ಇಲ್ಲೆಲ್ಲಾ ಜವಳಿ ಪಾರ್ಕ್ ಬರ್ತದ, ಗಾರ್ಮೆಂಟ್ಸ್ ಕಂಪನಿಗಳು ಶುರು ಆಗ್ತಾವ.. ಕೋಕೋ ಕೋಲಾದವರೂ ಇಲ್ಲೇ ಫ್ಯಾಕ್ಟರಿ ಹಾಕ್ತಾರ, ನಿಮಗೆಲ್ಲಾ ಒಳ್ಳೇದಾಗ್ತದ, ನಿಮಗ- ನಿಮ್ ಮಕ್ಕಳಿಗೆ ನೌಕರಿ, ಸಾಲಿ, ದವಾಖಾನಿ ಎಲ್ಲಾ ಆಗ್ತದ..
ಆನಂದ್ ಎಂ. ಸೌದಿ
ಯಾದಗಿರಿ (ಏ.13): ಇಲ್ಲೆಲ್ಲಾ ಜವಳಿ ಪಾರ್ಕ್ ಬರ್ತದ, ಗಾರ್ಮೆಂಟ್ಸ್ ಕಂಪನಿಗಳು ಶುರು ಆಗ್ತಾವ.. ಕೋಕೋ ಕೋಲಾದವರೂ ಇಲ್ಲೇ ಫ್ಯಾಕ್ಟರಿ ಹಾಕ್ತಾರ, ನಿಮಗೆಲ್ಲಾ ಒಳ್ಳೇದಾಗ್ತದ, ನಿಮಗ- ನಿಮ್ ಮಕ್ಕಳಿಗೆ ನೌಕರಿ, ಸಾಲಿ, ದವಾಖಾನಿ ಎಲ್ಲಾ ಆಗ್ತದ.. ಆರಾಂ ಜಿಂದಗೀ ಮಾಡ್ಬಹುದು ಅಂತ್ಹೇಳಿ ನಮ್ ಭೂಮಿ ಬರಿಸಿಕೊಂಡ್ರು.. ಈಗ ನೋಡಿದ್ರ ಕೆಮಿಕಲ್ ಕಂಪನಿಗಳು ನಮ್ಮನ್ನೆಲ್ಲಾ ಬಲಿ ಪಡೀಲಿಕತ್ತಾವ, ಹೇಳಿದ್ದೊಂದು ಮಾಡಿದ್ದೊಂದು.. ನಮ್ ಪರಿಸ್ಥಿತಿ ಕೈ ಕಟ್ಟಿ ಹಗ್ಗಾ ಕಟ್ಟಿಸಿಕೊಂಡ್ಹಾಂಗ ಆಗೇದ..!
-ಕಡೇಚೂರು ಗ್ರಾಮದ ನಿವೃತ್ತ ಸರ್ಕಾರಿ ಉದ್ಯೋಗಿ ತಿಪ್ಪಣ್ಣ ಹೀಗೆ ಹೇಳುವಾಗ, ಅವರ ಮುಖದಲ್ಲಿ ಆತಂಕ, ದುಗುಡ ಎದ್ದು ಕಾಣುತ್ತಿತ್ತು. ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ನಿಮ್ಮ ನಿಮ್ಮ ಜಮೀನುಗಳನ್ನು ನೀಡಿದರೆ ನಿಮ್ಮ ಬದುಕು ಹಸನಾಗುತ್ತದೆ, ಮಕ್ಕಳು, ಮೊಮ್ಮಕ್ಕಳು, ನಿಮ್ಮಿಡೀ ಪೀಳಿಗೆ ಉದ್ಧಾರಾಗುತ್ತದೆ, ಕೈತುಂಬಾ ದುಡ್ಡೂ ಬರುತ್ತದೆ ಎಂದು ಅಂಗೈಲಿ ಅರಮನೆ ತೋರಿಸಿ ನಮ್ಮಿಂದ ಭೂಸ್ವಾಧೀನಕ್ಕೆ ಸಹಿ ಹಾಕಿಸಿಕೊಂಡರು. ಆದರೆ, ಈಗ ನೋಡಿ, ಕೆಮಿಕಲ್ ಕಂಪನಿಗಳದ್ದೇ ಅಟ್ಟಹಾಸ. ಕೆಟ್ಟ ವಾಸನೆಯಿಂದ ನಮ್ಮೂರ ಜನ ಉಸಿರಾಡಲೂ ಕಷ್ಟ ಪಡುತ್ತಿದ್ದಾರೆ. ಹದಿಹರೆಯದಲ್ಲೇ ಮೈತುಂಬಾ ರೋಗಗಳು ಬಾಧಿಸುತ್ತಿವೆ. ನಮ್ಮದಿನ್ನು, ಮುಗಿಯಿತು ನಿಜ. ಆದ್ರೆ, ಮುಂದಿನ ಪೀಳಿಗೆ ಬದುಕೋದಾದ್ರೂ ಹೇಗೆ..? ಎಂದು ನೋವು ತೋಡಿಕೊಳ್ಳುತ್ತಾರೆ.
