, 2 ಮತ್ತು 4, ಬಾಗೇಪಲ್ಲಿ, ಕೊರಟಗೆರೆ, ತುಮಕೂರು, ಕುಣಿಗಲ್, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಸಕೋಟೆ, ದೊಡ್ಡಬಳ್ಳಾಪುರ, ಕೋಲಾರ, ಮಾಲೂರು.
ಸಿ.ಪಿ.ಯೋಗೇಶ್ವರ್ ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್: ದೇವೇಗೌಡ ವಾಗ್ದಾಳಿ
ಲೋಪ ಆಗಿರುವುದೆಲ್ಲಿ?
- ವಿದ್ಯಾರ್ಥಿಗಳಿಗೆ ವಾರಕ್ಕೆ 6 ದಿನ ಮೊಟ್ಟೆ ನೀಡುವ ಯೋಜನೆ ಜಾರಿಯಲ್ಲಿ ಭಾರೀ ಲೋಪ
- ಮೊಟ್ಟೆ ಬಯಸಿದ ಮಕ್ಕಳಿಗೂ ಬಾಳೆಹಣ್ಣು, ಚಿಕ್ಕಿ ಕೊಡುತ್ತಿರುವ ಅಧಿಕಾರಿಗಳು, ಶಿಕ್ಷಕರು
- ನಿಗದಿತ ಪ್ರಮಾಣದ ತೂಕಕ್ಕಿಂತ ಕಡಿಮೆ ಚಿಕ್ಕಿ ವಿತರಣೆಯೂ ಅಧ್ಯಯನದಲ್ಲಿ ಪತ್ತೆ
- ಅಜೀಂ ಪ್ರೇಮ್‌ಜೀ ಸಂಸ್ಥೆ ಅಧ್ಯಯನದಲ್ಲೇ ಅಧಿಕಾರಿಗಳ ಬೇಜವಾಬ್ದಾರಿ ಬಹಿರಂಗ
- ಕರ್ತವ್ಯ ಲೋಪದಡಿ 98 ಬಿಇಒಗಳಿಗೆ ನೋಟಿಸ್, 7 ದಿನದಲ್ಲಿ ಉತ್ತರಕ್ಕೆ ಸೂಚನೆ