ಗ್ರಾಮೀಣ ಬದುಕನ್ನು ಎತ್ತರಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸಲೆಂದೇ ಜನ್ಮ ತಾಳಿರುವ ದೇಶದ ಏಕೈಕ ‘ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ’ಕ್ಕೆ ಕಳೆದ 1 ವರ್ಷದಿಂದ ಸಾರಥಿಯೇ ಇಲ್ಲ!
ಶಿವಕುಮಾರ ಕುಷ್ಟಗಿ
ಗದಗ (ಏ.13): ಗ್ರಾಮೀಣ ಬದುಕನ್ನು ಎತ್ತರಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸಲೆಂದೇ ಜನ್ಮ ತಾಳಿರುವ ದೇಶದ ಏಕೈಕ ‘ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ’ಕ್ಕೆ ಕಳೆದ 1 ವರ್ಷದಿಂದ ಸಾರಥಿಯೇ ಇಲ್ಲ! ಹೌದು. 2024ರ ಮೇನಲ್ಲಿ ಕುಲಪತಿ ವಿಷ್ಣುಕಾಂತ ಚಟಪಲ್ಲಿ ಅವರು ನಿವೃತ್ತಿ ಹೊಂದಿದ್ದು, ಇದುವರೆಗೂ ನೂತನ ಕುಲಪತಿ ನೇಮಕವಾಗಿಲ್ಲ. ಹಾಗಾಗಿ ಕಳೆದೊಂದು ವರ್ಷದಿಂದ ಪ್ರಭಾರ ಕುಲಪತಿಗಳಿಂದಲೇ ಕಾರ್ಯಭಾರ ನಡೆಯುತ್ತಿದೆ. 2017ರಿಂದ 2019ರವರೆಗೆ ಗ್ರಾಮೀಣಾಭಿವೃದ್ಧಿ ವಿವಿಯ ಮೊದಲ ಕುಲಪತಿಯಾಗಿ ಪ್ರೊ. ತಿಮ್ಮೇಗೌಡ, 2020ರಿಂದ 2024ರವರೆಗೆ ಪ್ರೊ.ವಿಷ್ಣುಕಾಂತ ಚಟಪಲ್ಲಿ ಅವರು ಎರಡನೇ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಅನುದಾನ ಕೊರತೆ: ಪ್ರಸ್ತುತ ರಾಜ್ಯದಲ್ಲಿನ ಎಲ್ಲ ವಿವಿಗಳು ಎದುರಿಸುತ್ತಿರುವಂತೆ ಗದಗ ಗ್ರಾಮೀಣಾಭಿವೃದ್ಧಿ ವಿವಿ ಕೂಡ ಅನುದಾನ ಕೊರತೆ ಎದುರಿಸುತ್ತಿದೆ. ಆದರೆ ಇತ್ತೀಚೆಗಷ್ಟೇ ವಿವಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಪಿಂಚಣಿ ಸೇರಿ ವೇತನಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಏನೂ ಇಲ್ಲ. ಸರ್ಕಾರದಿಂದ ವಿವಿಗೆ ಪ್ರತಿ ವರ್ಷ ₹5.5 ಕೋಟಿ ಅನುದಾನ ಬರಬೇಕು. ಆದರೆ, ಬಂದದ್ದೆಲ್ಲ ಅಲ್ಪಸ್ವಲ್ಪ. ಆರ್ಥಿಕ ಸಂಕಷ್ಟ ಕಾಡುತ್ತಿದೆ. ಸದ್ಯ ವಿವಿಯಲ್ಲಿ ಒಟ್ಟು 185 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಅವರಲ್ಲಿ 100ಕ್ಕೂ ಹೆಚ್ಚಿನ ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿದ್ದಾರೆ. ಅವರಲ್ಲಿ ತಾಂತ್ರಿಕ ಸಿಬ್ಬಂದಿಯೊಂದಿಗೆ ಬೋಧಕ ಸಿಬ್ಬಂದಿಯೂ ಇದ್ದಾರೆ. 60 ಜನರು ಮಾತ್ರ ಕಾಯಂ ನೌಕರರು. ಕಳೆದ ಕೆಲವು ತಿಂಗಳಿನಿಂದ ಈ ಸಿಬ್ಬಂದಿ ವೇತನಕ್ಕಾಗಿ ವಿವಿ ಪರದಾಡುತ್ತಿದೆ. ಹಾಗಾಗಿ ವಿವಿ ಸ್ಥಾಪನೆಯ ಉದ್ದೇಶ ಈಡೇರುತ್ತಿಲ್ಲ.