ಹದಗೆಟ್ಟ ವಾತಾವರಣ: ಶ್ವಾಸಕೋಶ, ಹೃದಯಕ್ಕೆ ಎಫೆಕ್ಟ್!
ಕೋಕೋ ಕೋಲಾ, ಜವಳಿ ಪಾರ್ಕ್‌ನಂತಹ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ, ನೀರು, ಆಶ್ರಯ, ಶಿಕ್ಷಣ ಮುಂತಾದ ವ್ಯವಸ್ಥೆಗಳನ್ನು ನೀಡುವುದಾಗಿ ಹೇಳಿ, ದಶಕದ ಹಿಂದೆ 20212-13 ರಲ್ಲಿ 3232.22 ಎಕರೆ ಕೃಷಿ ಜಮೀನನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಸುಮಾರು 2735 ಎಕರೆ ಜಮೀನನ್ನು ಕಡೇಚೂರು ಭಾಗದ ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಬಾಡಿಯಾಳ ರೈತರಿಂದ 496 ಹಾಗೂ ವಿವಿಧೆಡೆ ಸೇರಿದಂತೆ ಒಟ್ಟು 3232.22 ಎಕರೆ ಭೂಮಿ ಕೈಗಾರಿಕಾ ಪ್ರದೇಶಕ್ಕೆಂದು ಮೀಸಲಾಗಿದೆ. ಪ್ರತಿ ಎಕರೆಗೆ ಆಗ 7.5 ಲಕ್ಷ ರು.ಗಳ ಪರಿಹಾರ ನೀಡಲಾಗಿದೆ. ಭೂಮಿ ಕೊಟ್ಟಿದ್ದ ಉದ್ದೇಶವೇ ಬೇರೆಯಾಗಿದ್ದರೆ, ಅಲ್ಲಾಗಿರುವುದೇ ಬೇರೆ ಬೇರೆ. ನಂತರ, ಮತ್ತೇ ಬಲ್ಕ್ ಫಾರ್ಮಾ ಡ್ರಗ್ ಕಂಪನಿಗಳ ಸ್ಥಾಪನಗೆಂದು ಹೆಚ್ಚುವರಿಯಾಗಿ 2021 ರಲ್ಲಿ 3269 ಎಕರೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆಯನ್ನೂ ಹೊರಡಿಸಿದೆ. ಇದು ಈ ಭಾಗದ ರೈತರ ಅಳಿವಿಗೆ ಮತ್ತೊಂದು ಕಾರಣವಾದಂತಿದೆ.
