
ಧಾರವಾಡ (ಆ.03): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ ಪೈಕಿ ಕಳೆದ ಏಳು ವರ್ಷಗಳಲ್ಲಿ ₹4 ಲಕ್ಷ ಕೋಟಿ ಹಣ ರೈತರಿಗೆ ಸಂದಾಯವಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ₹538 ಕೋಟಿ ರೈತರ ಖಾತೆಗೆ ಜಮಾ ಆಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು. ಇಲ್ಲಿಯ ಕೃಷಿ ವಿವಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶನಿವಾರ ನಡೆದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ಯೋಜನೆಯಡಿ ಆಯೋಜಿಸಲಾದ ರೈತರೊಂದಿಗೆ ಸಂವಾದ ಮತ್ತು ₹20,500 ಕೋಟಿ ಮೊತ್ತದ ನಿಧಿಯನ್ನು 9.70 ಲಕ್ಷ ರೈತರ ಖಾತೆಗೆ ವರ್ಗಾಯಿಸುವ ಕಾರ್ಯಕ್ರಮದ ನೇರ ಪ್ರಸಾರ ನಂತರ ಸಮಾರಂಭದಲ್ಲಿ ಅವರು ಮಾತನಾಡಿದರು.
ಶನಿವಾರ ಜಿಲ್ಲೆಯ 99,983 ರೈತರಿಗೆ ₹20.15 ಕೋಟಿ ಜಮಾ ಆಗಿದೆ ಎಂಬ ಮಾಹಿತಿ ನೀಡಿದರು. ಸರ್ಕಾರದ ಯಾವುದೇ ಯೋಜನೆ ಇದ್ದರೂ ನೇರವಾಗಿ ಫಲಾನುಭವಿಗಳಿಗೆ ಹಣ ಸಂದಾಯವಾಗುವ ಪದ್ಧತಿ ನಮ್ಮಲ್ಲಿದೆ ಎಂದರು. ರೈತರು ಕಿಸಾನ್ ಕ್ರೆಡಿಟ್ ಕಾರ್ಡ್, ಪಿಎಂ- ಕುಸುಮ್, ಕೃಷಿ ಸಿಂಟಾಯಿದಂತಹ ಧನಸಹಾಯ ಲಭ್ಯವಿರುವ ಯೋಜನೆಗಳನ್ನು ಸದುಪಯೋಗ ಪಡೆದು ಕೃಷಿಯಲ್ಲಿ ಮುನ್ನಡೆ ಸಾಧಿಸಬೇಕು ಎಂದ ಸಚಿವರು, ಸರ್ಕಾರ ರೈತರ ನೆರವಿಗಾಗಿಯೇ ಸೂಕ್ತ ಹಾಗೂ ಬಲಿಷ್ಠ ಕಾನೂನು ವ್ಯವಸ್ಥೆಯನ್ನು ರೂಪಿಸಿದ್ದು, ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಒಪ್ಪಂದ ಕೃಷಿಯಲ್ಲಿ ಕಂಪನಿಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ರೈತರ ಮನೆಬಾಗಿಲಿಗೆ ಆಧುನಿಕ ತಂತ್ರಜ್ಞಾನ, ಮಾರ್ಗದರ್ಶನ ಮತ್ತು ಉತ್ತಮ ಬೆಲೆಯನ್ನು ನೀಡುತ್ತದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕಾಗಿದೆ ಎಂದು ಕಳಕಳಿಯ ಮನವಿ ಮಾಡಿಕೊಂಡರು.
ನಮ್ಮಲ್ಲಿ ತಯಾರಿಲ್ಲ ಗೊಬ್ಬರ: ರಸಗೊಬ್ಬರ ಭಾರತದಲ್ಲಿ ತಯಾರಾಗುವುದಿಲ್ಲ. ರಷ್ಯಾ, ಉಕ್ರೇನ್ ದಿಂದ ಬರಬೇಕು. ಸಚಿವ ಸಂತೋಷ ಲಾಡ್ ಭಾರತದಲ್ಲೇಕೆ ಗೊಬ್ಬರ ತಯಾರಾಗುವುದಿಲ್ಲ ಎಂದು ಕೇಳುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಏನು ನಡೆದಿದೆ ಎನ್ನುವುದೇ ಅವರಿಗೆ ಗೊತ್ತಿಲ್ಲ. ಆದರೆ, ಇಂತಹ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಗೊಬ್ಬರ ತಯಾರಿಕೆಗೆ ನೈಸರ್ಗಿಕವಾದ ಕಚ್ಚಾವಸ್ತು ಬೇಕು. ಅದು ನಮ್ಮ ದೇಶದಲ್ಲಿ ಲಭ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ವಿದೇಶದಿಂದ ತರಬೇಕಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಹೊಂದಿರಬೇಕಿತ್ತು ಎಂದ ಜೋಶಿ, ಹೆಚ್ಚಿನ ಮಳೆಯಾಗಿರುವ ಕಾರಣ ಯೂರಿಯಾ ಸಮಸ್ಯೆಗೆ ಕಾರಣ. ಮೊದಲಿಗೆ ರಾಜ್ಯದ ಕೃಷಿ ಮಂತ್ರಿ ಈ ಬಗ್ಗೆ ಸರಿಯಾದ ಹೇಳಿಕೆ ನೀಡಿದ್ದರು. ಆದರೆ, ನಂತರ ಕೇಂದ್ರದಿಂದ ಗೊಬ್ಬರದ ಪ್ರಮಾಣ ಕಡಿಮೆ ಬಂದಿದೆ ಎನ್ನುತ್ತಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಳ್ಳಲಿ ಎಂಬ ಸಲಹೆ ನೀಡಿದರು.
ಮೇಯರ್ ಜ್ಯೋತಿ ಪಾಟೀಲ ಹಾಗೂ ಕೃಷಿ ವಿವಿ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ವೇದಿಕೆ ಮೇಲಿದ್ದರು. ದೇಶದ 700ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳ ಪೈಕಿ ಕೃಷಿ ವಿವಿಯಲ್ಲೂ ನೇರ ಪ್ರಸಾರ ನಡೆಯಿತು. ಸಾವಿರಕ್ಕೂ ಹೆಚ್ಚು ರೈತ, ರೈತಮಹಿಳೆಯರು, ಕೃಷಿಸಖಿಯರು ಹಾಗೂ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು. ವಿಸ್ತರಣಾ ನಿರ್ದೇಶಕ ಡಾ. ಎಂ.ವಿ. ಮಂಜುನಾಥ ಸ್ವಾಗತಿಸಿದರು. ಡಾ. ಕೆ.ಪಿ. ಗುಂಡಣ್ಣವರ್, ಡಾ. ಸುರೇಖಾ ಸಂಕನಗೌಡರ್ ನಿರೂಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