
ಗದಗ (ಫೆ. 10): ಇಂದು ರಾಜ್ಯದಲ್ಲಿ ಅನ್ನದಾತನಿಗೆ ಹೆಣ್ಣು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಕರನ್ನು ವಿವಾಹವಾಗಲು ಯುವತಿಯರು ಮತ್ತು ಅವರ ಪೋಷಕರು ಹಿಂದೇಟು ಹಾಕುತ್ತಿರುವ ಬಗ್ಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಸಿದ್ದನಕೊಳ್ಳದ ಡಾ ಶಿವಕುಮಾರ್ ಸ್ವಾಮೀಜಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಹುಣಸಿಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ ಶಿವಕುಮಾರ್ ಸ್ವಾಮೀಜಿಗಳು, ಸರ್ಕಾರಕ್ಕೆ ಒಂದು ವಿಶೇಷ ಮನವಿ ಮಾಡಿದರು. ಯಾವ ಕುಟುಂಬದವರು ರೈತರಿಗೆ ತಮ್ಮ ಮನೆಯ ಹೆಣ್ಣನ್ನು ಕೊಟ್ಟು ವಿವಾಹ ಮಾಡುತ್ತಾರೋ, ಅಂತಹವರಿಗೆ ಸರ್ಕಾರ 2 ಲಕ್ಷ ರೂಪಾಯಿಗಳ ಸಹಾಯಧನ ನೀಡಬೇಕು ಎಂದು ಮನವಿ ಮಾಡಿದರು. ಕೃಷಿ ಕ್ಷೇತ್ರವನ್ನು ನಂಬಿಕೊಂಡ ಯುವಕರಿಗೆ ಸಾಮಾಜಿಕ ಭದ್ರತೆ ನೀಡಲು ಇದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟರು.
ರೈತರಿಗೆ ಕನ್ಯೆ ಸಿಗದ ಸಮಸ್ಯೆಯ ಬಗ್ಗೆ ತಮ್ಮದೇ ಆದ ನಗೆ ಚಟಾಕಿ ಶೈಲಿಯಲ್ಲಿ ಮಾತನಾಡಿದ ಶ್ರೀಗಳು, ವಿಷಯದ ಗಂಭೀರತೆಯನ್ನು ಸಭೆಯ ಮುಂದಿಟ್ಟರು. ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡುವ ಹುಡುಗರಿಗೆ ಹೆಣ್ಣು ಕೊಡುವುದು ತೀರಾ ಕಡಿಮೆಯಾಗಿದೆ. ಪ್ರತಿಯೊಬ್ಬರೂ ಉದ್ಯೋಗಸ್ಥರನ್ನೇ ಹುಡುಕುತ್ತಿದ್ದಾರೆ. ಇದರಿಂದ ರೈತ ಸಮುದಾಯದ ಯುವಕರು ವಿವಾಹವಾಗದೆ ಉಳಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಳೆಯ ಬೇಡಿಕೆಗೆ ಮತ್ತೆ ಮರುಜೀವ
ಈ ರೀತಿಯ ಬೇಡಿಕೆಯನ್ನು ಇದೇ ಮೊದಲ ಬಾರಿಗೆ ಇಟ್ಟಿದ್ದಲ್ಲ ಎಂದ ಶ್ರೀಗಳು, ಈ ಹಿಂದೆಯೂ ನಾನು ರೈತರಿಗೆ ಕನ್ಯೆ ಕೊಡುವವರಿಗೆ ಸಹಾಯಧನ ನೀಡಬೇಕೆಂದು ಧ್ವನಿ ಎತ್ತಿದ್ದೆ. ಮುಂದಿನ ದಿನಗಳಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು. ವರ ಮತ್ತು ಕನ್ಯೆಯರ ನಡುವಿನ ಈ ಅಸಮಾನತೆಯು ಸಮಾಜದ ಮೇಲೆ ಬೀರಲಿರುವ ದುಷ್ಪರಿಣಾಮಗಳ ಬಗ್ಗೆ ಅವರು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