Karnataka: ದಂಡ ಕಟ್ಟಿಸಿಕೊಂಡು ಅಕ್ರಮ-ಸಕ್ರಮ ಶೀಘ್ರ ಜಾರಿಗೆ ಸರ್ಕಾರದ ನಿರ್ಧಾರ: ಅಶೋಕ್‌

By Kannadaprabha NewsFirst Published Jan 3, 2022, 4:34 AM IST
Highlights

*   ಸುಪ್ರೀಂಕೋರ್ಟ್‌ಗೆ ಇನ್ನೊಂದು ವಾರದಲ್ಲಿ ಅಫಿಡವಿಟ್‌ ಸಲ್ಲಿಕೆ
*   ರಾಜ್ಯ ಸರ್ಕಾರದಿಂದ ಈಗಾಗಲೇ ಈ ಬಗ್ಗೆ ಕಾಯ್ದೆ ಜಾರಿಯಾಗಿದೆ
*   ಕಾಯ್ದೆಗೆ ಕೋರ್ಟ್‌ನ ತಡೆ ತೆರವುಗೊಳಿಸಲು ಸರ್ಕಾರದಿಂದ ಯತ್ನ
 

ಬೆಂಗಳೂರು(ಡಿ.03):  ಅಕ್ರಮವಾಗಿ(Illegal) ಕಟ್ಟಿಕೊಂಡಿರುವ ಮನೆ ಸೇರಿದಂತೆ ಎಲ್ಲ ಕಟ್ಟಡಗಳನ್ನು ಸಕ್ರಮಗೊಳಿಸುವ ರಾಜ್ಯ ಸರ್ಕಾರದ(Government of Karnataka) ಯೋಜನೆಗೆ ಸುಪ್ರೀಂಕೋರ್ಟ್‌(Supreme Court( ನೀಡಿರುವ ತಡೆಯಾಜ್ಞೆ ತೆರವುಗೊಳಿಸುವ ಸಂಬಂಧ ಇನ್ನೊಂದು ವಾರದೊಳಗೆ ಕೋರ್ಟ್‌ಗೆ ವಿವರವಾದ ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಬೆಂಗಳೂರು(Bengaluru) ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ಹಾಗೂ ರಾಜ್ಯ ಸರ್ಕಾರದ ಹಲವು ಸಚಿವರು ಭಾಗಿಯಾಗಿದ್ದರು. ಸಭೆಯಲ್ಲಿ ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಚರ್ಚಿಸಿ ಅಕ್ರಮ-ಸಕ್ರಮ ನಿರ್ಧಾರಕ್ಕೆ ಇರುವ ತಡೆಯಾಜ್ಞೆ ತೆರವಿಗೆ ಅಗತ್ಯ ಮಾಹಿತಿ ಒಳಗೊಂಡ ಪ್ರಮಾಣ ಪತ್ರವನ್ನು ಶೀಘ್ರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ಅನಧಿಕೃತ ಮನೆಗಳ ಸಕ್ರಮ : ಮಾ.31ರವರೆಗೆ ವಿಸ್ತರಣೆ

ಸಭೆ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಕಂದಾಯ ಸಚಿವ ಆರ್‌.ಅಶೋಕ್‌(R Ashok), ಬಿಬಿಎಂಪಿ(BBMP) ಸೇರಿದಂತೆ ವಿವಿಧ ನಗರ ಪ್ರದೇಶಗಳಲ್ಲಿ ಕಂದಾಯ ನಿವೇಶನದಲ್ಲಿ ಕಟ್ಟಡ ನಿರ್ಮಾಣ, ನಕ್ಷೆ, ನಿಯಮ ಉಲ್ಲಂಘನೆ ಸೇರಿದಂತೆ ಅಕ್ರಮ ಕಟ್ಟಡ ನಿರ್ಮಾಣಗಳಿಗೆ ನಿಗದಿತ ದಂಡ ವಸೂಲಿ ಮಾಡಿ ಸಕ್ರಮಗೊಳಿಸಲು ಸರ್ಕಾರ ಅಕ್ರಮ ಸಕ್ರಮ ಯೋಜನೆ ಜಾರಿಗೆ ತಂದಿತ್ತು. ಆದರೆ, ಯೋಜನೆಗೆ ಸುಪ್ರೀಂಕೋರ್ಟ್‌ನಲ್ಲಿ ಸದ್ಯ ತಡೆಯಾಜ್ಞೆ ಇದೆ. ಆದಷ್ಟುಬೇಗ ಈ ತಡೆಯಾಜ್ಞೆ ತೆರವುಗೊಳಿಸಲು ಗಂಭೀರ ಪ್ರಯತ್ನ ನಡೆಸಿ, ರಾಜ್ಯ ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಚರ್ಚಿಸಿ ಯೋಜನೆ ಕುರಿತು ಸುಪ್ರೀಂಕೋರ್ಟ್‌ಗೆ ಸವಿವರವಾದ ಪ್ರಮಾಣ ಪತ್ರವನ್ನು ಇನ್ನೊಂದು ವಾರದಲ್ಲಿ ಸಲ್ಲಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.

