ರಾಜ್ಯದಲ್ಲಿ ಪ್ರತಿಷ್ಠಿತ ಅದಾನಿ ಗ್ರೂಪ್ .50 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ. ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಈ ಸಂಬಂಧ ಒಡಂಬಡಿಕೆ ನಡೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ಹುಬ್ಬಳ್ಳಿ (ಮಾ.27): ರಾಜ್ಯದಲ್ಲಿ ಪ್ರತಿಷ್ಠಿತ ಅದಾನಿ ಗ್ರೂಪ್ .50 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ. ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಈ ಸಂಬಂಧ ಒಡಂಬಡಿಕೆ ನಡೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ (Murugesh Nirani) ಹೇಳಿದರು. ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೈಕಾನ್ ಶೃಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಗೌತಮ್ ಅದಾನಿ (Gautam Adani) ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಮೊದಲಿಗೆ 5 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿ ಗೌತಮ್ ಅದಾನಿ ಮುಂದಾಗಿದ್ದರು.
ಆದರೆ ರಾಜ್ಯದಲ್ಲಿನ ಕೈಗಾರಿಕಾ ಇಲಾಖೆಯ ಉದ್ಯಮಿ ಸ್ನೇಹಿ ವಾತಾವರಣದ ಬಗ್ಗೆ ಮಾಹಿತಿ ನೀಡಿದ ಬಳಿಕ .50 ಸಾವಿರ ಕೋಟಿ ಬಂಡವಾಳ ಹೂಡಲು ಸಿದ್ಧವಾಗಿದ್ದಾರೆ. ಈ ಬಗ್ಗೆ ಇನ್ನಷ್ಟು ಚರ್ಚೆ ಮಾಡಿ ಜಿಮ್‌ನಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದರು. ಪ್ರತಿಯೊಂದು ಕೈಗಾರಿಕೆ ಸ್ಥಾಪನೆಗೆ ಸರ್ಕಾರದಿಂದ ಸಾಕಷ್ಟು ಸಹಕಾರ ದೊರೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಕೈಗಾರಿಕಾ ನಿವೇಶನ ಖರೀದಿಗೆ ಶೇಕಡ 75ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಹೀಗಾಗಿ ಉದ್ಯಮಿಗಳು ಸಣ್ಣ ಉದ್ಯಮಕ್ಕಿಂತ ಬೃಹತ್ ಕೈಗಾರಿಕಾ ಸ್ಥಾಪನೆ ಮಾಡುವ ಗುರಿ ಹೊಂದಬೇಕು ಎಂದು ಹೇಳಿದರು.
ಕೆಜಿಎಫ್‌ನ ಬೆಮೆಲ್ ಕಾರ್ಖಾನೆ ಮಾರಾಟ ಇಲ್ಲ: ಸಚಿವ ಮುರುಗೇಶ್ ನಿರಾಣಿ
ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ. ಕ್ಲಸ್ಟರ್ ಸ್ಥಾಪನೆಯ ಪ್ರಕ್ರಿಯೆ ನಡೆಯುತ್ತಿದೆ ಎಂದು ನುಡಿದ ಅವರು, ಎಫ್‌ಎಂಸಿಜಿ ಕ್ಲಸ್ಟರ್ ಶೆಟ್ಟರ್ ಅವರ ಕನಸಿನ ಕೂಸು. ಇದರಿಂದ ಈ ಭಾಗದ ಅಭಿವೃದ್ಧಿ, ನಿರುದ್ಯೋಗ ನಿವಾರಣೆಯಾಗಲಿದೆ ಎಂದು ತಿಳಿಸಿದರು. ಬೆಂಗಳೂರಲ್ಲಿ ನ.2ರಿಂದ 4ರ ವರೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುವುದು. ಇದಕ್ಕಾಗಿ ತಯಾರಿ ಭರದಿಂದ ನಡೆದಿದೆ. ಹೆಚ್ಚಿನ ಬಂಡವಾಳ ಹೂಡಿಕೆ ಗುರಿ ಹೊಂದಲಾಗಿದೆ. ಇನ್ನು ಏಪ್ರಿಲ್ ಮೊದಲ ವಾರ ಬೆಳಗಾವಿಯಲ್ಲಿ, 3 ವಾರದಲ್ಲಿ ಮೈಸೂರಲ್ಲಿ ‘ಉದ್ಯಮಿಯಾಗು’ ಕಾರ್ಯಕ್ರಮ ನಡೆಸುತ್ತಿದ್ದೇವೆ. ಅದರಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಆಹ್ವಾನ ನೀಡಿದರು.
ಕೈಗಾರಿಕೆಗಳಿಗೆ ಕಮ್ಮಿ ದರದ ವಿದ್ಯುತ್ ಪೂರೈಕೆಗೆ ಕ್ರಮ: ಕೈಗಾರಿಕೆಗಳಿಗೆ ವಿದ್ಯುತ್ ಕಡಿಮೆ ದರದಲ್ಲಿ ಕೊಡಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯುತ್ ಉತ್ಪಾದಕರು ಹಾಗೂ ಉದ್ಯಮಿಗಳನ್ನು ಒಂದೇ ವೇದಿಕೆಗೆ ತಂದು ಕಡಿಮೆ ದರದಲ್ಲಿ ನೇರವಾಗಿ ಉದ್ಯಮಗಳಿಗೆ ವಿದ್ಯುತ್ ಪೂರೈಸಲು ಸರ್ಕಾರ ಮುಂದಾಗಿದೆ. ಇದು ಯಶಸ್ವಿಯಾದರೆ ಈಗಿನ ದರಕ್ಕಿಂತ ಅರ್ಧದಷ್ಟುಕಡಿಮೆ ದರಕ್ಕೆ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗಲಿದೆ ಎಂದು ನಿರಾಣಿ ಹೇಳಿದರು.
Kannadigas Industries Priority: ಕನ್ನಡಿಗರಿಗೆ ಆದ್ಯತೆ ನೀಡದ ಕೈಗಾರಿಕೆಗಳಿಗೆ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ
ಕಿತ್ತೂರು ಬಳಿ ಅಂತಾರಾಷ್ಟ್ರೀಯ ಏರ್‌ಪೋರ್ಟ್ ಸ್ಥಾಪನೆಗೆ ಯತ್ನ: ಸದ್ಯ ಇರುವ ಬೆಳಗಾವಿ, ಹುಬ್ಬಳ್ಳಿ ವಿಮಾನ ನಿಲ್ದಾಣಗಳನ್ನು ಉಳಿಸಿಕೊಂಡು ಕಿತ್ತೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೂ ಪ್ರಯತ್ನಿಸಲಾಗುತ್ತಿದೆ. ಇದರಿಂದ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಅನುಕೂಲವಾಗಲಿದೆ ಎಂದ ನಿರಾಣಿ, ಖಾನಾಪುರ ಬಳಿ ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ ಅಲ್ಲಿ 1000 ಎಕರೆ ಭೂಸ್ವಾಧೀನ ಪಡಿಸಲಾಗುವುದು. ಇಲ್ಲಿನ ತಡಸ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೊಸ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಭೂಸ್ವಾಧೀನ ಪಡಿಸಿಕೊಳ್ಳಲಾಗುವುದು. ಈ ಮೂಲಕ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲಾಗುವುದು ಎಂದು ತಿಳಿಸಿದರು.