"ಚೆನ್ನೈ, ಹೈದರಾಬಾದ್, ಮಹಾರಾಷ್ಟ್ರ ಮುಂತಾದ ಭಾಗಗಳಿಂದ ಇಲ್ಲಿ ಲಾರಿಗಟ್ಟಲೇ ಕಸಗಳನ್ನು ತಂದು ಹಾಕ್ತಾರೆ. ನಮಗೆಲ್ಲ ಈ ವಾತಾವರಣದಲ್ಲಿ ಬದುಕೋದು ಕಷ್ಟವಾಗಿದೆ. ನಮಗೆಲ್ಲ ಕಿಣಿಕೇರಿ ಹತ್ತಿರ ಹೋಗಿ ಅಂತಾರೆ, ಇಡೀ ಊರಿಗೂರೇ ಶಿಫ್ಟ್ ಮಾಡ್ತೀವಿ ಅಂತಿದ್ದಾರೆ, ಮನೆ- ಹೊಲ ಗದ್ದೆಗಳನ್ನು ಬಿಟ್ಟು ಎಲ್ಲಿಗೆ ಹೋಗಬೇಕು ಎನ್ನುವ ಗ್ರಾಮದ ಹಿರಿಯ ಬಸವರಾಜಪ್ಪ, ನಮ್ ಪೀಳಿಗೆ ಹೋಗಲಿ, ಮುಂದೆ ನಮ್ ಮಕ್ಕಳ ಪೀಳಿಗೆ ಗತಿ ಏನು ಅಂತ ಆತಂಕ ವ್ಯಕ್ತಪಡಿಸಿದರು.
ಗಾರ್ಮೆಂಟ್ ಫ್ಯಾಕ್ಟರಿ ತರ್ತೀವಿ ಅಂತ್ಹೇಳಿ ಕೆಮಿಕಲ್ ಕಂಪನಿಗಳನ್ನು ತಂದಾಕಿದ್ರು. ಉಸಿರಾಡಲು ಗಾಳಿ- ವಾಸನೆ ನಮಗೆಲ್ಲ ರೋಗಗಳು ಬರ್ತಿವೆ. ಕಂಪನಿ ಶುರು ಆದ್ರೆ ಮಕ್ಕಳಿಗೆ ಮೊಮ್ಮಕ್ಕಳಿಗೆ ನೌಕರಿ ಕೊಡ್ತೀವಿ ಅಂತ ಹೇಳಿದ್ದರು. ಅವೆಲ್ಲ ಸುಳ್ಳಾಗಿವೆ. ಇಂತಹ ಕಂಪನಿಗಳು ಬಂದ್ ಆಗಬೇಕು. ಅವರು ಹೇಳಿದಂತೆ ಗಾರ್ಮೆಂಟ್ ತರಲಿ. -
-ಹೊನ್ನಪ್ಪ, ಕಡೇಚೂರು ಗ್ರಾಮಸ್ಥ.
ಕೆಮಿಕಲ್ ದುರ್ನಾತದ ಎಫೆಕ್ಟ್: ಮೂಗಿಗೆ ಬಟ್ಟೆ ಕಟ್ಕೊಂಡೇ ಪಾಠ ಹೇಳ್ಬೇಕು, ಮಕ್ಳು ಕೇಳ್ಬೇಕು..!
ಕಡೇಚೂರಿನಲ್ಲಿ ಗಾರ್ಮೆಂಟ್ ಫ್ಯಾಕ್ಟರಿ, ಕೊಕಾ ಕೋಲಾನಂತಹ ಒಳ್ಳೊಳ್ಳೇ ಫ್ಯಾಕ್ಟರಿಗಳನ್ನು ಹಾಕಿ ನಮಗೆಲ್ಲಾ ಅನುಕೂಲ ಮಾಡ್ತಿವಿ ಅಂತ್ಹೇಳಿ 3232 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದರು. ಈಗ ನೋಡಿದರೆ, ಐದಾರು ರಾಜ್ಯಗಳ ಹೊಲಸು, ವಾಸನೆ ವಿಷಗಾಳಿಯಿಂದಾಗಿ ರೋಗ- ರುಜಿನಗಳಿಗೆ ಬಲಿಯಾಗಿ ನಮ್ಮ ಜನರು ಸಾಯ್ತಿದ್ದಾರೆ.
- ವಿಶ್ವನಾಥ್, ಗ್ರಾಮ ಪಂಚಾಯ್ತಿ ಸದಸ್ಯ, ಕಡೇಚೂರು.