* 5% ಪಾಸಿಟಿವಿಟಿ ಬಂದರೆ, ಐಸಿಯು 40% ಭರ್ತಿಯಾದರೆ ರಾಜ್ಯದಲ್ಲಿ ಲಾಕ್‌ಡೌನ್ ಮಾಡಿ
* ಕೊರೋನಾ ಪ್ರಕರಣಗಳಿಗೆ ಕಲರ್ ಕೋಡಿಂಗ್‌ಗೆ ಸಲಹೆ
* ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು
ಬೆಂಗಳೂರು(ಡಿ.03): ರಾಜ್ಯದಲ್ಲಿ(Karnataka) ಒಂದು ವಾರದ ಕೋವಿಡ್ ಪಾಸಿಟಿವಿಟಿ ದರ ಶೇ.5 ದಾಟಿದರೆ ಅಥವಾ ಐಸಿಯು ಹಾಗೂ ಆಮ್ಲಜನಕ ಉಳ್ಳ ಹಾಸಿಗೆಗಳಲ್ಲಿ ಶೇ.40ಕ್ಕಿಂತ ಹೆಚ್ಚು ಭರ್ತಿಯಾದರೆ ಲಾಕ್‌ಡೌನ್(Lockdown) ಜಾರಿಗೊಳಿಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ(Covid Technical Advisory Committee) ರಾಜ್ಯ ಸರ್ಕಾರಕ್ಕೆ(Government of Karnataka) ಶಿಫಾರಸು ಮಾಡಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಅಪಾಯಕಾರಿ ಮಟ್ಟಕ್ಕೆ ತಲುಪುವುದನ್ನು ತಡೆಯಲು ಸಮಿತಿ ಅನೇಕ ಕ್ರಮಗಳನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಉಳಿದಂತೆ ಅನೇಕ ಹಂತಗಳಲ್ಲಿ ವಿವಿಧ ನಿರ್ಬಂಧ ಹೇರುವಂತೆಯೂ ಸಲಹೆ ನೀಡಲಾಗಿದೆ. ಪಾಸಿಟಿವಿಟಿ ದರಕ್ಕೆ ಅನುಗುಣವಾಗಿ ಕಡಿಮೆ ನಿರ್ಬಂಧ (ಹಳದಿ ಬಣ್ಣ ), ಮಧ್ಯಮ ನಿರ್ಬಂಧ (ಕಿತ್ತಳೆ) ಮತ್ತು ಕಠಿಣ ನಿರ್ಬಂಧ (ಕೆಂಪು) ಇರುವ ಕಟ್ಟುಪಾಡುಗಳನ್ನು ವಿಧಿಸುವಂತೆ ಹೇಳಿದೆ. ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇದ್ದರೆ ಹಳದಿ, ಶೇ.1ರಿಂದ ಶೇ.2ರಷ್ಟಿದ್ದರೆ ಕಿತ್ತಳೆ ಮತ್ತು ಶೇ.2 ದಾಟಿದರೆ ಕೆಂಪು ಎಚ್ಚರಿಕೆ ನೀಡಿ ನಿರ್ಬಂಧ ವಿಧಿಸುವಂತೆ ಸಲಹೆ ನೀಡಿದೆ.
Covid 19 Spike: 4 ರಾಜ್ಯಗಳಲ್ಲಿ ಕೊರೋನಾ ಸ್ಫೋಟ
ಹಳದಿ ನಿರ್ಬಂಧ:
ಹಳದಿ ಎಚ್ಚರಿಕೆ ಇದ್ದಾಗ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್(Mask) ಧಾರಣೆ ಕಡ್ಡಾಯ. ಒಂದು ಮೀಟರ್‌ನ ಸಾಮಾಜಿಕ ಅಂತರ, ಸ್ಯಾನಿಟೈಸ್‌ಗೆ ಆದ್ಯತೆ ನೀಡಬೇಕು. ಉಳಿದಂತೆ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಸಿನಿಮಾ, ಆಡಿಟೋರಿಯಂ, ಸ್ಕೂಲ್- ಕಾಲೇಜ್, ರೆಸ್ಟೋರೆಂಟ್ ಸೇರಿದಂತೆ ಸಲೂನ್, ಜಿಮ್ ಸೆಂಟರ್, ಸಾರ್ವಜನಿಕರ ಸಾರಿಗೆ ಮುಂತಾದ ಚಟುವಟಿಕೆಗೆ ಅವಕಾಶ ಕಲ್ಪಿಸಬೇಕು. ಆದರೆ, ಮದುವೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ 200-300 ಜನರು, ಅಂತ್ಯಕ್ರಿಯೆ(Funeral) ಸಂದರ್ಭದಲ್ಲಿ 100-200 ಮಂದಿ ಸೇರಲು ಅವಕಾಶ ಕಲ್ಪಿಸಬೇಕು.