ಇನ್ನೂ ಬೇಸ್ ವಿವಿಗಿಲ್ಲ ಪೂರ್ಣಾವಧಿ ಕುಲಪತಿ: ಶೋಧನಾ ಸಮಿತಿಯಿಂದ 3 ಹೆಸರು ಶಿಫಾರಸು
ಸ್ಥಾಪನೆ ಹಿಂದಿನ ಉದ್ದೇಶ: ಗ್ರಾಮೀಣ ಜನರ ಜೀವನ ಗುಣಮಟ್ಟದಲ್ಲಿ ವ್ಯಾಪಕ ಸುಧಾರಣೆ ಮತ್ತು ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಮರ್ಪಿತವಾದ ಮಾನವ ಸಂಪನ್ಮೂಲಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಸಮಾಜಕ್ಕೆ ಶ್ರೇಷ್ಠತೆಯ ಕೇಂದ್ರವಾಗುವತ್ತ ಕೆಲಸ ಮಾಡುವುದು ವಿಶ್ವವಿದ್ಯಾಲಯದ ದೃಷ್ಟಿಕೋನವಾಗಿದೆ. ಇದರೊಟ್ಟಿಗೆ ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಅಗತ್ಯ ಶಿಕ್ಷಣ ಮತ್ತು ತರಬೇತಿ ಒದಗಿಸುವುದು, ಬಡತನವನ್ನು ಕಡಿಮೆ ಮಾಡಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಪ್ರಜಾಪ್ರಭುತ್ವ ವ್ಯವಸ್ಥೆಗಳ ಮೂಲಕ ಸಮಗ್ರ ಬೆಳವಣಿಗೆಗೆ ಕಾರಣವಾಗುವ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಅಗತ್ಯ ಸೇವೆಗಳನ್ನು ಒದಗಿಸಲು ಜನರಿಗೆ ಅನುವು ಮಾಡಿಕೊಡುವುದು, ಗ್ರಾಮೀಣರು ತಮ್ಮ ಸ್ವಂತ ಯೋಗಕ್ಷೇಮ, ಆರ್ಥಿಕ ಮತ್ತು ಸಾಮಾಜಿಕ ಮತ್ತು ರಾಜಕೀಯ ಪ್ರಗತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಬಲತೆ ಸೃಷ್ಟಿ ಮಾಡುವುದು ಮೂಲ ಉದ್ದೇಶವಾಗಿದೆ. ಇತ್ತೀಚೆಗಷ್ಟೇ ಈ ವಿಶ್ವವಿದ್ಯಾಲಯನ್ನು ಮಹಾತ್ಮಗಾಂಧಿ ಅವರ ಗ್ರಾಮ ಸ್ವರಾಜ್ ದೃಷ್ಟಿಕೋನಕ್ಕೆ ಅನುಗುಣವಾಗಿ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ (ಗ್ರಾಮೀಣ ಬೇರು, ಜಾಗತಿಕ ಮೇರು) ಎಂದು ನಾಮಕರಣ ಮಾಡಲಾಗಿದೆ.
1000 ವಿದ್ಯಾರ್ಥಿಗಳು: ವಿವಿಯಲ್ಲಿ ಸದ್ಯ 5 ಅಧ್ಯಯನ ಶಾಖೆಗಳಲ್ಲಿ 10 ಸ್ನಾತಕೋತ್ತರ ಮತ್ತು 5 ಪದವಿಪೂರ್ವ ಕಾರ್ಯಕ್ರಮಗಳು, 1 ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮ ಮತ್ತು 2 ಡಿಪ್ಲೊಮಾಗಳು ಮತ್ತು 1 ಪ್ರಮಾಣಪತ್ರ ಕೋರ್ಸ್ ನಡೆಯುತ್ತಿವೆ. ಆರಂಭದಲ್ಲಿ 100ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ 7 ವರ್ಷಗಳ ಅಲ್ಪಾವಧಿಯಲ್ಲಿ 1000ಕ್ಕಿಂತ ಹೆಚ್ಚಾಗಿದೆ.