ಎ ಖಾತಾ ಭಾಗ್ಯ:

ಸರ್ಕಾರದ ಈ ಯೋಜನೆಯ ಸದುದ್ದೇಶವನ್ನು ನ್ಯಾಯಾಲಯಕ್ಕೆ ತಿಳಿಸಿ ಪ್ರಕರಣಕ್ಕೆ ಮುಕ್ತಿ ಪಡೆಯಲು ಗಂಭೀರ ಚರ್ಚೆ ನಡೆಸಲಾಗಿದೆ. ಇದಕ್ಕೆ ಫಲ ದೊರೆತರೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ‘ಬಿ’ ಖಾತಾ ನಿವೇಶನಗಳಿಗೆ ‘ಎ’ ಖಾತಾ ದೊರೆಯಲಿದೆ. ಅಲ್ಲದೆ, ಬಿಬಿಎಂಪಿ ಸೇರಿದಂತೆ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ರೆವಿನ್ಯೂ ನಿವೇಶಗಳಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳಿಂದ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸಿ ಖಾತಾ ನೋಂದಣಿ ನೀಡುವ ಕೆಲಸವಾಗಲಿದೆ. ಜತೆಗೆ ಆ ಪ್ರದೇಶಗಳಿಗೆ ರಸ್ತೆ, ಕುಡಿಯುವ ನೀರು ಸೇರಿದಂತೆ ಸರ್ಕಾರದಿಂದ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಬಹುದು. ಅಂತಹ ನಿವೇಶನದಾರರಿಗೆ ಬ್ಯಾಂಕುಗಳಲ್ಲಿ ಉತ್ತಮ ಸಾಲಸೌಲಭ್ಯಗಳೂ ದೊರೆಯುವಂತಾಗಲಿದೆ. ಒಟ್ಟಿನಲ್ಲಿ ಇದರಿಂದ ದೊಡ್ಡ ಮಟ್ಟದಲ್ಲಿ ಜನರಿಗೆ ಇದು ಉಪಯೋಗವಾಗಲಿದೆ. ಸರ್ಕಾರಕ್ಕೂ ಇದರಿಂದ ದೊಡ್ಡ ಮೊತ್ತದ ಆದಾಯವೂ ಬರಲಿದೆ ಎಂದು ಆರ್‌.ಅಶೋಕ್‌ ವಿವರಿಸಿದರು.
ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಸಚಿವ ಮುನಿರತ್ನ ಜತೆಗಿದ್ದರು.

ಅಕ್ರಮ ಸಾಗುವಳಿ ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನ

ಏನಿದು ಅಕ್ರಮ-ಸಕ್ರಮ?

- ನಕ್ಷೆ, ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿಗೆ ಸಕ್ರಮ ಭಾಗ್ಯ
- ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರ, ಹಳ್ಳಿಗಳಿಗೆ ಅನ್ವಯ
- ರಾಜ್ಯ ಸರ್ಕಾರದಿಂದ ಈಗಾಗಲೇ ಈ ಬಗ್ಗೆ ಕಾಯ್ದೆ ಜಾರಿಯಾಗಿದೆ
- ಆದರೆ, ಸುಪ್ರೀಂಕೋರ್ಟ್‌ನಲ್ಲಿ ಈ ಕಾಯ್ದೆಯನ್ನು ಪ್ರಶ್ನಿಸಲಾಗಿದೆ
- ಕಾಯ್ದೆಗೆ ಕೋರ್ಟ್‌ನ ತಡೆ ತೆರವುಗೊಳಿಸಲು ಸರ್ಕಾರದಿಂದ ಯತ್ನ
 

click me!