ಕಿತ್ತಳೆ ಎಚ್ಚರಿಕೆ:
ಕಿತ್ತಳೆ ಎಚ್ಚರಿಕೆ ಜಾರಿಯಲ್ಲಿದ್ದಾಗ ಮಾಲ್ ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 1ರ ತನಕ ಮಾತ್ರ ತೆರೆಯಲು ಅವಕಾಶ ಕಲ್ಪಿಸಬೇಕು. ಸಿನಿಮಾ ಹಾಗೂ ಆಡಿಟೋರಿಯಂನಲ್ಲಿ, ಶಾಲಾ- ಕಾಲೇಜು, ಬಾರ್ ಮತ್ತು ಪಬ್, ಕಚೇರಿ, ಸಾರ್ವಜನಿಕ ಸಾರಿಗೆಗಳಲ್ಲಿ 50-50 ಸೂತ್ರ ಜಾರಿ ಮಾಡಬೇಕು. ಮದುವೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ 100-200 ಮತ್ತು ಅಂತ್ಯಕ್ರಿಯೆಯಲ್ಲಿ 50ರಿಂದ 100 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಇರಬೇಕು.
Coronavirus Lockdown: ಲಾಕ್ ಡೌನ್ ತಪ್ಪಿಸಲು ಇದೊಂದೇ ಸೂತ್ರ ಎಂದ ಬೊಮ್ಮಾಯಿ
ಕೆಂಪು ನಿರ್ಬಂಧ:
ಕೆಂಪು ಎಚ್ಚರಿಕೆ(Red Zone) ಇದ್ದಾಗ ವಾಣಿಜ್ಯ ಚಟುವಟಿಕೆಗಳಿಗೆ ಬಂದ್ ಮಾಡಬೇಕು. ಶಾಲೆ, ಶಾಪಿಂಗ್ ಆನ್‌ಲೈನ್‌ನಲ್ಲಿ ಮಾಡಬೇಕು. ಹೋಟೆಲ್, ಬಾರ್‌ಗಳಲ್ಲಿ ಆಹಾರ, ಮದ್ಯ ತೆಗೆದುಕೊಂಡು ಹೋಗಲು ಅವಕಾಶ ನೀಡಬಹುದು. ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಯನ್ನು ಬಂದ್ ಮಾಡಬೇಕು. ಕಚೇರಿ, ಕಾರ್ಖಾನೆಗಳಲ್ಲಿ ಮನೆಯಿಂದಲೇ ಕೆಲಸ ಮಾಡಬೇಕು. ಪರಿಸ್ಥಿತಿ ಕೈ ಮೀರುತ್ತಿರುವ ಹಂತದಲ್ಲಿ ವಾರಾಂತ್ಯದ ಕರ್ಫ್ಯೂ, ರಾತ್ರಿ ಕರ್ಫ್ಯೂ(Night Curfew) ಹಾಗೂ ಎರಡು ಡೋಸ್ ಲಸಿಕೆ(Vaccine) ಕಡ್ಡಾಯ ಮಾಡುವುದು ಮುಂತಾದ ಕಠಿಣ ನಿರ್ಬಂಧಗಳನ್ನು ಹೇರಬಹುದು ಎಂದು ಸಲಹೆ ನೀಡಲಾಗಿದೆ.
ಇದರ ಜೊತೆಗೆ ರಾಜ್ಯದಲ್ಲಿ ಕೋವಿಡ್ ಪರೀಕ್ಷೆ(Covid Test) ಹೆಚ್ಚಿಸಬೇಕು. ಕೋವಿಡ್ ಕ್ಲಸ್ಟರ್‌ಗಳಿಂದ ಶೇ.30 ಮಾದರಿಗಳನ್ನು ತಳಿ ಪತ್ತೆ ಪರೀಕ್ಷೆಗೆ ಕಳುಹಿಸಿಕೊಡಬೇಕು. ಎಲ್ಲ ವಸತಿ ಶಾಲೆ, ಹಾಸ್ಟೆಲ್, ಅಪಾರ್ಟ್‌ಮೆಂಟ್, ಮಾಲ್ ಮತ್ತು ಜನಸಂದಣಿ ಇರುವ ಇತರ ಸ್ಥಳಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಮತ್ತು ನಿಯಮ ಪಾಲನೆ ಮಾಡಬೇಕು. ಸೌಮ್ಯ ರೋಗ ಲಕ್ಷಣ ಹೊಂದಿದ್ದವರಿಗೆ ಮಾತ್ರ ಹೋಂ ಐಸೋಲೇಷನ್ ಆಯ್ಕೆ ಮಾಡಬೇಕು. ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರಗಳನ್ನು ಸಿದ್ಧಪಡಿಸುವಂತೆ ಸಮಿತಿ ಸಲಹೆ ನೀಡಿದೆ.