ಈಗ ಕರ್ನಾಟಕದಿಂದ ಮಾತ್ರವಲ್ಲ, ಭಾರತದ ಇತರ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 2023-24ರ ಶೈಕ್ಷಣಿಕ ವರ್ಷದಲ್ಲಿ 1000ಕ್ಕೂ ಹೆಚ್ಚು ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರವೇಶ ಪಡೆದಿದ್ದು. ವಿಶ್ವವಿದ್ಯಾನಿಲಯವು ಶೈಕ್ಷಣಿಕ, ಸಂಶೋಧನೆ, ಸಮುದಾಯ, ತರಬೇತಿಗಳ ಮೇಲೆ ಕೇಂದ್ರೀಕರಿಸಿ 40 ವಿಭಿನ್ನ ಯೋಜನೆಗಳು, ಚಟುವಟಿಕೆಯಲ್ಲಿ ಕೆಲಸ ಮಾಡುತ್ತಿದೆ.
ಭೌತಿಕ ಅಭಿವೃದ್ಧಿ: ಪ್ರಸ್ತುತ ರಾಜ್ಯಗಳಲ್ಲಿರುವ ಇನ್ನುಳಿದ ವಿಶ್ವವಿದ್ಯಾಲಯಗಳಿಗೆ ಹೋಲಿಕೆ ಮಾಡಿದಲ್ಲಿ ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಸಾಕಷ್ಟು ಭೌತಿಕ ಅಭಿವೃದ್ಧಿ ಕಂಡಿದೆ. ₹100 ಕೋಟಿಗೂ ಅಧಿಕ ಅನುದಾನದಲ್ಲಿ ಕಚೇರಿ ಕಟ್ಟಡ, ಟ್ರೈನಿಂಗ್ ಸೆಂಟರ್, ವಿದ್ಯಾರ್ಥಿಗಳ ವಾಸಕ್ಕಾಗಿ ಹಾಸ್ಟೆಲ್‌ಗಳು, ಕುಲಪತಿ, ಪ್ರಮುಖ ಸಿಬ್ಬಂದಿ ನಿವಾಸಗಳು ನಿರ್ಮಾಣವಾಗಿವೆ. ವಿವಿಯ ಮುಖ್ಯ ಕಟ್ಟಡ ನಿರ್ಮಾಣ ಕಾಮಗಾರಿಯೂ ಪ್ರಾರಂಭವಾಗಿದೆ.
ಶುಕ್ರವಾರ ಖಾದಿ ದಿನ: ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ಶುಕ್ರವಾರ ಖಾದಿ ದಿನವನ್ನು ಆಚರಿಸಲಾಗುತ್ತದೆ. ಆ ದಿನ, ವಿಶ್ವವಿದ್ಯಾಲಯದ ಎಲ್ಲ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಖಾದಿ ಬಟ್ಟೆಗಳನ್ನು ಧರಿಸುವುದು ಇಲ್ಲಿನ ಪ್ರಮುಖ ವಿಶೇಷತೆಯಾಗಿದೆ.
ದೇಸಿ ಅಂಗಡಿ: ಕೆವಿಐಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು, ಸಹಕಾರಿ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ, ಈ ಸಂಸ್ಥೆಗಳು ತಯಾರಿಸಿದ ಉತ್ಪನ್ನಗಳ ಮಾರಾಟ ಉತ್ತೇಜಿಸಲು ವಿಶ್ವವಿದ್ಯಾಲಯದ ರೈತ ಭವನ ಸಂಕೀರ್ಣದಲ್ಲಿ ದೇಸಿ ಅಂಗಡಿ ಪ್ರಾರಂಭಿಸಲಾಗಿದ್ದು, ಇಲ್ಲಿ ಖಾದಿ ವಸ್ತುಗಳು ಸೇರಿದಂತೆ ದೇಸಿ ವಸ್ತುಗಳು ಸಿಗುತ್ತವೆ.
