
ಬೆಂಗಳೂರು (ಏ.13): ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತ (ಕೆಎಸ್‌ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪದಲ್ಲಿ ಸಿಲುಕಿದ್ದ ನಿಗಮದ ಮಾಜಿ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಪ್ರಶಾಂತ್ ಮಾಡಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಮಾಡಿದೆ.
ಬೆಂಗಳೂರು ಜಲಮಂಡಳಿ(ಬಿಡಬ್ಲ್ಯುಎಸ್‌ಎಸ್‌ಬಿ)ಯಲ್ಲಿ ಹಣಕಾಸು ಸಲಹೆಗಾರರಾಗಿದ್ದ ಪ್ರಶಾಂತ್ ಮಾಡಾಳ್, ಕೆಎಸ್‌ಡಿಎಲ್‌ಗೆ ಸುಗಂಧ ದ್ರವ್ಯ ಸಾಮಾಗ್ರಿಗಳನ್ನು ಪೂರೈಸುವವರಿಂದ 40 ಲಕ್ಷ ರು. ಲಂಚ ಪಡೆದಿದ್ದಾರೆಂಬ ಆರೋಪ ಎದುರಿಸುತ್ತಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಶಾಂತ್ ಅವರು ಲಂಚದ ಹಣವನ್ನು ಸ್ವೀಕರಿಸಿದ್ದಾರೆ ಎಂಬ ವಾದವನ್ನು ಒಪ್ಪಬಹುದಾದರೂ, ಹಣಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ. ಕೇವಲ ಹಣ ವಶಪಡಿಸಿಕೊಂಡಿರುವ ಆಧಾರದಲ್ಲಿಯೇ ಲಂಚದ ಆರೋಪ ಹೊರಿಸುವುದು ಸರಿಯಲ್ಲ. ಅರ್ಜಿದಾರರ ವಿರುದ್ಧ ಆರೋಪ ಹೊರಿಸಲು ಯಾವುದೇ ಆಧಾರವಿಲ್ಲ ಎಂದು ಅಭಿಪ್ರಾಯಪಟ್ಟು ಆರೋಪ ಮುಕ್ತಗೊಳಿಸಿದೆ.
2023ರ ಮಾ.2ರಂದು ಕ್ರೆಸೆಂಟ್ ರಸ್ತೆಯ ಯೂನಿಸ್ ಕ್ವೇರ್ ಬಿಲ್ಡರ್ಸ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡು 40 ಲಕ್ಷ ರು. ವಶಪಡಿಸಿಕೊಂಡಿದ್ದರು. ದೂರುದಾರ ಶ್ರೇಯಸ್ ಕಶ್ಯಪ್, ಕೆಎಸ್‌ಡಿಎಲ್‌ಗೆ ಸುಗಂಧ ದ್ರವ್ಯ ಸಾಮಗ್ರಿಗಳನ್ನು ಪೂರೈಸಲು ಟೆಂಡರ್ ಹಂಚಿಕೆ, ಖರೀದಿ ಆದೇಶಕ್ಕಾಗಿ ಲಂಚ ಸ್ವೀಕರಿಸಿದ್ದರು ಎಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡು ಹಣ ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಪ್ರಶಾಂತ್ ಮಾಡಾಳ್ ಇದೀಗ ದೋಷಮುಕ್ತರಾಗಿದ್ದಾರೆ.
ಭೋವಿ ನಿಗಮದ ಮಾಜಿ ಎಂಡಿ ಲೀಲಾವತಿ ಅರೆಸ್ಟ್: ವಿಚಾರಣೆ ಬಳಿಕ ಬಂಧಿಸಿದ ಇ.ಡಿ. ತಂಡ
- ಕರ್ನಾಟಕ ಸಾಬೂನು, ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ
- 2023ರ ಮಾ.2ರಂದು ಮಾಡಾಳ್ ಪುತ್ರ ಪ್ರಶಾಂತ್ ಮೇಲೆ ದಾಳಿ ನಡೆಸಿದ್ದ ಲೋಕಾ
- ನಿಗಮಕ್ಕೆ ಸುಗಂಧ ದ್ರವ್ಯ ಪೂರೈಸುವವರಿಂದ 40 ಲಕ್ಷ ಪಡೆವಾಗ ಸಿಕ್ಕಿಬಿದ್ದಿದ್ದ ಪ್ರಶಾಂತ್
- ಹಣ ಸ್ವೀಕರಿಸಿರುವುದನ್ನು ಒಪ್ಪಬಹುದು, ಆದರೆ ಬೇಡಿಕೆ ಇಟ್ಟಿದ್ದಕ್ಕೆ ಯಾವುದೇ ಸಾಕ್ಷ್ಯ ಇಲ್ಲ
- ಹಣ ವಶಕ್ಕೆ ಪಡೆದ ಆಧಾರದಲ್ಲಿ ಆರೋಪ ಹೊರಿಸುವುದು ಸರಿಯಲ್ಲ ಎಂದು ಕೋರ್ಟ್ ತೀರ್ಪು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