ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಡಿಆರ್‌ಐನಿಂದ ಬಂಧಿತರಾಗಿರುವ ನಟಿ ರನ್ಯಾರಾವ್ ಜಾಮೀನು ಅರ್ಜಿ ತಿರಸ್ಕೃತ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐನಿಂದ ಬಂಧನ ಭೀತಿ ಎದುರಾಗಿದೆ.
ಬೆಂಗಳೂರು (ಮಾ.15): ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಡಿಆರ್‌ಐನಿಂದ ಬಂಧಿತರಾಗಿರುವ ನಟಿ ರನ್ಯಾರಾವ್ ಜಾಮೀನು ಅರ್ಜಿ ತಿರಸ್ಕೃತ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐನಿಂದ ಬಂಧನ ಭೀತಿ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಕಾರ್ಯಾಚರಣೆ ಕೈಗೊಂಡಿರುವ ಇ.ಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ರನ್ಯಾರಾವ್ ಅವರನ್ನು ಬಂಧಿಸಲಿದ್ದಾರೆ. ಮೊದಲಿಗೆ ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಸಿಬಿಐ ಅಧಿಕಾರಿಗಳು ಸಹ ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಪ್ರಕರಣದಲ್ಲಿ ಪ್ರವೇಶಿಸಿದ್ದು, ತನಿಖೆ ಕೈಗೊಂಡಿದ್ದಾರೆ. ರನ್ಯಾರಾವ್ ಸೇರಿದಂತೆ ಆಕೆಯ ಆಪ್ತರ ಸ್ಥಳಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ವಿಚಾರಣೆ ನಡೆಸಬೇಕಾಗಿರುವ ಕಾರಣ ಇ.ಡಿ. ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯುವ ನಿರೀಕ್ಷೆ ಇದೆ. ಶುಕ್ರವಾರ ನ್ಯಾಯಾಲಯವು ರನ್ಯಾರಾವ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.
ಈ ಸಂಬಂಧ ಇ.ಡಿ. ಅಧಿಕಾರಿಗಳು ತಮ್ಮ ಪ್ರಕ್ರಿಯೆಗಳನ್ನು ನಡೆಸುತ್ತಿದ್ದು, ಪ್ರಾಥಮಿಕ ತನಿಖೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ವಿಚಾರಣೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡ ಬಳಿಕ ರನ್ಯಾರಾವ್ ಅವರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ನಡುವೆ, ಸಿಬಿಐ ಅಧಿಕಾರಿಗಳು ಸಹ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆರೆಯಾದ ವಿದೇಶಿ ಆರೋಪಿಗಳಿಗೂ ರನ್ಯಾರಾವ್ ಅವರಿಗೂ ನಂಟಿರುವ ಬಗ್ಗೆ ಡಿಆರ್‌ಐ ಆಧಿಕಾರಿಗಳು ಸಿಬಿಐಗೆ ಪತ್ರ ಬರೆದು ಅನುಮಾನ ವ್ಯಕ್ತಪಡಿಸಿದ್ದಾರೆ.
ದುಬೈನಿಂದ ನಾನು ಚಿನ್ನ ಕದ್ದು ತಂದಿಲ್ಲ: ಉಲ್ಟಾ ಹೊಡೆದ ನಟಿ ರನ್ಯಾ ರಾವ್
ಚಿನ್ನ ಕಳ್ಳ ಸಾಗಾಣೆ ಮಾಡುತ್ತಿದ್ದ ಒಮಾನ್ ಮತ್ತು ಯುಎಇ ದೇಶದ ಇಬ್ಬರನ್ನು ಮುಂಬೈನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ ₹18.92 ಕೋಟಿ ಮೌಲ್ಯದ 21.28 ಕೇಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಈ ಇಬ್ಬರು ದುಬೈನಿಂದ ಬಂದಿದ್ದರು. ಅಂತೆಯೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರಾವ್ ಅವರನ್ನು ಬಂಧಿಸಿ ₹12.56 ಕೋಟಿ ಮೌಲ್ಯದ 14.2 ಕೇಜಿ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಎರಡು ಘಟನೆಗೂ ನಂಟಿರುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.