ಸಬರಮತಿ ಆಶ್ರಮ: ವಿವಿ ಆವರಣದಲ್ಲಿ ಸಬರಮತಿ ಆಶ್ರಮ ನಿರ್ಮಾಣ ಮಾಡಲಾಗಿದ್ದು, ದಕ್ಷಿಣ ರಾಜ್ಯಗಳಲ್ಲಿಯೇ ಏಕೈಕ ಆಶ್ರಮ ಇದಾಗಿದೆ. ಮಹಾತ್ಮ ಗಾಂಧಿ ಬಳಸಿದ ವಸ್ತುಗಳೊಂದಿಗೆ ಗಾಂಧೀಜಿ ಅವರು ಸ್ಥಾಪಿಸಿ, ವಾಸವಿದ್ದ ಸಬರಮತಿ ಆಶ್ರಮವನ್ನು ಕರ್ನಾಟಕದಲ್ಲಿಯೇ ನೋಡುವ ಅವಕಾಶ ಕಲ್ಪಿಸಲಾಗಿದೆ.
ಸ್ವಾಮಿ ವಿವೇಕಾನಂದರ ಪುತ್ಥಳಿ: ಇದೇ ವಿವಿ ಆವರಣದಲ್ಲಿಯೇ ದೇಶದಲ್ಲಿಯೇ ಅತಿ ಎತ್ತರದ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿ ಸ್ಥಾಪನೆ ಮಾಡಲಾಗಿದ್ದು, ಕೋಲ್ಕತ್ತಾದ ರಾಮಕೃಷ್ಣ ಆಶ್ರಮ, ಗ್ರಾಮೀಣಾಭಿವೃದ್ಧಿ ವಿವಿ ಸಹಯೋಗದಲ್ಲಿ ಭವ್ಯವಾದ ಮೂರ್ತಿ ನೋಡುಗರನ್ನು ಆಕರ್ಷಿಸುತ್ತಿದೆ. ನಾಗಾವಿ ಹಚ್ಚ ಹಸುರಿನ ಗುಡ್ಡದ ಮೇಲೆ ನಿರ್ಮಾಣವಾಗಿರುವ ವಿವಿ, ಅಲ್ಲಿನ ಸಬರಮತಿ ಆಶ್ರಮ ಹಾಗೂ ವಿವೇಕಾನಂದರ ಪುತ್ಥಳಿಂದಾಗಿ ವಿವಿ ಆವರಣ ಇಂದು ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದೆ.
ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕಾಯಂ ಸಿಬ್ಬಂದಿ ಕೊರತೆ!
ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಅತ್ಯಂತ ಕಡಿಮೆ ಅವಧಿಯಲ್ಲಿ ಅಗಾಧವಾದ ಸಾಧನೆ ಮಾಡಿದ್ದು, ದೇಶ ಮಟ್ಟದಲ್ಲಿ ನಮ್ಮ ವಿಶ್ವವಿದ್ಯಾಲಯವನ್ನು ಗುರುತಿಸುತ್ತಾರೆ. ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಹಲವಾರು ವಿದೇಶಿ ಸಂಸ್ಥೆಗಳು ಇಲ್ಲಿಗೆ ಬಂದು ಅಧ್ಯಯನ ನಡೆಸಿವೆ. 1 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಅಭಿವೃದ್ಧಿಯಾಗಿದ್ದು, ವಿವಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಶೈಕ್ಷಣಿಕ ಗುಣಮಟ್ಟದ ಹೆಚ್ಚಳದಲ್ಲಿ ಅತ್ಯುನ್ನತವಾದ ಸಾಧನೆ ಮಾಡಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಗ್ರಾಮೀಣ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲು ವಿವಿ ಕೆಲಸ ಮಾಡಲು ಅಣಿಯಾಗಿದೆ.
- ಡಾ. ಸುರೇಶ ವಿ. ನಾಡಗೌಡ, ಪ್ರಭಾರ ಕುಲಪತಿ